ಪ್ರವೀಣ್ ನೆಟ್ಟಾರು ಮನೆಯವರಿಗೆ ಮಾಜಿ ಮುಖ್ಯಮಂತ್ರಿ ಹೆಚ್‌ಡಿಕೆ ಸಾಂತ್ವಾನ

0

ಮಸೂದ್ ಕೊಲೆಯನ್ನು, ಪ್ರವೀಣ್ ಕೊಲೆಯನ್ನು ಒಂದೇ ತರ ನೋಡಬೇಡಿ…
ಅವರ ಮನೆಯವರಿಗೂ ನ್ಯಾಯ ಕೊಡಿಸಿ, ನಮಗೂ ನ್ಯಾಯ ಕೊಡಿಸಿ ಎಂದ ಪ್ರವೀಣ್ ಪತ್ನಿ

ನೀವು ಇಲ್ಲಿಗೂ ಬರ್ತೀರಿ, ಮಸೂದ್ ಮನೆಗೂ ಹೋಗ್ತೀರಿ. ಆದರೆ ಎರಡೂ ಕೊಲೆಯನ್ನು ಒಂದೇ ತರ ನೋಡ್ಬೇಡಿ. ಮಸೂದ್ ಮನೆಯವರಿಗೂ ನ್ಯಾಯ ಕೊಡಿಸಿ, ನಮಗೂ ನ್ಯಾಯ ಕೊಡಿಸಿ ಎಂದು ಹತ್ಯೆಗೀಡಾದ ಪ್ರವೀಣ್ ಪತ್ನಿ ನೂತನ ಅವರು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಮುಂದೆ ಹೇಳಿದ್ದಾರೆ.

ಮನೆಯವರಿಗೆ ಸಾಂತ್ವಾನ ಹೇಳಲು ಬಂದ ಹೆಚ್.ಡಿ. ಕುಮಾರಸ್ವಾಮಿಯವರೊಂದಿಗೆ ಈ ಮಾತು ಹೇಳಿದ ನೂತನ ಅವರು, ನನ್ನ ಪತಿಯ ಹಂತಕರಿಗೆ ಗಲ್ಲು ಶಿಕ್ಷೆ ಕೊಡಿ. ಎನ್‌ಕೌಂಟರ್ ಬೇಕಾದರೂ ಮಾಡಿ. ವಿರೋಧ ಪಕ್ಷದವರಾಗಿ ನೀವೂ ಇದಕ್ಕೆ ಸಹಕಾರ ನೀಡಿ ಎಂದು ಹೇಳಿದರು.
ಇಂತಹ ಕೊಲೆಗಳು ಆಗುವುದು ಖಂಡನೀಯ. ಹರ್ಷ ಕೊಲೆ ಪ್ರಕರಣದ ಆರೋಪಿಗಳು ಜೈಲಲ್ಲಿ ಆರಾಮವಾಗಿದ್ದಾರೆ ಎಂದು ಹೆಚ್‌ಡಿಕೆ ಹೇಳಿದಾಗ, ಅದಕ್ಕೆ ಅವಕಾಶ ಮಾಡಿಕೊಡುವವರು ರಾಜಕಾರಣಿಗಳೇ ಅಲ್ವಾ ಸರ್? ಎಂದು ನೂತನ ಕೇಳಿದರು. ನಾನು ಅಂತವನಲ್ಲ ತಂಗಿ ಎಂದು ಕುಮಾರಸ್ವಾಮಿ ಹೇಳಿದಾಗ, ನಿಮ್ಮನ್ನು ಹೇಳಿದ್ದಲ್ಲ ಸರ್, ಎಲ್ಲಾ ರಾಜಕೀಯದವರಿಗೆ ಹೇಳಿದ್ದು ಎಂದು ನೂತನ ಹೇಳಿದರು.

ಕರಾವಳಿಯ ಕೋಮು ಗಲಭೆ ಒಂದು ದರಿದ್ರ ಮನಸ್ಥಿತಿ. ಪಾಪದ ಹುಡುಗರು ಇದಕ್ಕೆ ಬಲಿಯಾಗ್ತಾ ಇದ್ದಾರೆ. ನಾನು ಅಧಿಕಾರದಲ್ಲಿರುವಾಗ ಇದಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಎಚ್ಚರಿಕೆ ವಹಿಸಿದ್ದೇನೆ. ಈಗಿನ ಸರಕಾರ ಏನು ಕ್ರಮ ತೆಗೆದುಕೊಳ್ಳುತ್ತೆ ಗೊತ್ತಿಲ್ಲ.ಆದರೆ ಮುಂದೆ ಜನ ನಮಗೆ ಆಶೀರ್ವಾದ ಮಾಡಿದರೆ ದ.ಕ. ಜಿಲ್ಲೆಯಲ್ಲಿ ಸಂಪೂರ್ಣ ಶಾಂತಿ ನೆಲೆಸಲು, ಇಂತಹ ಘಟನೆ ಮರುಕಳಿಸದಿರಲು ಕ್ರಮ ವಹಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಸರಕಾರ ಇದರ ತನಿಖೆಯನ್ನು ಎನ್‌ಐಎ ಗೆ ವಹಿಸಿದೆ ನಿಜ. ಆದರೆ ಎನ್‌ಐಎ ಗೆ ವಹಿಸಿದ ಎಷ್ಟೋ ಪ್ರಕರಣಗಳಲ್ಲಿ ನ್ಯಾಯ ಸಿಕ್ಕಿಲ್ಲ ತಂಗಿ ಎಂದು ಕುಮಾರಸ್ವಾಮಿ ಹೇಳಿದರು.
ನನ್ನ ತಂದೆ ಪ್ರಧಾನಮಂತ್ರಿಗಳಾಗಿದ್ದಾಗ ಸಿ.ಎಂ. ಇಬ್ರಾಹಿಂರವರು ಈದ್ಗಾ ವಿವಾದವನ್ನು ಬಗೆಹರಿಸಿ ಶಾಂತಿ ಕಾಪಾಡಿದ್ದರು ಎಂದು ಕುಮಾರಸ್ವಾಮಿ ವಿವರಿಸತೊಡಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿ.ಎಂ. ಇಬ್ರಾಹಿಂರವರು, ನನಗೂ ಹೆಣ್ಣುಮಕ್ಕಳಿದ್ದಾರೆ. ನೀನು ಕೂಡಾ ನನ್ನ ಮಗಳ ಹಾಗೆ. ಇಂತಹ ಸ್ಥಿತಿ ಯಾರಿಗೂ ಬರಬಾರದು ಎನ್ನುತ್ತಾ ಗದ್ಗದಿತರಾದರು.
ಆಗಿದ್ದು ಆಗಿ ಹೋಗಿದೆ. ಇನ್ನು ಈ ರೀತಿ ಆಗಬಾರದು. ನಾನು ಒಬ್ಬಳೇ ಈ ದಾರಿಯಲ್ಲಿ ಹೇಗೆ ನಡೆದು ಬರುವುದು? ನನ್ನನ್ನೂ ತೆಗೆದುಬಿಟ್ಟರೆ ಈ ಮನೆಯವರಿಗೆ ಯಾರಿದ್ದಾರೆ ಎಂದು ನೂತನ ಕೇಳಿದರು.
ಅಪರಾಧಿಗಳಿಗೆ ಗಲ್ಲು ಶಿಕ್ಷೆ ಆಗಲೇಬೇಕು ಎಂದು ತಂದೆ ಶೇಖರ ಪೂಜಾರಿ ಹೇಳಿದರು. ತಾಯಿ ರತ್ನಾವತಿಯವರೂ ಮಗನ ಅಗಲಿಕೆ ನೆನೆಸಿ ಕುಮಾರಸ್ವಾಮಿ ಮುಂದೆ ಕಣ್ಣೀರು ಸುರಿಸಿದರು.
ಸುದೀರ್ಘ ಹೊತ್ತು ಮನೆಯವರೊಂದಿಗೆ ಮಾತನಾಡಿದ ಕುಮಾರಸ್ವಾಮಿಯವರು ಮನೆಯಿಂದ ಪ್ರವೀಣ್ ಸಹೋದರಿಗೆ ಉದ್ಯೋಗ ನೀಡುವ ಭರವಸೆಯನ್ನೂ ನೀಡಿದರು. ಯಾವುದೇ ಸಮಸ್ಯೆ ಇದ್ದರೂ ಖುದ್ದು ನನ್ನನ್ನೇ ಸಂಪರ್ಕಿಸುವಂತೆ ನೂತನ ಅವರಿಗೆ ಹೇಳಿದರು.
ಈ ಮಧ್ಯೆ ಕಲ್ಮಡ್ಕದ ಮತ್ತು ಸುಳ್ಯದ ಕುಟುಂಬವೊಂದಕ್ಕೆ ಕುಮಾರಸ್ವಾಮಿ ಈ ಹಿಂದೆ ನೆರವಾಗಿರುವ ವಿಚಾರವನ್ನು ಮುಖಂಡರಾದ ಜಾಕೆ ಮಾಧವ ಗೌಡ, ಎಂ.ಬಿ.ಸದಾಶಿವ ಪ್ರಸ್ತಾಪಿಸಿದರು.
ವಿಧಾನಪರಿಸತ್ ಸದಸ್ಯರಾದ ಬಿ.ಎಂ.ಫಾರೂಕ್, ಎಸ್.ಎಲ್ ಭೋಜೇಗೌಡ, ಹೆಚ್.ಡಿ.ಕುಮಾರಸ್ವಾಮಿಯವರೊಂದಿಗಿದ್ದರು.
ಪ್ರವೀಣ್ ಅವರ ಮನೆಗೆ ಪ್ರಮುಖ ನಾಯಕರನ್ನು ಹೊರತುಪಡಿಸಿ ಉಳಿದವರಿಗೆ ಪೊಲೀಸರಿಗೆ ತಡೆ ಒಡ್ಡಿದಾಗ ಸ್ವಲ್ಪ ಹೊತ್ತು ವಾಗ್ವಾದ ನಡೆದ ಘಟನೆಯೂ ನಡೆಯಿತು.