ಅಪಾಯದ ಸ್ಥಿತಿಯಲ್ಲಿರುವ ನೇಲ್ಯಮಜಲು – ಕುರುಂಬುಡೇಲು ಕಾಲು ಸೇತುವೆ

0

 

ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ನೇಲ್ಯಮಜಲು-ಕುರುಂಬುಡೇ ಲು ಮತ್ತು ಪುಡ್ಕಜೆ ಸಂಪರ್ಕಿಸುವ ತೋಡಿಗೆ ಅಡ್ಡಲಾಗಿ ನಿರ್ಮಿಸಲಾದ ಕಾಲು ಸಂಕ ಅಪಾಯದ ಸ್ಥಿತಿಯಲ್ಲಿದೆ. ಸೇತುವೆ ತೀರಾ ಹಳೆಯದಾಗಿದ್ದು ಅದರ ಕಬ್ಬಿಣವು ತುಕ್ಕು ಹಿಡಿದು ತುಂಡಾಗಿ ಬೀಳುವ ಪರಿಸ್ಥಿತಿಯಲ್ಲಿದೆ. ಅದರ ಪಕ್ಕದಲ್ಲೇ ಇರುವ ತಡೆಗೋಡೆಯು ಕುಸಿದಿದ್ದು ಸಾರ್ವಜನಿಕರ ಸಂಚಾರಕ್ಕೆ ಕಷ್ಟದ ವಾತಾವರಣ ನಿರ್ಮಾಣವಾಗಿದೆ.

ಸೇತುವೆಯಿಂದ ಶಾಲಾ ಮಕ್ಕಳು,ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ದಿನಂಪ್ರತಿ ಸಂಚರಿಸುತ್ತಾರೆ. ಹಲವು ಮನೆಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿದೆ. ಪಕ್ಕದಲ್ಲಿ ಇರುವ ತಡೆಗೋಡೆಯು ಮೊದಲು ಸ್ವಲ್ಪ ಕುಸಿದಿತ್ತು, ಅದನ್ನು ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿತ್ತು.ಅವರು ಪರ್ಯಾಯ ವ್ಯವಸ್ಥೆಯ ಭರವಸೆಯನ್ನು ಮಾತ್ರ ನೀಡಿದ್ದಾರೆ.ಅದಕ್ಕೆ ಹೆಚ್ಚಿನ ಗಮನ ಕೊಡದ ಕಾರಣ ಈಗ ಸಂಪೂರ್ಣವಾಗಿ ಜರಿದು ಬಿದ್ದಿದೆ.ಕಳೆದ ಮಳೆಗಾಲದಲ್ಲಿ ದಾರಿಯಲ್ಲಿ ಬರುವಾಗ ಒಬ್ಬರು ಕಾಲು ಜಾರಿ ತೋಡಿಗೆ ಬಿದ್ದು ಪ್ರಾಣಾಪಾಯದಿಂದ ಊರವರು ರಕ್ಷಣೆ ಮಾಡಿದರು. ನೂತನ ಸೇತುವೆ ನಿರ್ಮಾಣಕ್ಕೆ ಸಚಿವರಾದ ಎಸ್ ಅಂಗಾರರವರಿಗೆ ಮನವಿಯನ್ನು ಸಲ್ಲಿಸಲಾಗಿದೆ,
ಕೇವಲ ಭರವಸೆಯನ್ನು ಮಾತ್ರ ನೀಡಿದ್ದು ನಂತರ ಯಾವುದೇ ರೀತಿಯ ಪ್ರತಿಕ್ರಿಯೆ ಇಲ್ಲದೆ ಇರುವುದರಿಂದ ಸಾರ್ವಜನಿಕರು ಕಂಗಾಲಾಗಿ ಪ್ರತಿಭಟನೆಯ ಮೊರೆ ಹೋಗಿ ಚುನಾವಣಾ ಬಹಿಷ್ಕಾರದ ಎಚ್ಚರಿಕೆಯನ್ನು ನೀಡಿದ್ದಾರೆಂದು ತಿಳಿದು ಬಂದಿದೆ.