ಕುಕ್ಕೆ ಸುಬ್ರಹ್ಮಣ್ಯಕ್ಕೂ ನುಗ್ಗಿ ಬಂದ ನೆರೆ

0

 

ಎಸ್.ಡಿ.ಆರ್.ಎಫ್., ಎನ್.ಡಿ.ಆರ್.ಎಫ್.‌ ತಂಡಗಳು ದೌಡು

ದೇಗುಲ ಭೇಟಿ ಮುಂದೂಡುವಂತೆ ಉಸ್ತುವಾರಿ ಸಚಿವ, ಡಿ.ಸಿ.‌ ಸೂಚನೆ

ಧಾರಾಕಾರ ಮಳೆಯ ಅಬ್ಬರ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಸಮಸ್ಯೆ ತಂದೊಡ್ಡಿದೆ. ದೇಗುಲಕ್ಕೂ ನೀರು‌ ನುಗ್ಗಿದೆ.


ಸುಬ್ರಹ್ಮಣ್ಯದಲ್ಲಿ ಇಂದು ಸುರಿದ ಬಾರೀ ಮಳೆಯಿಂದಾಗಿ ದರ್ಪಣತೀರ್ಥ ನದಿಯು ತುಂಬಿ ಹರಿಯಿತು. ಇದರಿಂದಾಗಿ ಆದಿಸುಬ್ರಹ್ಮಣ್ಯ ದೇವಳದ ಒಳಗೆ ನೀರು ಪ್ರವೇಶಿಸಿದೆ. ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠಕ್ಕೂ ನೀರು ನುಗ್ಗಿರುವುದಾಗಿ ವರದಿಯಾಗಿದೆ. ಹಲವು ವರ್ಷಗಳ ನಂತರ ಆದಿ ದೇವಳದ ಒಳಗೆ ದರ್ಪಣ ತೀರ್ಥವು ಪ್ರವೇಶಿಸಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಳದ ಸಮೀಪ ಇರುವ ದರ್ಪಣ ತೀರ್ಥ ನದಿಯ ಸ್ನಾನ ಘಟ್ಟವು ಮುಳುಗಡೆಗೊಂಡಿತ್ತು.

 

ದರ್ಪಣತೀರ್ಥ ನದಿಯು ತುಂಬಿ ಹರಿದ ಕಾರಣ ರುದ್ರಪಾದ ಸೇತುವೆಯು ಜಲಾವೃತಗೊಂಡಿದೆ. ದರ್ಪಣ ತೀರ್ಥದಲ್ಲಿನ ಪ್ರವಾಹದಿಂದ ಸುಬ್ರಹ್ಮಣ್ಯ- ಪಂಜ ರಾಜ್ಯ ಸಂಪರ್ಕ ರಸ್ತೆಯ ಸೇತುವೆಯು ಮುಳುಗಡೆ ಭೀತಿ ಎದುರಿಸುತ್ತಿದೆ.

ಸುಬ್ರಹ್ಮಣ್ಯದಲ್ಲಿ ಸುರಿಯುತ್ತಿರುವ ಮಹಾಮಳೆಯಿಂದ ತುಂಬಿ ಹರಿಯುತ್ತಿರುವ ದರ್ಪಣ ತೀರ್ಥದಿಂದ ನದಿ ತಟದಲ್ಲಿನ ಕೆಲ ಮನೆಗಳಿಗೆ ನೀರು ನುಗ್ಗಿದೆ.

“ದ.ಕ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅದರಲ್ಲೂ ಸುಬ್ರಹ್ಮಣ್ಯ, ಕಲ್ಮಕಾರು, ಕೊಲ್ಲಮೊಗ್ರು,ಹರಿಹರ,ಬಾಳುಗೋಡು ಆಸುಪಾಸಿನ ಕಡೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ.
ಈ ಭಾಗದಲ್ಲಿ ಮುಂಜಾಗ್ರತ ಕ್ರಮವಹಿಸಲು ಎಸ್ ಡಿಆರ್ ಎಪ್ ಹಾಗೂ ಎನ್ ಡಿಆರ್ ಎಪ್ ತಂಡವನ್ನು ಆ ಭಾಗಕ್ಕೆ ಈಗಾಗಲೆ ಕಳುಹಿಸಿಕೊಡಲಾಗುತ್ತಿದೆ.ಸಂಬಂಧಿಸಿದ ಅಧಿಕಾರಿಗಳಿಗೂ ಕಟ್ಟೆಚ್ಚರ ವಹಿಸಿ ಮುಂಜಾಗ್ರತೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ.


ನೆರೆ ಸಂದರ್ಭ ಸಾರ್ವಜನಿಕರು ಸಹಕರಿಸಿ, ಸುರಕ್ಷತೆ ಕಡೆ ಹೆಚ್ಚಿನ ಗಮನಹರಿಸಬೇಕು.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರು ಒಂದೆರಡು ದಿನಗಳು ಕಾದು ಮಳೆ ಕಡಿಮೆಯಾದ ಬಳಿಕ ಕ್ಷೇತ್ರ ಸಂದರ್ಶಿಸುವಂತೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ. ದೇಗುಲ ಭೇಟಿ ಮುಂದೂಡುವಂತೆ ಜಿಲ್ಲಾಧಿಕಾರಿಗಳೂ ಸೂಚನೆ ನೀಡಿದ್ದಾರೆ.