ಯೇನೆಕಲ್ಲು ಪರಿಸರದಲ್ಲಿ ಉಕ್ಕಿ ಹರಿದ ಹೊಳೆ

0

 

 

ತಡರಾತ್ರಿ ಮನೆಬಿಟ್ಟ 18 ಕುಟುಂಬಗಳು
ಯೇನೆಕಲ್ಲು ಭಾಗದಲ್ಲಿ ಹರಿಯುವ ಹೊಳೆಯಲ್ಲಿ ನೀರು ಉಕ್ಕಿ ಹರಿದಿದ್ದು ರಾತ್ರೋ ರಾತ್ರಿ ಸುಮಾರು 18 ಮನೆಯವರು ಮನೆ ಬಿಟ್ಟು ಬೇರೆ ಕಡೆ ತೆರಳಿದ ಘಟನೆ ಆ. 1ರಂದು ನಡೆದಿದೆ.

 


ಸುಬ್ರಹ್ಮಣ್ಯ ಭಾಗದಲ್ಲಿ ಸುರಿದ ರಣಭೀಕರ ಮಳೆಗೆ ಯೇನೆಕಲ್ಲು ಭಾಗದಲ್ಲಿ ಹರಿಯುವ ಹೊಳೆಯಲ್ಲಿ ನೀರು ಉಕ್ಕಿ ಹರಿದು ಕಲ್ಕುದಿ ಚೆಡಾವು ಎಂಬಲ್ಲಿಂದ ಯೇನೆಕಲ್ಲು ಹಾಲು ಉತ್ಪಾದಕರ ಸ.ಸಂಘದ ತನಕ ಮತ್ತು ಯೇನೆಕಲ್ಲು ಕುಸುಮಾಧರ ಪರಮಲೆಯವರ ಅಂಗಡಿಯ ಭಾಗದಿಂದ ಯೇನೆಕಲ್ಲು ಸಹಕಾರಿ ಸಂಘದ ತನಕ ನೀರು ರಸ್ತೆಯಲ್ಲೇ ಹರಿದು ಸಂಚಾರ ಸ್ಥಗಿತಗೊಂಡಿತ್ತು. ಸಂಜೆ ಸುಮಾರು 7.00 ಗಂಟೆಯಿಂದ ಏರುತ್ತಾ ಹೋದ ನೀರಿನ ಮಟ್ಟ 8.30ರ ಹೊತ್ತಿಗೆ ರಸ್ತೆಯುದ್ದಕ್ಕೂ ನೀರು ತುಂಬಿಕೊಂಡಿತ್ತೆನ್ನಲಾಗಿದೆ. ನದಿಯ ಹರಿವಿನುದ್ದಕ್ಕೂ ಇರುವ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಗ್ರಾಮದ ಸುಮಾರು 18 ಮನೆಯವರು ಮನೆಗೆ ಬೀಗ ಹಾಕಿ ಬೇರೆ ಕಡೆಗೆ ತೆರಳಿದರೆನ್ನಲಾಗಿದೆ. ನೀರಿನ ಹರಿವು ಕಡಿಮೆಯಾದ ನಂತರ ಇಂದು ಮುಂಜಾನೆ ತಮ್ಮ ತಮ್ಮ ಮನೆಗೆ ತೆರಳಿ ಮನೆ ಸ್ವಚ್ಛ ಮಾಡುವ ಕೆಲಸ ಮಾಡುತ್ತಿದ್ದಾರೆಂದು ತಿಳಿದುಬಂದಿದೆ. ಯೇನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆವರಣವೂ ಜಲಾವೃತಗೊಂಡು ಬಚ್ಚನಾಯಕ ದೈವಸ್ಥಾನದ ಚಾವಡಿಯ ತನಕ ನೀರಿನ‌ ಮಟ್ಟ ಏರಿತ್ತು ಎನ್ನಲಾಗಿದೆ. ಈ ಹಿಂದೆ 1972ರಲ್ಲಿ ಬಳಿಕ 2018ರಲ್ಲಿ ಇದೇ ರೀತಿ ಘಟನೆ ಸಂಭವಿಸಿದೆಯಾದರೂ ಇಷ್ಟು ನೀರು ಬಂದಿರುವುದು ಇತಿಹಾಸದಲ್ಲೇ ಮೊದಲು ಎನ್ನುವ ಅಭಿಪ್ರಾಯ ಊರವರು ವ್ಯಕ್ತಪಡಿಸಿದ್ದಾರೆ.