ಕಲ್ಲುಗುಂಡಿಯಲ್ಲಿ ಮಳೆ ಅವಾಂತರ : ಮನೆಗಳು ಅಂಗಡಿಗಳಿಗೆ ನುಗ್ಗಿದ ನೀರು – ಅಪಾರ ನಷ್ಟ

0

 

ನಿನ್ನೆ ರಾತ್ರಿ 12 ಗಂಟೆ ಸಮಯ ಕಲ್ಲುಗುಂಡಿ ಮುಖ್ಯ ರಸ್ತೆಯಲ್ಲಿ ಪಯಸ್ವಿನಿ ನದಿ ನೀರು ಏಕಾಏಕಿ ನುಗ್ಗಿ ಹತ್ತಾರು ಮನೆಗಳು, 30ಕ್ಕೂ ಹೆಚ್ಚು ವ್ಯಾಪಾರ ಮಳಿಗೆಗಳು ಜಲಾವೃತಗೊಂಡು ಲಕ್ಷಾಂತರ ರೂಪಾಯಿಗಳು ನಷ್ಟ ಉಂಟಾಗಿದೆ.

 

ಕಲ್ಲುಗುಂಡಿ ಮುಖ್ಯ ರಸ್ತೆಯ ಬಳಿ ಸುಮಾರು ಹತ್ತಕ್ಕೂ ಹೆಚ್ಚು ಮನೆಗಳು ಸುಮಾರು 6 ಅಡಿಗಳಷ್ಟು ನೀರು ತುಂಬಿ ಮನೆಯ ಎಲ್ಲಾ ಸಾಮಗ್ರಿಗಳು ಸಂಪೂರ್ಣ ನಾಶವಾಗಿದೆ.
ಮನೆಯೊಳಗಿದ್ದ ಕುಟುಂಬಸ್ಥರು ಆತಂಕಗೊಂಡು ಜೀವ ರಕ್ಷಣೆಗಾಗಿ ಕಿರುಚಾಡಿದ್ದಾರೆ.


ನಂತರ ತಮ್ಮ ತಮ್ಮ ಮನೆಯ ಛಾವಣಿ ಮೇಲೆ ತೆರಳಿ ರಾತ್ರಿ ಒಂದು ಗಂಟೆಯಿಂದ ಬೆಳಗಿನ ಜಾವ 6:00 ವರೆಗೆ ಅಲ್ಲೇ ಮಕ್ಕಳನ್ನು ಮತ್ತು ವೃದ್ಧರನ್ನು ನಿಲ್ಲಿಸಿ ತಮ್ಮ ಜೀವವನ್ನು ರಕ್ಷಿಸಿ ಕೊಂಡಿದ್ದಾರೆ.

ಮನೆಯ ಅಂಗಳದಲ್ಲಿ ನಿಲ್ಲಿಸಿದಂತಹ ಕಾರುಗಳು ಮತ್ತು, ದ್ವಿಚಕ್ರವಾಹನಗಳು ನೀರಿನಲ್ಲಿ ಮುಳುಗಿ ಕೆಸರಿನಿಂದ ಆವೃತಗೊಂಡಿದೆ.

ಇಲ್ಲಿವರೆಗೆ ಯಾವುದೇ ಅಧಿಕಾರಿ ತಂಡದವರು ಭೇಟಿ ನೀಡಲಿಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಮನೆಯ ಅಂಗಳದಲ್ಲಿ ಗೂಡಿನಲ್ಲಿ ಕಟ್ಟಿ ಹಾಕಿದ್ದ ನಾಯಿ ಮರಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದೆ.

ರಸ್ತೆ ಬದಿಯ ಅಂಗಡಿಗಳ ಫ್ರಿಜ್,ಕಪಾಟ್ ಮಿಕ್ಸಿ ಮುಂತಾದ ಬೆಲೆಬಾಳುವ ಸಾಮಾಗ್ರಿಗಳು 20 ಮೀಟರ್ ದೂರ ದ ತೋಟದ ಬಳಿ ನಿಂತಿದೆ.

ಘಟನೆಯ ಸಂದರ್ಭ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ತಮ್ಮ ತಂಡದ ಸದಸ್ಯರೊಂದಿಗೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.