ಕಲ್ಲುಗುಂಡಿ: ನೆರೆಹಾನಿ ಪ್ರದೇಶಕ್ಕೆ ಸಚಿವ ಎಸ್. ಅಂಗಾರ ಭೇಟಿ

0
364

ನೆರೆಹಾನಿಯಿಂದ ಆಶ್ರಯ ಪಡೆದಿರುವ ಕುಟುಂಬಗಳಿಗೆ ಹತ್ತು ಸಾವಿರ ರೂ. ಪರಿಹಾರದ ಚೆಕ್ ವಿತರಣೆ

p>

ಕಲ್ಲುಗುಂಡಿ ಹಾಗೂ ಕೊಯನಾಡು ಭಾಗದಲ್ಲಿ ಆ.1ರಂದು ಮಧ್ಯರಾತ್ರಿ ಸಂಭವಿಸಿದ ಜಲಸ್ಪೋಟದಿಂದಾಗಿ ಹಾನಿಯಾದ ಪ್ರದೇಶಕ್ಕೆ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ಆ.2ರಂದು ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ ಗೂನಡ್ಕದ ಸಜ್ಜನ ಪ್ರತಿಷ್ಠಾನದಲ್ಲಿ ಆಶ್ರಯ ಪಡೆದಿರುವ ಕುಟುಂಬಗಳಿಗೆ ರೂ. ಹತ್ತು ಸಾವಿರದಂತೆ ಪರಿಹಾರದ ಚೆಕ್ ವಿತರಿಸಿದರು.

 

 

 

ಮಳೆಹಾನಿಯಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದ ಕುಕ್ಕೆ ಸುಬ್ರಹ್ಮಣ್ಯ, ಹರಿಹರ , ಕೊಲ್ಲಮೊಗ್ರ ಹಾಗೂ ಕಲ್ಮಕಾರು ಭಾಗಗಳಿಗೆ ಭೇಟಿ ನೀಡಿದ್ದ ಸಚಿವರು ಸಂಜೆಯ ವೇಳೆಗೆ ಕಲ್ಲುಗುಂಡಿಗೆ ಆಗಮಿಸಿ ನೆರೆಹಾನಿ ಪ್ರದೇಶಗಳನ್ನು ವೀಕ್ಷಿಸಿದರು.
ಅಲ್ಲದೇ ನೆರೆ ಹಾನಿಯಿಂದ ಮನೆಗಳಿಗೆ ಹಾನಿಯಾದ ಒಟ್ಟು ನಾಲ್ಕು ಕುಟುಂಬಗಳಿಗೆ ತಲಾ ಹತ್ತು ಸಾವಿರದಂತೆ ಪರಿಹಾರದ ಚೆಕ್ಕನ್ನು ಗೂನಡ್ಕದ ಸಜ್ಜನ ಪ್ರತಿಷ್ಠಾನದಲ್ಲಿ ಆಶ್ರಯ ಪಡೆಯುತ್ತಿರುವಲ್ಲಿಗೆ ತೆರಳಿ ವಿತರಿಸಿದರು.


ಮನೆಹಾನಿಯಾದ ಉಳಿದ ಕುಟುಂಬಗಳಿಗೂ ತುರ್ತಾಗಿ ಹತ್ತು ಸಾವಿರದಂತೆ ಚೆಕ್ ವಿತರಿಸುವಂತೆ ಕಂದಾಯ ನಿರೀಕ್ಷಕರಾದ ಕೊರಗಪ್ಪ ಹೆಗ್ಡೆ ಅವರಿಗೆ ಸಚಿವರು ಸೂಚಿಸಿರುವುದಾಗಿ ತಿಳಿದುಬಂದಿದೆ.
ಈ ಸಂದರ್ಭದಲ್ಲಿ ತಹಶಿಲ್ದಾರ್ ಕು.ಅನಿತಾಲಕ್ಷ್ಮಿ, ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಬಿಜೆಪಿ ಮುಖಂಡರುಗಳಾದ ವೆಂಕಟ್ ದಂಬೆಕೋಡಿ , ವೆಂಕಟ ವಳಲಂಬೆ, ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಸುನಿಲ್ ಕೇರ್ಪಳ, ಅರಂತೋಡು ಗ್ರಾ.ಪಂ.‌ಸದಸ್ಯ ಕೇಶವ ಅಡ್ತಲೆ, ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಜಿ.ಕೆ.ಹಮೀದ್, ಸದಸ್ಯ ಅಬುಸಾಲಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here