ಕೊಲ್ಲಮೊಗ್ರ : ಹಾನಿಯಾದ ಮನೆಗೆ ಮತ್ತು ಕೃಷಿ ಭೂಮಿ ವೀಕ್ಷಣೆಗೆ ಸಚಿವ ಎಸ್ ಅಂಗಾರ ಭೇಟಿ-ಪರಿಹಾರದ ಭರವಸೆ

0

 

ಕೊಲ್ಲಮೊಗ್ರ ,ಕಲ್ಮಕಾರು ಪರಿಸರದಲ್ಲಿ ಆ.1ರಂದು ಮಧ್ಯಾಹ್ನದ ಬಳಿಕ ನಿರಂತರವಾಗಿ ಸುರಿದ ಭಾರಿ ಮಳೆಯಿಂದಾಗಿ ಮನೆ ಕುಸಿತ ಸೇರಿದಂತೆ ಬಹಳಷ್ಟು ಅವಾಂತರಗಳು ಸೃಷ್ಟಿಸಿದೆ.


ಮನೆ ಭಾಗಶಃ ಕುಸಿತ :
ಕೊಲ್ಲಮೊಗ್ರ ಹೊಳೆ ತುಂಬಿ ಹರಿದಿದ್ದು ಚಾಳೆಪ್ಪಾಡಿ,ದೋಲನ ಮನೆ ಮೊದಲಾದ ಕಡೆ ಮನೆಗಳ ಒಳಗೆ ನೀರು ನುಗ್ಗಿ ಹಾನಿಯಾಗಿದೆ. ನೀರು ಏರಿಕೆ ಆಗುತ್ತಿದ್ದಂತೆ ಅನೇಕರು ಮನೆ ಬಿಟ್ಟು ಬೇರೆ ಮನೆಗಳಲ್ಲಿ ಆಶ್ರಯ ಪಡೆದರು.ಕೊಲ್ಲಮೊಗ್ರ ಚಾಳೆಪ್ಪಾಡಿ ದೋಲನ ಮನೆ ಶ್ರೀಮತಿ ಲಲಿತಾ ಎಂಬವರ ಮನೆ ಅರ್ಧ ಭಾಗದಷ್ಟು ಮುಳುಗಡೆ ಗೊಂಡು ಬಳಿಕ ಮನೆ ಕುಸಿದು ಬಿದ್ದಿದೆ.ನೀರು ಏರಿಕೆಯಾಗುತ್ತಿದಂತೆ ಮನೆಯವರು ಬೇರೆ ಮನೆಯಲ್ಲಿ ಆಶ್ರಯ ಪಡೆದಿದ್ದರು.ಆದರೆ ಹಟ್ಟಿಯಲ್ಲಿದ್ದ ಹಸುವೊಂದು ನೀರಲ್ಲಿ ಮುಳುಗಿ ಮೃತಪಟ್ಟಿದೆ. ಮನೆಯಲ್ಲಿದ್ದ ಪಮೋರಿಯನ್ ನಾಯಿಗಳೆರಡು ನೀರಿನಲ್ಲಿ ಕೊಚ್ಚಿ ಹೋಗಿದ್ದು.ಅದರಲ್ಲಿ ಒಂದು ನಾಯಿ ಬದುಕುಳಿದಿದ್ದು ಸುಮಾರು 2 ಕಿ.ಮೀ ದೂರದ ಚಾಂತಳ ಎಂಬಲ್ಲಿ ಪತ್ತೆಯಾಗಿದೆ.

ಮನೆಯಲ್ಲಿದ್ದ ಅನೇಕ ವಸ್ತುಗಳು ಕೊಚ್ಚಿ ಹೋಗಿದ್ದು ಅಪಾರ ನಷ್ಟ ಸಂಭವಿಸಿದೆ.ವಿಪತ್ತು ಘಟಕದವರು ಮತ್ತು ಊರವರು ಮನೆ ತೆರವು ಗೊಳಿಸಲು ಸಹಕರಿಸಿದರು.ಮನೆಯವರು ಬೇರೆಡೆಗೆ ಸ್ಥಳಾಂತರ ಗೊಂಡಿದ್ದಾರೆ.
ಕೃಷಿ ಭೂಮಿ ಮಾಯ : ಕೊಲ್ಲಮೊಗ್ರ ದೋಲನ ಮನೆ ಎಂಬಲ್ಲಿ ಸುಮಾರು 2.5 ಎಕ್ರೆ ಹೊಳೆ ಕೊರತಕ್ಕೆ ಸಿಲುಕಿ ಸುಮಾರು 500 ಮಿಕ್ಕಿ ಅಡಿಕೆ ಮರ , ಅಡಿಕೆ ಗಿಡಗಳು ಹೊಳೆ ಪಾಲಾಗಿದ್ದು ಈ ಪ್ರದೇಶ ಸಮುದ್ರದಂತಾಗಿದ್ದು ಕೃಷಿ ಭೂಮಿ ಮಾಯವಾಗಿದೆ. ಕೃಷಿ ಪಂಪ್ ಸೆಟ್ , ಪೈಪ್ ಗಳು ಹೊಳೆ ಪಾಲಾಗಿದೆ.ಹೊಳೆಯಲ್ಲಿ ಕೊಚ್ಚಿ ಬಂದ ಭಾರಿ ಗಾತ್ರದ ಮರಗಳು ತೋಟದ ಒಳಗೆ
ನುಗ್ಗಿದ್ದು ಅಡಿಕೆ ಮರ, ಗಿಡಗಳು ಪುಡಿ ಪುಡಿಯಾದ
ದೃಶ್ಯಗಳು ಮನಕಲಕುವಂತಿದೆ.ಅತ್ಯಂತ ಸಣ್ಣ ಕೃಷಿ ಭೂಮಿಯನ್ನು ಹೊಂದಿರುವ ಇಲ್ಲಿಯ ಕೃಷಿಕರಿಗೆ ಮುಂದಿನ ಭವಿಷ್ಯದ ಚಿಂತೆಯಾಗಿದೆ.
ಇದೇ ಮೊದಲು ಇಷ್ಟು ನೀರು:
“ಮಧ್ಯಾಹ್ನ ಮೇಲೆ ಆರಂಭವಾದ ಮಳೆ ಬಿಡಲಿಲ್ಲ ಸಂಜೆ ವೇಳೆಗೆ ಹೊಳೆಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿತ್ತು.ರಾತ್ರಿ 11ವೇಳೆಗೆ ನಮ್ಮ ಮನೆಗಳಿಗೆ ನೀರು ನುಗ್ಗಿತ್ತು.ಇಷ್ಟು ನೀರು ಹರಿದು ಬಂದಿರುವುದು ಇದೇ ಮೊದಲು” ಎಂದು ದೋಲನ‌ಮನೆ ಆನಂದ ಗೌಡರ ವರು ವಿವರಿಸಿದರು.
ಸಚಿವರು -ಅಧಿಕಾರಿಗಳು ಭೇಟಿ : ಕೊಲ್ಲಮೊಗ್ರದ ಮನೆ ಕುಸಿತ ಗೊಂಡ ಸ್ಥಳಕ್ಕೆ ಸಚಿವ ಎಸ್ ಅಂಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜನಪ್ರತಿನಿಧಿಗಳು, ಮುಖಂಡರು ಜೊತೆಗೆ ಇದ್ದರು.ಬಳಿಕ ಅಲ್ಲಿಯೇ ಸಮೀಪದ ದೋಲನ ಮನೆ ಎಂಬಲ್ಲಿ ಹೊಳೆ ಕೊರೆತಕ್ಕೆ ಸಿಲುಕಿ ಅಪಾರ ಹಾನಿಯಾದ ಕೃಷಿ ಭೂಮಿಯನ್ನು ವೀಕ್ಷಿಸಿ ಪರಿಹಾರದ ಭರವಸೆ ನೀಡಿದರು.ಕಂದಾಯ ನಿರೀಕ್ಷಕ ಯಂ ಯಲ್ ಶಂಕರ್ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾನಿಯಾದ ಅನೇಕ ಕೃಷಿ ತೋಟಗಳಿಗೆ, ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹಾನಿಯಾದ ವರದಿ ಪಡೆದರು. .
*ಸಮಸ್ಯೆ ಕುರಿತುಅನೇಕ ಭಾರಿ ಮನವಿ* : 2018 ನೇ ಇಸವಿಯಲ್ಲಿ ನಡೆದ ಪ್ರಕೃತಿ ವಿಕೋಪದಿಂದ ಹೊಳೆಯಲ್ಲಿ ಮರಗಳು ಕೊಚ್ಚಿ ಬಂದು ಸಿಲುಕಿ ಕೊಂಡು ದೋಲನ ಮನೆ ಎಂಬಲ್ಲಿ ಹೊಳೆ ಹರಿವಿನ ದಿಕ್ಕು ಬದಲಾಯಿಸಿ ಕೃಷಿ ಭೂಮಿಯಲ್ಲಿ ಹರಿಯಲಾರಂಭಿಸಿತು.ಈ ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಗೆ ತಡೆಗೋಡೆ ರಚಿಸುವಂತೆ ಮನವಿ ಸಲ್ಲಿಸಲಾಯಿತು. ಬಳಿಕ ನಡೆದ ಸಚಿವರ ಮತ್ತು ಕಂದಾಯ ಇಲಾಖೆಯವರ ಗ್ರಾಮ ವಾಸ್ತವ್ಯದಲ್ಲೂ ಮನವಿ ಸಲ್ಲಿಸಲಾಯಿತು. ಆದರೆ ಈ ಬಗ್ಗೆ ಯಾವುದೇ ಪರಿಹಾರ ದೊರಕದೆ ಇಡೀ ಕೃಷಿ ಭೂಮಿ ಹೊಳೆ ಪಾಲಾಗುತ್ತಿದೆ.ಈ ವರುಷ ಕೂಡ ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಗೆ, ತಹಶೀಲ್ದಾರ್ ರವರಿಗೆ, ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಜನಪ್ರತಿನಿಧಿಗಳು,ಇಲಾಖೆಯವರು ಇದಕ್ಕೆ ಸೂಕ್ತ ಪರಿಹಾರ ಒದಗಿಸಿ ಸಂಕಷ್ಟಕ್ಕೆ ಪರಿಹಾರ ನೀಡ ಬೇಕಾಗಿದೆ.
.