ಅರಂಬೂರು : ಉಕ್ಕಿ ಹರಿದ ಪಯಶ್ವಿನಿ ನದಿ, ಮಾಣಿ – ಮೈಸೂರು ಹೆದ್ದಾರಿ ಸತತ 7 ಗಂಟೆ ಸಂಚಾರ ಸ್ಥಗಿತ

0

 

ಆಶ್ರಮ ಸೇರಿದಂತೆ ಸುಮಾರು 8 ಮನೆಗಳು ಜಲಾವೃತ

ರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 7ಗಂಟೆಯವರೆಗೆ ಕಿಲೋಮೀಟರ್ ದೂರದವರೆಗೆ ಸಾಲುಗಟ್ಟಿ ನಿಂತ ವಾಹನಗಳು

ಅರಂಬೂರು ಬಳಿ ಮಾಣಿ ಮೈಸೂರು ಹೆದ್ದಾರಿ ಸಮೀಪ ಹರಿಯುತ್ತಿರುವ ಪಯಶ್ವಿನಿ ನದಿ ಆಗಸ್ಟ್ 2 ರಂದು ರಾತ್ರಿ ಸುಮಾರು 12 ಗಂಟೆಯ ಸಮಯಕ್ಕೆ ಉಕ್ಕಿ ಹರಿಯ ತೊಡಗಿದ್ದು ಅರಂಬೂರು,ಪಾಲಡ್ಕ ಬಳಿ ಆಶ್ರಮ ಸೇರಿದಂತೆ ಸುಮಾರು 8ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡವು.

ನದಿ ನೀರು ಉಕ್ಕಿ ಹರಿದ ರಭಸದಲ್ಲಿ ಇಲ್ಲೇ ಪಕ್ಕದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಗೆ ನೆರೆ ನೀರು ಆವೃತಗೊಂಡು ಸತತ ಏಳು ಗಂಟೆಗಳ ಕಾಲ ರಾಜ್ಯ ಹೆದ್ದಾರಿಯ ಸಂಪರ್ಕ ಕಡಿತಗೊಂಡಿತು.

 

ಈ ಹಿನ್ನೆಲೆಯಲ್ಲಿ ರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 7ರವರೆಗೆ ಕಿಲೋಮೀಟರ್ ದೂರದವರೆಗೆ ನೂರಾರು ವಾಹನಗಳು ಸಾಲುಗಟ್ಟಿ ನಿಂತ ದೃಶ್ಯ ಕಂಡು ಬಂದಿತು.

ಪಾಲಡ್ಕ ಬಳಿ ನದಿ ನೀರು ಹುಕ್ಕಿ ಹರಿದು ಈ ಪರಿಸರದ ನಿವಾಸಿಗಳಾದ ಸಲೀಂ, ಮಹಮ್ಮದ್, ಅಬ್ದುಲ್ಲಾ, ಎಂಬುವವರ ಮನೆಗಳಿಗೆ ನೀರು ನುಗ್ಗಿ ಮನೆಯೊಳಗಿದ್ದ ಪೀಠೋಪಕರಣಗಳು, ಹಾಸಿಗೆ ಬಟ್ಟೆ ಬರೆಗಳು, ಆಹಾರ ಸಾಮಗ್ರಿಗಳು ಸಂಪೂರ್ಣ ನೀರಿನಲ್ಲಿ ಆವೃತಗೊಂಡು ನಷ್ಟ ಸಂಭವಿಸಿದವು.
ನದಿಯಲ್ಲಿ ನೀರಿನ ಹರಿವು ಏರುತ್ತಿರುವ ಬಗ್ಗೆ ಮೊದಲೇ ಸ್ಥಳೀಯರಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮನೆ ಮಂದಿ ಜಾಗರೂಕತರಾದ ಹಿನ್ನೆಲೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಲಿಲ್ಲ.

ಇದೇ ವೇಳೆ ಪೆರಾಜೆ ಬಳಿಯಲ್ಲಿ ರಾಜ್ಯ ಹೆದ್ದಾರಿಗೆ ನೀರು ಬಂದಿದ್ದು ಆ ಭಾಗದಿಂದಲೂ ರಸ್ತೆ ಸಂಚಾರ ಕಡಿತಗೊಂಡಿತು. ರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 6 ರವರೆಗೆ ದ್ವೀಪದಂತೆ ಆಗಿದ್ದ ಈ ಪರಿಸರವು ಕೆಲಕಾಲ ಸ್ಥಳೀಯರಲ್ಲಿ ಆತಂಕವನ್ನು ಹೆಚ್ಚಿಸಿತು.

ಅಲ್ಲಿಂದ ಅಲ್ಪ ದೂರದಲ್ಲಿರುವ ಆಶ್ರಮ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು ಆಶ್ರಮದ ಮೇಲ್ಚಾವಣಿಗೆ ಹಾಸಿದ್ದ ಶೀಟುಗಳು ಕೆಲವು ನೀರಿನಲ್ಲಿ ತೇಲಿ ಹೋಗಿದ್ದವು. ಆಶ್ರಮದ ಮನೆಯೊಳಗೆ ನದಿ ನೀರು ಬಂದ ಹಿನ್ನೆಲೆಯಲ್ಲಿ ಮನೆಯ ಎಲ್ಲಾ ಸಾಮಗ್ರಿಗಳು ಹಾನಿಗೊಂಡಿದ್ದು ಅಪಾರ ನಷ್ಟ ಉಂಟಾಗಿದೆ.
ಎಂ ಆರ್ ಹಮೀದ್ ರವರ ಮನೆಯ ಬಳಿ ಬಾಡಿಗೆ ಮನೆಯಲ್ಲಿ ಇರುವ ಸುಮಾರು 6ಕ್ಕೂ ಹೆಚ್ಚು ಕುಟುಂಬಗಳು ಏಕಾಏಕಿ ರಾತ್ರಿ ನದಿ ನೀರು ಆವರಿಸಿದ ಹಿನ್ನೆಲೆಯಲ್ಲಿ ದಿಕ್ಕು ತೋಚದೆ ತಮ್ಮ ಮನೆಯಲ್ಲಿರುವ ಸಣ್ಣಪುಟ್ಟ ಮಕ್ಕಳನ್ನು ಮತ್ತು ವೃದ್ಧರನ್ನು ಮನೆಯಿಂದ ಸ್ಥಳಾಂತರಿಸಲು ಹರಸಾಹಸವನ್ನು ಪಡುವ ಸ್ಥಿತಿ ನಿರ್ಮಾಣವಾಯಿತು.


ಇದೇ ಕಟ್ಟಡದ ಬಾಡಿಗೆ ಮನೆಯೊಂದರಲ್ಲಿ ಇರುವ ಜಯಪ್ರಕಾಶ್ ಎಂಬುವವರ ಆಟೋರಿಕ್ಷಾಕ್ಕೆ ನೀರು ತುಂಬಿ ಅಪಾರ ನಷ್ಟ ಉಂಟಾಗಿದೆ.
ನದಿ ನೀರಲ್ಲಿ ರಿಕ್ಷಾ ಕೊಚ್ಚಿ ಹೋಗದಂತೆ ಸ್ಥಳೀಯರು ಹಗ್ಗದಿಂದ ಆಟೋವನ್ನು ಸಣ್ಣ ಮರವೊಂದಕ್ಕೆ ಕಟ್ಟಿ ಇಟ್ಟಿದ್ದರು.

ಘಟನೆ ತಿಳಿದ ಸುಳ್ಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ರೈಟರ್ ಸತೀಶ್ ರವರು ರಾತ್ರಿ 4 ಗಂಟೆ ಸಮಯಕ್ಕೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಬಂದು ಬಾಡಿಗೆ ಮನೆಗಳಲ್ಲಿ ಇದ್ದ ಮಹಿಳೆಯರನ್ನು ಮತ್ತು ಮಕ್ಕಳನ್ನು ಹಮೀದ್ ರವರ ಮನೆಯ ಕಾಂಪೌಂಡ್ ಬದಿಯಲ್ಲಿ ಇರಿಸಿದ್ದ ಏಣಿಯ ಸಹಾಯದಿಂದ ರಕ್ಷಿಸಿ ಅವರನ್ನು ಸೂಕ್ತ ಸ್ಥಳಕ್ಕೆ ಕರೆತಂದರು.

ಇದೇ ಪರಿಸರದಲ್ಲಿ ಉದಯ ಎಂಬುವವರ ಮನೆಯನ್ನು ಆವರಿಸಿದ ನದಿ ನೀರಿನಿಂದ ಶೌಚಾಲಯ ಕಟ್ಟಡಕ್ಕೆ ಹಾನಿ ಉಂಟಾಗಿದೆ.

ಆಪತ್ಬಾಂಧವರಾಗಿ ಬಂದ ಎಸ್ ಕೆ ಎಸ್ ಎಸ್ ಎಫ್ ವಿಖಾಯ ತಂಡ ಮತ್ತು ಸ್ಥಳೀಯ ಯುವಕರ ತಂಡ

ರಾತ್ರಿ 12 ಗಂಟೆ ಸಮಯಕ್ಕೆ ಈ ಭಾಗದಲ್ಲಿ ನದಿ ನೀರು ಮನೆಗಳಿಗೆ ನುಗ್ಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಸುಳ್ಯ ತಹಶೀಲ್ದಾರ್ ಅನಿತಾ ಲಕ್ಷ್ಮಿ ರವರು ಸ್ಥಳಕ್ಕೆ ಸುಳ್ಯ ಅಗ್ನಿಶಾಮಕ ದಳದ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಜನರ ರಕ್ಷಣೆಗಾಗಿ ಕಳಿಸಿಕೊಟ್ಟಿದ್ದರು.
ಇವರೊಂದಿಗೆ ಕೈಜೋಡಿಸಿದ ಸುಳ್ಯ ಎಸ್ ಕೆ ಎಸ್ ಎಸ್ ಎಫ್ ವಿಕಾಯ ತಂಡದ ಅಧ್ಯಕ್ಷರು ಮತ್ತು ಕೆಲವು ಪದಾಧಿಕಾರಿಗಳು, ಸ್ಥಳೀಯ ಕೆಲವು ಯುವಕರು ಜೀವದ ಹಂಗು ತೊರೆದು ಭೋರ್ಗರೆದು ಹರಿಯುತ್ತಿರುವ ನದಿಯನ್ನು ಲೆಕ್ಕಿಸದೆ ನದಿ ನೀರಿನಲ್ಲಿ ಆವೃತಗೊಂಡಿರುವ ಮನೆ ಮಂದಿಯ ರಕ್ಷಣೆಗಾಗಿ ಮುಂದಾಗಿದ್ದರು.
ಅಪಾಯದಲ್ಲಿದ್ದ ಮನೆಗಳಿಗೆ ತೆರಳಿ ಬೋಟಿನ ಸಹಾಯದಿಂದ ಮನೆ ಮಂದಿಯ ರಕ್ಷಣೆಯನ್ನು ಮಾಡಿದರು.
ಇವರ ರೆಸ್ಕ್ಯೂ ಕಾರ್ಯಚರಣೆ ಮಧ್ಯರಾತ್ರಿಯಿಂದ ಬೆಳಗಿನ ಜಾವ ಏಳು ಗಂಟೆಯವರೆಗೆ ಸತತವಾಗಿ ನಡೆಯಿತು.
ಬೆಳಗಿನ ಜಾವ 7 ಗಂಟೆಗೆ ಪ್ರವಾಹದ ನೀರಿನ ಮಟ್ಟ ತಗ್ಗುತ್ತಿದ್ದಂತೆ ರಸ್ತೆ ಸಂಚಾರದ ಅಡಚಣೆ ದೂರವಾಯಿತು.
ನಂತರ ವಾಹನಗಳು ಸಂಚರಿಸಲು ಪ್ರಾರಂಭವಾದವು.

ಕುಶಾಲನಗರಕ್ಕೆ ಮೃತ ದೇಹವನ್ನು ಕೊಂಡೊಯ್ಯುತ್ತಿದ್ದ ಅಂಬುಲೆನ್ಸ್ ವಾಹನಕ್ಕೆ ನದಿ ನೀರು ತಡೆ

ಮಂಗಳೂರು ಆಸ್ಪತ್ರೆಯಿಂದ ಕೊಡಗಿನ ಕುಶಾಲನಗರಕ್ಕೆ ಮೃತ ದೇಹವನ್ನು ಕೊಂಡೊಯ್ಯುತ್ತಿದ್ದ ಅಂಬುಲೆನ್ಸ್ ವಾಹನ ರಸ್ತೆಗೆ ನೀರು ಬಂದ ಹಿನ್ನೆಲೆಯಲ್ಲಿ 1 ಗಂಟೆಗಳ ಕಾಲ ಅರಂಬೂರಿನಲ್ಲಿ ನಿಂತಿತ್ತು.
ಬೆಳಗಿನ ಜಾವ 4:30ಕ್ಕೆ ಬಂದ ಅಂಬುಲೆನ್ಸ್ ವಾಹನ ನದಿ ನೀರು ತುಂಬಿದ ಹಿನ್ನೆಲೆಯಲ್ಲಿ 5.30 ರವರೆಗೆ ನೀರು ತಗ್ಗಲು ಕಾದು ನಂತರ ಉಭರಡ್ಕ ಮರ್ಕಂಜ ಭಾಗವಾಗಿ ಅರಂತೋಡು ಮಾರ್ಗವಾಗಿ ಹೋಗುವ ಪರಿಸ್ಥಿತಿ ನಿರ್ಮಾಣವಾಯಿತು.
ರಕ್ಷಣಾ ಕಾರ್ಯದಲ್ಲಿ ಸುಳ್ಯ ಅಗ್ನಿಶಾಮಕ ದಳದ ಅಧಿಕಾರಿ ರಾಜಗೋಪಾಲ್, ಕಲ್ಲಪ್ಪ ಸಿಬ್ಬಂದಿಗಳಾದ ಸಂಜೀವ ಗೌಡ,ರಾಜೇಶ್, ಗೃಹರಕ್ಷಕ ದಳದ ಸಿಬ್ಬಂದಿಗಳಾದ ದೇವಿಪ್ರಸಾದ್, ವಿಕಾಯ ತಂಡದ ಸುಳ್ಯ ಸಮಿತಿ ಅಧ್ಯಕ್ಷ ಕಲಂದರ್ ಎಲಿಮಲೆ, ಹಾಗೂ ವಿಖಾಯ ತಂಡದ ಸದಸ್ಯರು, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲಾ ಅಧ್ಯಕ್ಷ ಉನೈಸ್ ಪೆರಾಜೆ, ಸ್ಥಳೀಯ ಯುವಕರಾದ ಆಶಿಕ್, ಫಯಾಜ್, ಹಾಗೂ ಇನ್ನೂ ಹಲವಾರು ಸ್ಥಳೀಯ ಯುವಕರು ಭಾಗವಹಿಸಿದ್ದರು.