ಸುಳ್ಯ – ಮಡಿಕೇರಿ ರಸ್ತೆಯ ಕೊಯನಾಡು ಬಳಿ ರಸ್ತೆಯಲ್ಲಿ ಬಿರುಕು ಹಿನ್ನೆಲೆ

0

ಘನ ವಾಹನ ಸಂಚಾರ ನಿಷೇಧಿಸಿ ಕೊಡಗು ಜಿಲ್ಲಾಧಿಕಾರಿ ಆದೇಶ

ಸಂಪಾಜೆ ಗೇಟ್ ಬಳಿ ಸಾಲುಗಟ್ಟಿ ನಿಂತಿರುವ ಘನವಾಹನಗಳು

ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೊಯನಾಡು ಗಣಪತಿ ದೇವಾಲಯದ ಬಳಿಯ ಸೇತುವೆ ಬಿರುಕು ಹಾಗೂ ಕೊಯನಾಡು – ದೇವರಕೊಲ್ಲಿ ಮಧ್ಯೆ ರಸ್ತೆಯಲ್ಲಿ ಭಾರೀ ಪ್ರಮಾಣದ ಬಿರುಕು ಹಿನ್ನೆಲೆಯಲ್ಲಿ ಸುಳ್ಯ – ಮಡಿಕೇರಿ ರಸ್ತೆಯಲ್ಲಿ ಘನವಾಹನಗಳ ಸಂಚಾರನ್ನು ನಿಷೇಧಿಸಿ, ಕೊಡಗು ಜಿಲ್ಲಾಧಿಕಾರಿ ಡಾ. ಸತೀಶ್ ಅವರು ಆದೇಶ ಹೊರಡಿಸಿದ್ದು, ಅನೇಕ ಘನ ವಾಹನಗಳು ಸಂಪಾಜೆ ಗೇಟ್ ಬಳಿಯಲ್ಲಿ ಸಾಲುಗಟ್ಟಿ ನಿಂತಿರುವ ಘಟನೆ ಸಂಭವಿಸಿದೆ.

ಸುಳ್ಯ – ಮಡಿಕೇರಿ ರಸ್ತೆಯ ಕೊಯನಾಡಿನ ಗಣಪತಿ ದೇವಾಲಯದ ಬಳಿಯಿರುವ ಸೇತುವೆ ಎರಡೂ ಬದಿಗಳಲ್ಲಿ ಭಾರೀ ಮಳೆಯಿಂದಾಗಿ ನೀರಿನ ಸೆಳೆತಕ್ಕೆ ಮಣ್ಣು ದಿ‌ನದಿಂದ ದಿನಕ್ಕೆ ಕುಣಿಯುತ್ತಿದ್ದು, ಈ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಮರಳು ಚೀಲವನ್ನು ಇರಿಸಲಾಗಿದೆ.


ಈ ರಸ್ತೆಯಲ್ಲೇ ಮುಂದೆ ಕೊಯನಾಡು -ದೇವರಕೊಲ್ಲಿ ಮಧ್ಯೆ ಮುಖ್ಯ ರಸ್ತೆಯಲ್ಲೇ ಭಾರೀ ಪ್ರಮಾಣದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ದ್ವಿಚಕ್ರ, ಕಾರು ಹಾಗೂ ಬಸ್ಸುಗಳಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಈ ರಸ್ತೆಯಲ್ಲಿ ಭಾರೀ ಗಾತ್ರದ ಲಾರಿ, ಟ್ಯಾಂಕರ್ , ಕಂಟೈನರ್ ಗಳ ಸಂಚಾರವನ್ನು ನಿಷೇಧಿಸಿ ಇದೀಗ ಕೊಡಗು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಅನೇಕ ಲಾರಿ, ಟ್ಯಾಂಕರ್,ಕಂಟೈನರ್ ಗಳು ಸಂಪಾಜೆ ಗೇಟ್ ಬಳಿ ಸಾಲುಗಟ್ಟಿ ನಿಂತಿವೆ.