ನೆರೆಯಲ್ಲಿ ಕೊಚ್ಚಿ ಹೋಗಿದ್ದ ಶ್ವಾನಗಳು ಬದುಕಿ ಬಂದ ಕಥೆ!

0

‘ಮನೆ ಕಳೆದುಕೊಂಡ ದುಃಖ ಮಧ್ಯೆಯೂ ಮುಖದಲ್ಲಿ ಸಂತಸ ಮೂಡಿದ ಕ್ಷಣ’

-ಮಧು ಪಂಜ

ಪ್ರಕೃತಿ ವಿಕೋಪದಿಂದ ಕೊಲ್ಲಮೊಗ್ರ ಕುಟುಂಬವೊಂದು ಮನೆ ಕಳೆದು ಕೊಂಡು ದುಃಖದಲ್ಲಿ ದಿನ ಕಳೆಯುತ್ತಿದ್ದಾಗ ಅದೊಂದು ದೂರವಾಣಿ ಕರೆಯಿಂದ ಮನೆಯವರ ಮುಖದಲ್ಲಿ ಸಂತಸ ಮೂಡಿದ ಕ್ಷಣದ ಕಥೆ ಇದು.

ಆ.1 ರಂದು ರಾತ್ರಿಯಿಡೀ ಸುರಿದ ರಣಭೀಕರ ಮಳೆಗೆ ಕೊಲ್ಲಮೊಗ್ರದ ಹೊಳೆ ಇಡೀ ಗ್ರಾಮವನ್ನು ಆವರಿಸಿ ಅನೇಕ ಮನೆಗಳಿಗೆ ನೆರೆ ನೀರು ನುಗ್ಗಿ ಬಹಳಷ್ಟು ಅವಾಂತರಗಳು ಸೃಷ್ಟಿಸಿದೆ. ಕೆಲವರು ಮನೆ ಬಿಟ್ಟು ಎತ್ತರ ಪ್ರದೇಶದಲ್ಲಿರುವ ಮನೆಗಳಲ್ಲಿ ರಾತ್ರಿ ಕಳೆದರು.ಇನ್ನೂ ಕೆಲವರು ಮನೆಯಿಂದ ಹೊರಕ್ಕೆ ಬರಲಾಗದೆ ನೆರೆ ಇಳಿಯುವ ತನಕ ಮನೆಯ ಅಟ್ಟವೇರಿ ಕುಳಿತರು. ಹೀಗೆ ಜೀವ ಉಳಿಸಿ ಕೊಳ್ಳಲು ಮಾಡಿದ ಅನೇಕ ಕಥೆ ಇಲ್ಲಿಯ ಜನರು ಹಂಚಿ ಕೊಂಡಿದ್ದಾರೆ.

ದೋಲನ ಮನೆ ಶ್ರೀಮತಿ ಲಲಿತಾ ರವರು ಮನೆಗೆ ನೆರೆ ನೀರು ನುಗ್ಗುತ್ತಿದ್ದಂತೆ ಅವರು ಪಕ್ಕದ ಮನೆ ಬಳ್ಳಡ್ಕ ಪದ್ಮಯ್ಯ ಗೌಡರ ಮನೆಯಲ್ಲಿ ಆಶ್ರಯ ಪಡೆದರು. ಅವರ ಪುತ್ರ ಹೇಮಂತ್ ರವರು ಸುಬ್ರಹ್ಮಣ್ಯಕ್ಕೆ ಬಂದವರು ಮನೆಗೆ ಹಿಂದಿರುಗುತ್ತಿದ್ದಾಗ ಹರಿಹರ ಹೊಳೆಯಲ್ಲಿ ಬಹಳಷ್ಟು ನೀರು ಏರಿಕೆ ಆಗಿದ್ದರಿಂದ ಹರಿಹರ-ಕೊಲ್ಲಮೊಗ್ರ ಸಂಪರ್ಕ ರಸ್ತೆ ಬ್ಲಾಕ್ ಆಗಿತ್ತು. ಮನೆಗೆ ತಲುಪಲಾಗದೆ ಹೇಮಂತ್ ರು ಸೇವಾ ಭಾರತಿಯವರ ಸಹಕಾರದಿಂದ ಸುಬ್ರಹ್ಮಣ್ಯದಲ್ಲಿ ಉಳಿದು ಕೊಂಡರು. ಮುಂಜಾನೆ ನೆರೆ ನೀರು ಇಳಿದರಿಂದ ಮನೆ ತಲುಪಿದಾಗ ಬಹಳಷ್ಟು ಆಘಾತ ಪಡುವ ಘಟನೆ ನಡೆದು ಹೋಗಿತ್ತು. ನೆರೆ ನೀರು ಇಡೀ ಮನೆಯನ್ನು ಆವರಿಸಿದ ಪರಿಣಾಮ ಅವರ ಮನೆ ನೆಲ ಕಚ್ಚಿತ್ತು.ಮನೆಯಲ್ಲಿದ್ದ ಅನೇಕ ವಸ್ತುಗಳು ನೆರೆ ಪಾಲಾಗಿತ್ತು. ಹಸುವೊಂದು ನೆರೆ ನೀರಿನಲ್ಲಿ ಮುಳುಗಿ ಮೃತ ಪಟ್ಟಿತ್ತು. ಮುದ್ದಾಗಿ ಸಾಕಿದ ರಾಜು ಮತ್ತು ರಾಣಿ ಪಮೋರಿಯನ್ ಶ್ವಾನಗಳು ನೆರೆಯಲ್ಲಿ ಕೊಚ್ಚಿ ಹೋಗಿದ್ದವು.

ಈ ನಡುವೆ ಎರಡು ದಿನಗಳ ಬಳಿಕ ದುಃಖದ ನಡುವೆ ಸಂತಸ ಕ್ಷಣ ಒಂದು ಎದುರಾಯಿತು.ಅದುವೇ ನೆರೆಯಲ್ಲಿ ಕೊಚ್ಚಿ ಹೋದ ರಾಜು -ರಾಣಿ ಶ್ವಾನಗಳು ಬದುಕಿವೆ ಎಂಬ ದೂರವಾಣಿ ಕರೆ. ಸುಮಾರು 2.5ಕಿ.ಮೀ.ದೂರದ ಚಾಂತಳ ಎಂಬಲ್ಲಿ ಒಂದು ಶ್ವಾನ ಪತ್ತೆಯಾಗಿತ್ತು. 2 ದಿನದ ಬಳಿಕ ಮತ್ತೊಂದು ಅಲ್ಲಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿದ್ದು. ಮುದ್ದಾಗಿ ಸಾಕಿದ ಶ್ವಾನಗಳು ಸಿಕ್ಕಿದಾಗ ಮನೆ ಕಳೆದು ಕೊಂಡ ದುಃಖ ಮಧ್ಯೆ ಸಂತಸ ಮನೆಯವರ
ಮುಖದಲ್ಲಿ ಕಂಡು ಬಂತು.ರಾಜು, ರಾಣಿ ಯ ಪತ್ತೆ ಹಚ್ಚುವಲ್ಲಿ ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಜಯಶ್ರೀ ಚಾಂತಳ, ಗ್ರಾಮ ಪಂಚಾಯತ್ ಸದಸ್ಯ ಮಾಧವ ಚಾಂತಳ ರವರು ಮೊದಲಾದವರು ಸಹಕರಿಸಿದ್ದಾರೆ ಎಂದು ಹೇಮಂತ್ ರವರು ಸಹಕರಿಸಿದವರನ್ನು ಸ್ಮರಿಸಿದರು.