ಮಲೆಯಾಳ – ಐನೆಕಿದು – ಹರಿಹರ ರಸ್ತೆ ದುರವಸ್ಥೆ ಉಸ್ತುವಾರಿ ಸಚಿವರ ಗಮನಕ್ಕೆ ಬರದಂತೆ ಸಚಿವರು ಸಾಗುವ ಮಾರ್ಗ ಬದಲಾಯಿಸಿದ ನಾಯಕರು

0
1772

ಮಲೆಯಾಳದಲ್ಲಿ ವಾಹನ ನಿಲ್ಲಿಸಿ ಗರಂ ಆದ ಜಿಲ್ಲಾಧಿಕಾರಿ ಮತ್ತು ಪತ್ರಕರ್ತರು

p>

ಅಭಿವೃದ್ಧಿ ಬಗ್ಗೆ ಮಾಧ್ಯಮದವರು ಹೇಳುವ ಅಗತ್ಯವಿಲ್ಲ ಎಂದು ಉಡಾಫೆ ಪ್ರದರ್ಶಿಸಿದ ಗ್ರಾ.ಪಂ ಅಧ್ಯಕ್ಷ

ಸುಬ್ರಹ್ಮಣ್ಯ – ಮಲೆಯಾಳ ಐನೆಕಿದು ಮಾರ್ಗವಾಗಿ ಹರಿಹರಪಲ್ಲತಡ್ಕಕ್ಕೆ ಹೋಗುವ ರಸ್ತೆಯ ದುರವಸ್ಥೆ ಉಸ್ತುವಾರಿ ಸಚಿವರ ಗಮನಕ್ಕೆ ಬರಬಾರದು ಎಂದು ಉದ್ದೇಶದಿಂದ ಕೆಲ ನಾಯಕರು ಸಚಿವರನ್ನು ರೂಟ್ ಬದಲಾಯಿಸಿ ನಡುಗಲ್ಲಾಗಿ ಕರೆದೊಯ್ದ ಹಾಗೂ ಮಲೆಯಾಳದಲ್ಲಿ ವಾಹನ ನಿಲ್ಲಿಸಿ ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಹಾಗೂ ಪತ್ರಕರ್ತರು ಗರಂ ಆದ ಘಟನೆ ಆ. 2 ರಂದು ವರದಿಯಾಗಿದೆ.


ಕೊಲ್ಲಮೊಗ್ರ ಕಲ್ಮಕಾರು ಮಳೆ ದುರಂತ ನೋಡಲು ಉಸ್ತುವಾರಿ ಸಚಿವ ಸುನಿಲ್ ಕುಮಾರ್ ರವರು ಆಗಮಿಸಿದ್ದು ಸುಬ್ರಹ್ಮಣ್ಯದಿಂದ ಮಲೆಯಾಳ ಐನೆಕಿದು ರಸ್ತೆಯಾಗಿ ಹೋಗುವುದಾಗಿ ತಿಳಿಸಲಾಗಿತ್ತು. ಆದರೆ ಸಚಿವರ ವಾಹನ ಮಲೆಯಾಳದಲ್ಲಿ ನಿಲ್ಲಿಸದೇ ನಡುಗಲ್ಲು ಕಡೆ ಹೋಯ್ತು. ಜಿಲ್ಲಾಧಿಕಾರಿಗಳ ವಾಹನ ಮಲೆಯಾಳ ಬಳಿ ನಿಂತು ಐನೆಕಿದು ರಸ್ತೆಯಾಗಿ ತೆರಳುವುದಿತ್ತು. ಈ ಸಂದರ್ಭ ಸಚಿವರ ಬೆಂಗಾವಲು ಪಡೆಯ ಮೇಲೆ ಅಕ್ರೋಶಗೊಂಡ ಡಿ. ಸಿ. ಯವರು ಹತ್ತಿರ ದಾರಿ ಬಿಟ್ಟು ಯಾಕೆ ಅಲ್ಲೆ ಹೋಗ್ತಿರಾ. ನಾನು ನಿನ್ನೆ ದಿನ ಈ ರಸ್ತೆಯಲ್ಲೇ ಹೋಗಿದ್ದೆಯಲ್ವಾ ಎಂದು ಕೋಪದಲ್ಲಿ ನುಡಿದರು. ಈ ದಾರಿಯಿಂದ ಸಚಿವರು ಹೋಗುತ್ತಿದ್ದರೆ ರಸ್ತೆಯ ಅವಸ್ಥೆ ಅವರಿಗೆ ಗೊತ್ತಾಗಿ ಅಭಿವೃದ್ಧಿ ಅನುದಾನ ತರಿಸಲು ಅನುಕೂಲವಾಗುತ್ತಿತ್ತು ಎಂದು ಪತ್ರಕರ್ತರೂ ಹೇಳಿಕೊಂಡು , ದಾರಿ ತಪ್ಪಿಸಿದವರ ಬಗ್ಗೆ ಗರಂ ಆದರು.

 

ಬಳಿಕ ಅವರೆಲ್ಲರೂ ಹರಿಹರಕ್ಕೆ ಬಂದು ಸಚಿವರನ್ನು ದಾರಿ ತಪ್ಪಿಸಿದ ಬಗ್ಗೆ ಪ್ರಶ್ನಿಸಿದರೆನ್ನಲಾಗಿದೆ. ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿ, ಪಕ್ಷದ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ ಮೊದಲಾದವರು ಸಚಿವರ ಜತೆಗಿದ್ದರು.
ಈ ವೇಳೆ ಕೊಲ್ಲಮೊಗ್ರ ಗ್ರಾ.ಪಂ. ಅಧ್ಯಕ್ಷ ಉದಯ ಕೊಪ್ಪಡ್ಕ ಅವರು ” ರಸ್ತೆಗೆ ನಾವು ಅನುದಾನ ಇರಿಸಿದ್ದೇವೆ. ಕಾಮಗಾರಿ ನಾವು ಮಾಡಿಸುತ್ತೇವೆ. ಅದಕ್ಕೆ ಮಾಧ್ಯಮದವರ ಅಗತ್ಯವಿಲ್ಲ ” ಎಂದು ಉಡಾಫೆಯಾಗಿ ಹೇಳಿದರೆನ್ನಲಾಗಿದೆ. ಇತರ ನಾಯಕರೂ ಅದೇ ಧಾಟಿಯಲ್ಲಿ ಪ್ರತಿಕ್ರಿಯಿಸಿದರೆಂದು ಗರಂ ಆದ ಬಹುತೇಕ ಮಾಧ್ಯಮದವರು, ಸಚಿವರು ಹರಿಹರಪಲ್ಲತಡ್ಕದಲ್ಲಿ ಪ್ರಾಕೃತಿಕ ವಿಕೋಪದಿಂದಾದ ಹಾನಿ ವೀಕ್ಷಣೆಯ ವೇಳೆ ಮಾತ್ರ ಜತೆಗಿದ್ದು ಕೊಲ್ಲಮೊಗ್ರು ಕಡೆ ಹೋಗದೆ ಸುಬ್ರಹ್ಮಣ್ಯಕ್ಕೆ ಹಿಂತಿರುಗಿದರು.

ಸಚಿವರು ಸಮೀಕ್ಷೆ ಮುಗಿಸಿ ಹಿಂತಿರುಗಿ ಹರಿಹರೇಶ್ವರ ದೇವಸ್ಥಾನಕ್ಕೆ ಹೋಗಿ ಊಟ ಮುಗಿಸಿ ಬರುವಾಗ ಐನೆಕಿದು ರಸ್ತೆಯ ಅಭಿವೃದ್ಧಿ ಸಮಿತಿ ಮುಂದಾಳು ಸತೀಶ್ ಕೂಜುಗೋಡು ಮತ್ತಿತರರು ಬಂದು ಐನೆಕಿದು ರಸ್ತೆ ನೋಡಲು ಬರಬೇಕೆಂದು ಸಚಿವರನ್ನು ವಿನಂತಿಸಿದರು. ಆಗಲೂ ಸಚಿವರನ್ನು ಅಲ್ಲಿಗೆ ಹೋಗಲು ಬಿಡದೆ ತಡವಾಯಿತೆಂದು ಹೇಳಿ ‘ ಸುಳ್ಯಕ್ಕೆ ಕರೆದೊಯ್ಯುಲಾಯಿತೆಂದೂ ಹೇಳಲಾಗುತ್ತಿದೆ.

ಒಟ್ಟಿನಲ್ಲಿ ತೀರಾ ಹದಗೆಟ್ಟಿರುವ ಮಲೆಯಾಳ – ಐನೆಕಿದು ರಸ್ತೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ನೋಡದಂತೆ ತಡೆಯುವಲ್ಲಿ ಆಡಳಿತ ಪಕ್ಷದ ಮುಖಂಡರು ಯಶಸ್ವಿಯಾಗಿದ್ದಾರೆ. ಆ ರಸ್ತೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದು ಜನರ ಬವಣೆ ನೀಗಿಸುವಲ್ಲಿ ಅವರು ಯಶಸ್ವಿಯಾಗುವರೇ ಕಾದು ನೋಡಬೇಕಾಗಿದೆ.

LEAVE A REPLY

Please enter your comment!
Please enter your name here