ಸಂಪಾಜೆ ಗ್ರಾಮ ಕಲ್ಲುಗುಂಡಿ ಪ್ರಾಕೃತಿಕ ವಿಕೋಪದಿಂದ ಆದ ನಷ್ಟಕ್ಕೆ 10 ಕೋಟಿ ರೂಪಾಯಿ ಪರಿಹಾರ ನೀಡಬೇಕು : ಟಿ.ಎಂ.ಶಹೀದ್

0
362

ಜಲಪ್ರಳಯ ಉಂಟಾಗಿ ಇಡೀ ಕಲ್ಲು ಗುಂಡಿ ಜನತೆ ಸಂಕಷ್ಟಕ್ಕೀಡಾದಾಗ ಸ್ಥಳೀಯ ಸಂಘ ಸಂಸ್ಥೆಗಳೇ ಆಶ್ರಯವಾಗಿ ಬಂದದ್ದು : ಜಿ.ಕೆ.ಹಮೀದ್

p>

ಕಲ್ಲುಗುಂಡಿ ಕಳೆದ ಒಂದು ವಾರದಿಂದ ,ಮಳೆ ಹಾನಿ, ಜಲಪ್ರಳಯ ಸಂಭವಿಸಿ ಕೋಟ್ಯಾಂತರ ರೂ ನಷ್ಟ ಸಂಭವಿಸಿದ್ದು ಸರಕಾರ ಪರಿಹಾರವಾಗಿ 10 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಾಹೀದ್ ತೆಕ್ಕಿಲ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಾಕೃತಿಕ ವಿಕೋಪ, ಭೂಕಂಪನ, ಜಲಪ್ರಳಯದಿಂದ ಮನೆ, ಅಂಗಡಿ, ಕೃಷಿ, ರಸ್ತೆ, ಸೇತುವೆ ಸೇರಿ ಕೋಟ್ಯಾಂತರ ರೂಗಳ ನಷ್ಟ ಉಂಟಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಇದೇ ಪರಿಸರದಲ್ಲಿ ಮೂರು ಅಂಗಡಿಗಳು ಬೆಂಕಿ ಅವಘಡದಿಂದ ಸುಟ್ಟು ಬಸ್ಮವಾಗಿದ್ದು ಅವರಿಗೆ ಯಾವುದೇ ಪರಿಹಾರ ಇದುವರೆಗೆ ಸಿಗಲಿಲ್ಲ.


ಸರಕಾರದ ಪ್ರತಿನಿಧಿಗಳು ಬಂದು ಕೇವಲ ಭರವಸೆಗಳನ್ನು ಮಾತ್ರ ನೀಡುವುದಲ್ಲದೆ ಒಂದು ನಯಾಪೈಸೆಯೂ ಕೂಡ ಪರಿಹಾರದ ಮೊತ್ತ ಸಿಗಲಿಲ್ಲ.
ಕಳೆದ 3 ದಿನಗಳಿಂದ ಇಡೀ ಸಂಪಾಜೆ ಮುಳುಗಿದೆ. ಆದರೆ ಸರಕಾರದಿಂದ ಯಾವುದೇ ಸ್ಪಂದನೆ, ಪರಿಹಾರ ದೊರಕಿಲ್ಲ. ಮುಖ್ಯಮಂತ್ರಿ,ಸಚಿವರುಗಳು, ಎಲ್ಲಾ ಅಧಿಕಾರಿಗಳು ಗ್ರಾಮಕ್ಕೆ ಬಂದರೂ ಜನರಿಗೆ ಯಾವುದೇ ಪ್ರಯೋಜನ ಆಗಿಲ್ಲ.
ಸ್ಥಳೀಯ ಪಂಚಾಯತ್ ಅಧ್ಯಕ್ಷರಾದ ಜಿಕೆ ಹಮೀದ್ ರವರು ಪಂಚಾಯತಿ ಸದಸ್ಯರುಗಳನ್ನು ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಯುವಕರನ್ನು ಸೇರಿಸಿಕೊಂಡು ಹಗಲಿರುಳೆನ್ನದೆ ಸಂತ್ರಸ್ತರಿಗಾಗಿ ದುಡಿಯುತ್ತಿದ್ದಾರೆ. ಭೂಕಂಪನದಿಂದ ಗ್ರಾ.ಪಂ.ಸದಸ್ಯ ಅಬೂಸಾಲಿ ಅವರ ಮನೆ ಬಿರುಕು ಬಿಟ್ಟು ಅವರು ಮನೆಯನ್ನೇ ಬಿಡಬೇಕಾಗಿ ಬಂದರೂ ಅವರಿಗೆ ಒಂದು ರೂ ಪರಿಹಾರ ಸಿಕ್ಕಿಲ್ಲ ಅದೇ ರೀತಿ ಇನ್ನೂ ಹಲವಾರು ಕಡೆಗಳಲ್ಲಿ ಈ ರೀತಿಯ ಸಮಸ್ಯೆಗಳು ಎದುರಾಗಿದ್ದು ಸಂಬಂಧಪಟ್ಟವರಿಂದ ಯಾವುದೇ ಸ್ಪಂದನೆ ದೊರಕಲಿಲ್ಲ ಎಂದು ಅವರು ಹೇಳಿದರು.

ಕಲ್ಲುಗುಂಡಿಯ ಜಲಪ್ರಳಯ ಸಂದರ್ಭದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಬರದಿದ್ದಲ್ಲಿ ನಾವು ಸಂಪೂರ್ಣವಾಗಿ ಕಷ್ಟಕ್ಕೆ ಸಿಲುಕುತಿದ್ದೆವು -ಜಿ.ಕೆ.ಹಮೀದ್:
ಜಲಪ್ರಳಯ ಬಂದು ಮೂರು ದಿನಗಳಿಂದ ಸಂಪಾಜೆ ಗ್ರಾಮ
ಮುಳುಗಿದರೂ ಸರಕಾರದಿಂದ‌ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಸ್ಥಳೀಯ ಸಂಘ ಸಂಸ್ಥೆಗಳು ರಕ್ಷಣಾ ಕಾರ್ಯಕ್ಕೆ ಬರದಿದ್ದರೆ ನಾವು ತುಂಬಾ ಸಮಸ್ಯೆಯನ್ನು ಪಡಬೇಕಾಗಿ ಬರುತ್ತಿತ್ತು. ಸರಕಾರ ಮತ್ತು ಅಧಿಕಾರಿಗಳು ಮಾಡುವ ಕೆಲಸವನ್ನು ಸಂಘಟನೆಯವರು ಬಂದು ಮಾಡಿದ್ದಾರೆ ಅವರಿಗೆ ನಾವು ಅನಂತ ಅಭಿನಂದನೆಯನ್ನು ಸಲ್ಲಿಸುತ್ತೇವೆ ಸಂಪಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ ಕೆ ಹಮೀದ್ ಹೇಳಿದರು.
ತಾಲೂಕು ಆಡಳಿತ ಕಳಿಸಿದ ವಿಪತ್ತು ನಿರ್ವಹಣಾ ತಂಡದ ಬಳಿಯಲ್ಲಿ ಯಾವುದೇ ಸಲಕರಣೆಗಳು ಇಲ್ಲ, ಗ್ರಾಮ ಮಟ್ಟದ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಗ್ರಾಮಕ್ಕೆ ಖಾಯಂ ಆಗಿರುವ ಉತ್ಸಾಹಿ ಅಧಿಕಾರಿಗಳ ನಿಯೋಜನೆ ಮಾಡಿ ಎಂದು ಅವರು ಒತ್ತಾಯಿಸಿದರು. ಗ್ರಾಮದಲ್ಲಿರುವ ರೈತಾಪಿ ವರ್ಗದ ಜನರು ಸರ್ವಸ್ವವನ್ನೂ ಕಳೆದುಕೊಂಡಿದ್ದಾರೆ. ಅಡಿಕೆ, ರಬ್ಬರ್,ತೆಂಗು, ಬಾಳೆ, ಕೊಕ್ಕೊ ಸೇರಿ ಎಲ್ಲಾ ಕೃಷಿಗಳು ಸಂಪೂರ್ಣ ನಾಶವಾಗಿದೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಗ್ರಾಮದಲ್ಲಿ ಮಳೆ ಹಾನಿಗೆ 33 ಮನೆ, 40 ಅಂಗಡಿಗಳಿಗೆ ನಾಶ ನಷ್ಟ ಆಗಿದೆ.ಇದರಲ್ಲಿ 3 ಮನೆ ಸಂಪೂರ್ಣ ಹಾನಿಯಾಗಿದೆ. ಜಲಪ್ರಳಯದಿಂದ ನಷ್ಟ ಅನುಭವಿಸಿರುವ ಪ್ರತಿಯೊಬ್ಬ ವರ್ತಕರಿಗೂ ಸರಕಾರ ಅವರಿಂದ ಪಡೆದಿರುವ ಜಿ ಎಸ್ ಟಿ ಹಣದಿಂದ ಪರಿಹಾರವನ್ನು ನೀಡಬೇಕೆಂದು ಅವರು ಆಗ್ರಹಿಸಿದರು.
ಭೂ ಕಂಪನದಿಂದ‌ 31 ಮನೆಗೆ ಹಾನಿ ಸಂಭವಿಸಿದ್ದು ರಸ್ತೆ, ಸೇತುವೆಗಳಿಗೆ ತೀವ್ರ ತರಹದ ಹಾನಿ ಉಂಟಾಗಿದೆ ಎಂದರು. ಗ್ರಾಮದಲ್ಲಿ ರಾಷ್ಟೀಯ ಹೆದ್ದಾರಿಯ ನಿರ್ವಹಣೆ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಸರಿಯಾಗಿ‌ ಮಾಡುತ್ತಿಲ್ಲ. ಹೆದ್ದಾರಿ ಇಲಾಖೆಯ ಕೆಲಸವನ್ನೂ ಗ್ರಾಮ ಪಂಚಾಯತ್ ಮಾಡಬೇಕಾದ ಸ್ಥಿತಿ ನಿರ್ಮಾಣ ಆಗಿದೆ ಎಂದು ಹಮೀದ್ ಹೇಳಿದರು. ಗೂನಡ್ಕದಲ್ಲಿ ಚರಂಡಿ ವ್ಯವಸ್ಥೆ 3 ವರ್ಷ ಆದರೂ ಸರಿಪಡಿಸಿಲ್ಲ ಎಂದರು. ಸಜ್ಜನ ಪ್ರತಿಷ್ಠಾನ ಸಂಸ್ಥೆಯ ವತಿಯಿಂದ ಪ್ರಾಕೃತಿಕ ವಿಕೋಪದಲ್ಲಿ ಸಿಲುಕಿ ಸಂಕಷ್ಟಕೊಳ್ಳಲಾದ ಸುಮಾರು 20ಕ್ಕೂ ಹೆಚ್ಚು ಮಂದಿ ಜನರಿಗೆ ಆಶ್ರಯವನ್ನು ನೀಡಿ, ಅವರಿಗೆ ಬೇಕಾದ ಊಟ ಉಪಹಾರಗಳ ವ್ಯವಸ್ಥೆಯನ್ನು ನೀಡುವಲ್ಲಿ ಸಹಕರಿಸಿದ್ದಾರೆ. ಪಂಚಾಯತಿ ವತಿಯಿಂದ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದರು. ಪ್ರಾಕೃತಿಕ ದುರಂತದ ಸಂದರ್ಭದಲ್ಲಿ ಧರ್ಮಸ್ಥಳ ಶೌರ್ಯ ವಿಪತ್ತು ತಂಡ, ಎಸ್‌ಎಸ್‌ಎಫ್, ಎಸ್‌ಕೆಎಸ್ಎಸ್ಎಫ್, ಯಶಸ್ವಿ ಯುವಕ ಮಂಡಲ, ಇವರಿಗೆ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ತಲಾ 10 ಸಾವಿರ ರೂಗಳ ಸಲಕತಣೆಗಳನ್ನು ಪಂಚಾಯತ್ ವತಿಯಿಂದ ನೀಡಲು ನಿರ್ಧರಿಸಲಾಗಿದೆ. ಪಂಚಾಯತ್ ಸದಸ್ಯರ ಒಂದು ತಿಂಗಳ ಸಂಬಳವನ್ನು ಪ್ರಾಕೃತಿಕ ವಿಕೋಪ, ಬೆಂಕಿ ಅವಘಡದಲ್ಲಿ ನಷ್ಟ ಆದವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಗ್ರಾ.ಪಂ.ಸದಸ್ಯ ಕೆ.ಆರ್. ಜಗದೀಶ್ ರೈ ಈ ಸಂದರ್ಭ ಮಾತನಾಡಿ ಈ ಭಾಗದ ಕೃಷಿಕರ ಆಧಾರ ಸ್ತಂಭವಾಗಿರುವ ರಬ್ಬರ್ ಕೊಕ್ಕೋ ಅಡಿಕೆ ತೆಂಗು ಈ ಬೆಳೆಗಳು ನೆರೆ ನೀರಿನಿಂದ ಸಂಪೂರ್ಣವಾಗಿ ಮುಳುಗಿದ ಹಿನ್ನೆಲೆಯಲ್ಲಿ ಮುಂದಿನ ವರ್ಷ ಇಳುವರಿಯಲ್ಲಿ ತುಂಬಾ ಕುಂಠಿತಗೊಳ್ಳಲಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಕೂಡಲೆ ಸ್ಪಂದಿಸಿ ರೈತಪಿ ವರ್ಗದವರಿಗೆ ಪರಿಹಾರದ ಮೊತ್ತವನ್ನು ಘೋಷಿಸಬೇಕು.
ಅದೇ ರೀತಿ ಇಂತಹ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಂವಿಧಾನ ಪ್ರಕಾರ ಹಕ್ಕು ಅಧಿಕಾರವಿದೆ. ಆದ್ದರಿಂದ ಜನತೆಯ ಸಂಕಷ್ಟಕ್ಕೆ ಅಧಿಕಾರಿಗಳು ಸ್ಪಂದನೆ ನೀಡದಿದ್ದಲ್ಲಿ ಅವರು ಮತ್ತೆ ಯಾರ ಬಳಿ ಹೋಗಬೇಕೆಂದು ಜಗದೀಶ್ ರೈ ಪ್ರಶ್ನಿಸಿದರು.

LEAVE A REPLY

Please enter your comment!
Please enter your name here