ಸುಳ್ಯ ನ್ಯಾಯಾಲಯದಲ್ಲಿ ಕೆನರಾ ಬ್ಯಾಂಕ್ ಗ್ರಾಹಕರ ಅದಾಲತ್, ಒಂದು ಕೋಟಿ ಗೂ ಹೆಚ್ಚು ಮರುಪಾವತಿ

0

 

ರಾಜ್ಯ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಆಗಸ್ಟ್ 13 ರಂದು ಮೆಗಾ ಲೋಕ ಅದಾಲತ್ ಕಾರ್ಯಕ್ರಮ ನಡೆಯಲಿದೆ. ಇದರ ಪೂರ್ವಭಾವಿ ಅಂಗವಾಗಿ ಅಗಸ್ಟ್ 6ರಂದು ಸುಳ್ಯ ತಾಲೂಕಿನ ಕೆನರಾ ಬ್ಯಾಂಕ್ ನಿಂದ ಸಾಲ ಪಡೆದಿರುವ ಗ್ರಾಹಕರಿಗೆ ಅದಾಲತಿಗೆ ಅವಕಾಶವನ್ನು ಸುಳ್ಯ ಕಾನೂನು ಸೇವೆಗಳ ಸಮಿತಿ ಹಾಗೂ ಕೆನರಾ ಬ್ಯಾಂಕ್ ವತಿಯಿಂದ ಸುಳ್ಯ ವಕೀಲರ ಸಭಾಭವನದಲ್ಲಿ ಕಲ್ಪಿಸಲಾಗಿತ್ತು.

ಬ್ಯಾಂಕಿನಿಂದ ಪಡೆದಿರುವ ಸಾಲಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾದ ಗ್ರಾಹಕರಿಪ್ರಯೋಜನವನ್ನು ಪಡೆದುಕೊಳ್ಳಲು ಸೂಚನೆಯನ್ನು ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಅದಾಲತ್ತಿನಲ್ಲಿ ಸುಮಾರು 60ಕ್ಕೂ ಹೆಚ್ಚು ಗ್ರಾಹಕರು ಭಾಗವಹಿಸಿ ಸುಮಾರು 35ಕ್ಕೂ ಹೆಚ್ಚು ಸಾಲದ ಪ್ರಕ್ರಿಯೆಗಳನ್ನು ಇತ್ಯರ್ಥಪಡಿಸಿಕೊಂಡರು.
ಈ ಸಂದರ್ಭದಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲ ಬಗೆಹರಿಯದೆ ಇದ್ದಂತಹ ಹಲವಾರು ಸಾಲ ವಸೂಲಾತಿಯ ಸಮಸ್ಯೆಗಳು ನ್ಯಾಯಾಧೀಶರ ಮತ್ತು ಬ್ಯಾಂಕ್ ಅಧಿಕಾರಿಗಳ ಸಮ್ಮುಖದಲ್ಲಿ ಮಾತುಕತೆ ನಡೆದು ಇತ್ಯರ್ಥಗೊಂಡವು.
ಬಹು ಮುಖ್ಯವಾಗಿ ಈ ಅದಾಲತ್ತಿನಲ್ಲಿ ಗುತ್ತಿಗಾರು ಮೂಲದ ವ್ಯಕ್ತಿಯೋರ್ವರ 35 ಲಕ್ಷ ರೂಪಾಯಿಗಳ ಸಾಲದ ಸಮಸ್ಯೆ 3 ಲಕ್ಷದ 50 ಸಾವಿರ ರೂಪಾಯಿಯಲ್ಲಿ ಇತ್ಯರ್ಥಗೊಂಡದ್ದು ವಿಶೇಷವಾಗಿತ್ತು.
ಅದೇ ರೀತಿ ಸುಮಾರು 75 ವರ್ಷದ ವೃದ್ಧರೋರ್ವರ ಮೂರು ಲಕ್ಷ ರೂಪಾಯಿಗಳ ಸಾಲದ ಮೊತ್ತವನ್ನು ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ವೈದ್ಯರು ನೀಡಿರುವಂತಹ ದಾಖಲೆ ಪತ್ರಗಳನ್ನು ಪರಿಶೀಲಿಸಿ ಕೇವಲ 35 ಸಾವಿರ ರೂಪಾಯಿಗಳಲ್ಲಿ ಅಂತ್ಯಗೊಳಿಸಲಾಯಿತು.
ಸುಳ್ಯ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ್ ಎ, ಹಾಗೂ ಕಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶೆ ಕು. ಅರ್ಪಿತಾ ರವರ ಉಪಸ್ಥಿತಿಯಲ್ಲಿ ಈ ಪ್ರಕರಣಗಳು ಇತ್ಯರ್ಥಗೊಂಡವು.
ಕೆನರಾ ಬ್ಯಾಂಕ್ ವಿಭಾಗೀಯ ಅಧಿಕಾರಿ ಸರ್ವೇಶ್, ರೀಜಿನಲ್ ಆಫೀಸರ್ ಗಳಾದ ಸಂಜೀವ ನಾಯ್ಕ, ಸುಳ್ಯ ಮುಖ್ಯ ಶಾಖೆಯ ಅಧಿಕಾರಿ ಸುಷ್ಮಾ, ಪುತ್ತೂರು ವಿಭಾಗದ ತೇಜ ಕುಮಾರ್, ಸುಳ್ಯ, ಕುರುಂಜಿ ಬಾಗ್ ಸಂಪಾಜೆ, ಗುತ್ತಿಗಾರು, ಜಾಲ್ಸೂರು, ಪಂಜ, ಮುಂತಾದ ಶಾಖೆಗಳ ವ್ಯವಸ್ಥಾಪಕರುಗಳು ಉಪಸ್ಥಿತರಿದ್ದರು.
ನ್ಯಾಯವಾದಿ ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು. ಬೆಳಿಗ್ಗೆ ಹತ್ತ ಗಂಟೆಯಿಂದ ಸಂಜೆ 4.00 ರವರೆಗೆ ಅದಾಲತ್ ಕಾರ್ಯಕ್ರಮ ನಡೆಯಿತು.
ತಾಲೂಕಿನ ವಿವಿಧ ಭಾಗಗಳಿಂದ ಕೆನರಾ ಬ್ಯಾಂಕಿನ ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಂಡರು.
ಕಾರ್ಯಕ್ರಮಕ್ಕೂ ಮೊದಲು ಉದ್ಘಾಟನಾ ಸಮಾರಂಭ ನೆರವೇರಿಸಿ ಸುಳ್ಯ ನ್ಯಾಯಾಲಯದಿಂದ ಒಂದು ವರ್ಷಗಳ ಸೇವೆಯ ಬಳಿಕ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿರುವ ಹಿರಿಯ ನ್ಯಾಯಾಧೀಶ ಸೋಮಶೇಖರ ಎ ರವರನ್ನು ಬ್ಯಾಂಕ್ ವತಿಯಿಂದ ಸನ್ಮಾನಿಸಿ ಸ್ಮರಣಿಕೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿರುವ ಕೆನರಾ ಬ್ಯಾಂಕ್ ಅಧಿಕಾರಿ ಸರ್ವೇಶ್ ಅಗಸ್ಟ್ 13 ರಂದು ಸುಳ್ಯ ನ್ಯಾಯಾಲಯದಲ್ಲಿ ಅದಾಲತ್ ಕಾರ್ಯಕ್ರಮ ಮತ್ತೆ ನಡೆಯಲಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.