ಸುಳ್ಯದಲ್ಲಿ ಗಣಿತ ಕಲಿಕಾ ಆಂದೋಲನದ ಕಾರ್ಯಾಗಾರ

0

 

ಸಾಮಾನ್ಯವಾಗಿ ಗಣಿತವನ್ನು ಕಬ್ಬಿಣದ ಕಡಲೆ ಎಂದು ಮಕ್ಕಳನ್ನು ಭಯ ಪಡಿಸಲಾಗುತ್ತದೆ. ಆದರೆ ಅಂತಹ ಭಯದ ಅಗತ್ಯವಿಲ್ಲ. ಅಮೂರ್ತ ಲೆಕ್ಕಗಳನ್ನು ಮೂರ್ತ ರೂಪದಲ್ಲಿ ಮಾಡುವ ಆವಿಷ್ಕಾರ ಸಿದ್ಧವಾಗಿದೆ. ಅಕ್ಷರ ಫೌಂಡೇಶನ್ ಸಂಶೋಧಿಸಿ ನಿರ್ಮಿಸಿರುವ ಗಣಿತ ಕಲಿಕಾ ಸಾಮಗ್ರಿಗಳು ಈ ಸಮಸ್ಯೆಯನ್ನು ಪರಿಹರಿಸಿವೆ. ಆ ಸಾಮಗ್ರಿಗಳ ಕಿಟ್ ಗಳನ್ನು ಈಗಾಗಲೇ ಸರಕಾರವು ಶಾಲೆಗಳಿಗೆ ಒದಗಿಸಿದೆ. ಇದೀಗ ಅವುಗಳ ಬಳಕೆಯ ಬಗ್ಗೆ ತಜ್ಞರಿಂದ ಕಾರ್ಯಾಗಾರಗಳನ್ನು ನಡೆಸಲು ಸುರತ್ಕಲ್ ನ ವಿದ್ಯಾಗಮ ಟ್ರಸ್ಟ್ ಮುಂದೆ ಬಂದಿದೆ. ಅಂತಹ ಕಾರ್ಯಾಗಾರವನ್ನು ಸುಳ್ಯದ ಸಂತ ಬ್ರಿಜಿಡ್ಸ್ ಶಾಲೆಯಲ್ಲಿ ನಡೆಸಲು ಸಂತೋಷವಾಗುತ್ತಿದೆ ಎಂಬುದಾಗಿ ವಿದ್ಯಾಗಮದ ಸ್ಥಾಪಕ-ನಿರ್ದೇಶಕ ಶ್ರೀ ವಾಸುದೇವ ಐತಾಳ್ ರವರು ಹೇಳಿದರು. ಅವರು ಇದೇ ೬-೮-೨೦೨೨ ರಂದು ಸುಳ್ಯ ತಾಲೂಕಿನ ಸರಕಾರಿ ಶಾಲೆಗಳಲ್ಲಿ ನಾಲ್ಕನೇ ತರಗತಿಗಳ ಶಿಕ್ಷಕರನ್ನು ಆಮಂತ್ರಿಸಿ ನಡೆಸಲಾದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮಾತಾಡಿದರು.

 

ಈ ಕಾರ್ಯಾಗಾರವನ್ನು ಸಂತ ಬಿಜಿಡ್ಸ್ ಶಾಲಾ ಅಧ್ಯಕ್ಷರಾದ ರೆವರೆಂಡ್ ಫಾದರ್ ವಿಕ್ಟರ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸುಳ್ಯದ ಬಿ. ಇ. ಒ. ಅಧ್ಯಕ್ಷತೆ ವಹಿಸಿದ್ದರು. ಸರಳವಾದ ಉದ್ಘಾಟನಾ ಕಾರ್ಯಕ್ರಮದ ಬಳಿಕ ಶ್ರೀಮತಿ ದಿವ್ಯಾ ರಾಜೇಶ್ ಅವರು ಇಡೀ ದಿನ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಸುಳ್ಯ ವಲಯದ 60 ಶಾಲೆಗಳ 63 ಗಣಿತ ಶಿಕ್ಷಕರು ಈ ಗಣಿತ ಕಲಿಕಾ ಆಂದೋಲನ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಕಲಿಸುವ ಕಲಿಯುವ ಸಾಮಗ್ರಿಗಳ ಕಿಟ್‌ಗಳ ಸಹಾಯದಿಂದ ಮೂರ್ತದಿಂದ ಅಮೂರ್ತದಕಡೆಗೆ ಪ್ರಾತಿನಿಧ್ಯಾತ್ಮಕ ಬೋಧನಾ ವಿಧಾನದಲ್ಲಿ ಮಕ್ಕಳಿಗೆ ಕಲಿಸುವ ತರಬೇತಿಯನ್ನು ನೀಡಲಾಯಿತು. ಇನ್ನು ಶಿಕ್ಷಕ/ಶಿಕ್ಷಕಿಯರು ಈ ಪರಿಕಲ್ಪನೆಯನ್ನು ಬಳಸಿಕೊಂಡು ಮೂಲಭೂತ ಗಣಿತ ಬೋಧನೆಯನ್ನು ಅವರ ಶಾಲೆಗಳಲ್ಲಿ ಅಳವಡಿಸ ಬೇಕಾಗಿದೆ. ಬುನಾದಿಯಲ್ಲಿ ಮಕ್ಕಳ ಗಣಿತದ ಸಾಮರ್ಥ್ಯವನ್ನು ಹೆಚ್ಚಿಸಿದರೆ ಮುಂದೆ ಸಂಖ್ಯಾ ಜ್ಞಾನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಸುಲಭವಾಗುತ್ತದೆ. ಇಲ್ಲಿ ಭಾಗವಹಿಸಿದ ಶಿಕ್ಷಕರು ಅಂತಹ ಭರವಸೆ ಮೂಡಿಸಿದ್ದಾರೆ. ಇಂತಹ ಕಾರ್ಯಾಗಾರವನ್ನು ಮಂಗಳೂರಿನಲ್ಲಿ ನಡೆಸಿದ್ದನ್ನು ವೀಕ್ಷಿಸಿದ ಜಿಲ್ಲಾ ಉಪನಿರ್ದೇಶಕ ಶ್ರೀ ಕೆ. ಸುಧಾಕರ್ ಅವರು ಎಲ್ಲಾ ತಾಲೂಕು ಕೇಂದ್ರಗಳಲ್ಲಿ ನಡೆಸಲು ಮುಂದೆ ಬರುವಂತೆ ಹೇಳಿದಾರೆಂದು ವಿದ್ಯಾಗಮ ಟ್ರಸ್ಟ್ ನ ಸ್ಥಾಪಕ ಶ್ರಿ ಪಣಂಬೂರು ವಾಸುದೇವ ಐತಾಳರು ಸಮಾರೋಪ ಭಾಷಣದಲ್ಲಿ ಹೇಳಿದರು.

ಪ್ರಸ್ತುತ ಕಾರ್ಯಾಗಾರವನ್ನು ನಡೆಸಿಕೊಟ್ಟ ಶ್ರೀಮತಿ ದಿವ್ಯಾ ರಾಜೇಶ್ ಅವರು ಸುಳ್ಯದ ಶಿಕ್ಷಕರು ಉತ್ಸಾಹ ಮತ್ತು ಶಿಸ್ತಿನಿಂದ ಭಾಗವಹಿದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅವರನ್ನು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಸ್ಮರಣಿಕೆ ನೀಡಿ ಗೌರವಿಸಿದರು.

ಧಾರವಾಡದಿಂದ ಬಂದಿದ್ದ ಅಕ್ಷರ ಫೌಂಡೇಶನ್ ನ ವಿಭಾಗೀಯ ನಿರ್ದೇಶಕಿ ಶ್ರೀಮತಿ ಏಂಜಲೀನಾರವರು ಸುಳ್ಯದ ಸರಕಾರಿ ಶಾಲೆಗಳಲ್ಲಿ ಗಣಿತದ ಕಲಿಕೆಯನ್ನು ಶಿಕ್ಷಕರು ಸರಳಗೊಳಿಸುವರೆಂದು ಆಶಿಸಿದರು.

ಸುಳ್ಯದ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶ್ರೀಮತಿ ಶೀತಲ್ ಅವರು ನಿರ್ದೇಶಿಸಿದ ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಣ ಸಂಯೋಜಕಿ ಶ್ರೀಮತಿ ಸಂಧ್ಯಾ ವಾಗ್ಲೆಯವರು ವಂದನಾರ್ಪಣೆ ಮಾಡಿದರು.

 

LEAVE A REPLY

Please enter your comment!
Please enter your name here