ಪ್ರಕೃತಿ ಮಡಿಲಲ್ಲಿ ಕಲಿಯುವುದೇ ನಿಜವಾದ ಶಿಕ್ಷಣ. : ಡಿ.ಡಿ.ಪಿ.ಐ. ಸುಧಾಕರ್

0

“ಸ್ನೇಹ ಶಾಲೆ ವಿಭಿನ್ನ ಪರಿಸರದಲ್ಲಿ ವಿಶಿಷ್ಟ ಅನುಭವದ ಕೇಂದ್ರ. ವಿಜ್ಞಾನ ಕೇಂದ್ರವೊಂದು ವಿಜ್ಞಾನಿಗಳ ಕ್ರಿಯಾಶೀಲತೆಗೆ ವೇದಿಕೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಿರಿ. ಇಲ್ಲದೆ ಇರುವ ವಿಷಯದ ಬಗ್ಗೆ ಕನವರಿಸದೆ ಇದ್ದದ್ದನ್ನು ಒಪ್ಪಿಕೊಂಡು ಅಪ್ಪಿಕೊಂಡು ಬೆಳೆಯುವುದೇ ಜೀವನ. ಪ್ರಕೃತಿಯ ಮಡಿಲಲ್ಲಿ ಕಲಿಯುವ ಕಲಿಕೆಯೇ ನಿಜವಾದ ಶಿಕ್ಷಣ. ಸ್ನೇಹ ಶಾಲೆಯ ಎಲ್ಲಾ ಅವಕಾಶಗಳನ್ನು ನೀವು ಅನುಭವಿಸಿ ಬೆಳೆದವರು. ಇಲ್ಲಿ ಜೀವನ ಪಾಠವಿದೆ, ಅದ್ಭುತ ಕಲಿಕೆಯಿದೆ. ಇಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಂಸ್ಥೆಯ ರಾಯಭಾರಿಗಳಾಗಿ ಈ ಸಂಸ್ಥೆಯ ಬೆಳವಣಿಗೆಗೆ ಮುನ್ನುಡಿ ಬರೆಯಿರಿ. ಎಲ್ಲರ ಕನಸು ನನಸಾಗಲಿ” ಎಂದು ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾಗಿರುವ ಸುಧಾಕರ ಅವರು ಹೇಳಿದರು.

ಅವರು ಆ.10ರಂದು ಸ್ನೇಹ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ವಿಜ್ಞಾನ ಸಂಪನ್ಮೂಲ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆಯವರು ಮಾತನಾಡಿ “ಶಿಕ್ಷಣದ ಪ್ರಯೋಗದ ಸಫಲತೆಗೆ ಮಕ್ಕಳೇ ಸಾಕ್ಷಿ. ಹಿರಿಯ ವಿದ್ಯಾರ್ಥಿಗಳು ಮಾಡಿದ ಸಾಧನೆಯು ನಮ್ಮ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿ. ಮಕ್ಕಳ ಸಾಮರ್ಥ್ಯ ಬೆಳೆಸಲು ನಾವು ಅವಕಾಶಗಳನ್ನು ಒದಗಿಸಿದಾಗ ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದರು. ಈ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ನಿರ್ದೇಶಕರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ ಸಂಚಾಲಕರಾದ ಡಾಕ್ಟರ್ ವಿದ್ಯಾಶಾಂಭವ ಪಾರೆ ಇವರು ಉಪಸಿತರಿದ್ದರು.
ಸಂಸ್ಥೆ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಇವರು ಸ್ವಾಗತಿಸಿ, ವಿಜ್ಞಾನ ಶಿಕ್ಷಕಿ ಅಮೃತ ಕೆ ಧನ್ಯವಾದವಿತ್ತರು. ಪ್ರತಿಮಾಕುಮಾರಿ ಕೆ. ಎಸ್ ನಿರೂಪಿಸಿದರು. ಈ ಸಂದರ್ಭದಲ್ಲಿ ಶಿಕ್ಷಕ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸಿತರಿದ್ದರು.

ಕಾರ್ಯಕ್ರಮಕ್ಕೆ ಮೊದಲು ಶಾಲೆಯಲ್ಲಿರುವ ಬರಹದ ಮನೆ, ಗುರುಕುಲ, ಕಲಾಶಾಲೆ, ಭಾರತ ದರ್ಶನ, ವಿಜ್ಞಾನ ಉದ್ಯಾನ, ಔಷಧೀಯವನ, ಸೂರ್ಯಾಲಯ, ವೃತ್ತಾಕಾರದ ತರಗತಿ ಕೊಠಡಿಗಳು, ಸತ್ಯದ ಅಂಗಡಿ, ಪ್ರಯೋಗಶಾಲೆ, ಮಕ್ಕಳ ಚಿತ್ರ_ಸಾಹಿತ್ಯದ ಹಸ್ತಪ್ರತಿಗಳು, ಆಟಿಗೆಗಳ ನಿರ್ಮಾಣ ಮುಂತಾದ ಶಿಕ್ಷಣ ಸೌಲಭ್ಯಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.