ಸಂಪಾಜೆ ಪ್ರಾಕೃತಿಕ ವಿಕೋಪ ಪರಿಹಾರವಾಗಿ ಸರಕಾರ ವಿಶೇಷ ಪ್ಯಾಕೇಜ್ ನೀಡಬೇಕು : ಸಂಪಾಜೆ ವಲಯ ಕಾಂಗ್ರೆಸ್ ಆಗ್ರಹ

0
245

 

ಉಸ್ತುವಾರಿ ಸಚಿವರು ಸಂಪಾಜೆಗೆ ಬಾರದಿರುವುದು ಖಂಡನೀಯ : ಕೊಯಿಂಗಾಜೆ

 

ಕಳೆದ ವಾರ ಸಂಪಾಜೆಯಲ್ಲಿ ಪ್ರಾಕೃತಿಕ ವಿಕೋಪದ ಪರಿಣಾಮ 42 ಮನೆಗಳಿಗೆ, ಅಂಗಡಿಗಳಿಗೆ ಹಾನಿ, ಕೃಷಿ ಸೇರಿದಂತೆ ಸುಮಾರು‌ 10 ಕೋಟಿಗೂ ಅಧಿಕ ನಷ್ಟ ಸಂಭವಿಸಿದ್ದು, ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸಂಪಾಜೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ್ ಕೊಯಿಂಗಾಜೆ ಆಗ್ರಹಿಸಿದ್ದಾರೆ.

 

ಆ.11 ರಂದು ಸುಳ್ಯ ಸದರ್ನ್ ರೆಸಿಡೆನ್ಸಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಸಂಪಾಜೆ ಗ್ರಾಮದಲ್ಲಿ ಕಳೆದ 2 ತಿಂಗಳುಗಳ ಅವಧಿಯಲ್ಲಿ ಭೂಕಂಪನ ಹಾಗೂ ಪ್ರವಾಹದಿಂದಾಗಿ ಹಲವು ಮನೆಗಳು, ಅಂಗಡಿಗಳು ಹಾಗೂ ಕೃಷಿ ಪ್ರದೇಶಗಳು ಹಾನಿಯಾಗಿರುವುದು ಮತ್ತು ವಿದ್ಯುತ್‌ ಅವಘಡದಿಂದಾಗಿ ಕಲ್ಲುಗುಂಡಿಯ 3. ಅಂಗಡಿಗಳು ಅಗ್ನಿಗಾಹುತಿಯಾಗಿದೆ.

ಭೂಕಂಪನದಿಂದ ಸಂಪಾಜೆ ಗ್ರಾಮದ ಹಲವು ಮನೆಗಳು ಬಿರುಕು ಬಿಟ್ಟಿದ್ದು, ಮುಖ್ಯಮಂತ್ರಿಯಾದಿಯಾಗಿ ಸಚಿವರುಗಳು, ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದರೂ ಇದುವರೆಗೂ ಪರಿಹಾರ ದೊರಕದೆ ಇರುವುದು ಸರ್ಕಾರದ ನಿರ್ಲಕ್ಷ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಕಾಟಾಚಾರಕ್ಕೆ ಎಲ್ಲರೂ ಭೇಟಿ ನೀಡಿ ಹೋಗುತ್ತಾರ ಅದರೆ ಇದರಿಂದ ಭೂಕಂಪನ ಪೀಡಿತ ಸಂತ್ರಸ್ತರಿಗೆ ಯಾವುದೇ ಪ್ರಯೋಜನವಾಗಿಲ್ಲ.

ಇತ್ತೀಚೆಗೆ ಸುರಿದ ಭಾರೀ ಮಳಗೆ ಸಂಪಾಜೆ ಗ್ರಾಮದ ಹಲವು ಮನೆಗಳಿಗೆ, ಅಂಗಡಿಗಳಿಗೆ ಹಾಗೂ ಕೃಷಿ ಪ್ರದೇಶಗಳಿಗೆ ಹಾನಿಯಾಗಿದೆ. ಮನೆಗೆ ಹಾನಿಯಾದ ಸಂತ್ರಸ್ತರಿಗೆ ಕೇವಲ 10 ಸಾವಿರ ರೂ.ಗಳ ಪರಿಹಾರವನ್ನು ನೀಡಲಾಗಿದೆ, ಆದರ ಹಾನಿಯಾದ ಅಂಗಡಿಗಳಿಗೆ ಯಾವುದೇ ಪರಿಹಾರವನ್ನು ನೀಡಿಲ್ಲ, ಹಾನಿಯಾದ ಕೃಷಿ ಪ್ರದೇಶಗಳಿಗೆ ಹೆಕ್ಟೇರ್ ಗೆ 28,000 ರೂ.ಗಳ ಪರಿಹಾರವನ್ನು ನೀಡುವುದಾಗಿ ಮಾಹಿತಿ ಬಂದಿದೆ. ರಾಜ್ಯ ಸರ್ಕಾರವು ಹಳೆಯ ಮಾರ್ಗಸೂಚಿಗಳನ್ನು ಅನುಸರಿಸದ ಪ್ರಸ್ತುತ ನಷ್ಟ ಪ್ರಮಾಣವನ್ನು ಪರಿಗಣಿಸಿ ಹೆಚ್ಚಿನ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸುತ್ತೇವೆ. ಸಂಪಾಜೆ ಗ್ರಾಮವು ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಪ್ರವಾಹಕ್ಕೆ ತುತ್ತಾದರೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮಕ್ಕೆ ಭೇಟಿ ನೀಡದೆ ನಿರ್ಲಕ್ಷ್ಯ ಸಿದ್ದು ಖಂಡನೀಯ.

ಸಂಪಾಜೆ ಗ್ರಾಮದ ಕಲ್ಲುಗುಂಡಿಯ 3 ಅಂಗಡಿಗಳು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿಗಾಹುತಿಯಾಗಿ ಈವರೆಗೂ ಸರ್ಕಾರದಿಂದ ಯಾವುದೇ ಪರಿಹಾರ ದೊರಕಿಲ್ಲ, ಮಾನವೀಯ ನೆಲೆಯಲ್ಲಿ ಪರಿಹಾರವನ್ನು ನೀಡಲು ಸಾಧ್ಯವಿದೆಯಾದರೂ ಸರ್ಕಾರವು ಇದರ ಬಗ್ಗೆ ಗಮನ ಹರಿಸಿಲ್ಲ. ಈ ಎಲ್ಲಾ ವಿಚಾರಗಳನ್ನು ರಾಜ್ಯ ಸರ್ಕಾರವು ವಿಶೇಷವಾಗಿ ಪರಿಗಣಿಸಿ ಸಂಪಾಜೆ ಗ್ರಾಮದಲ್ಲಿ ಭೂಕಂಪನದಿಂದ ಹಾನಿಗೊಂಡ ಮನೆಗಳಿಗೆ, ಪ್ರವಾಹದಿಂದ ಹಾನಿಗೊಂಡ ಮನೆಗಳಿಗೆ, ಅಂಗಡಿಗಳಿಗೆ ಹಾಗೂ ಕೃಷಿ ಪ್ರದೇಶಗಳಿಗೆ ಮತ್ತು ಅಗ್ನಿಗಾಹುತಿಯಾದ 3 ಅಂಗಡಿಗಳಿಗೆ ಗರಿಷ್ಠ ಪ್ರಮಾಣದ ಪರಿಹಾರವನ್ನು ನೀಡಬೇಕೆಂದು ಸಂಪಾಜೆ ವಲಯ ಕಾಂಗ್ರೆಸ್ ಒತ್ತಾಯಿಸುತ್ತದೆ.

ಸಂಪಾಜೆ ಗ್ರಾಮದಲ್ಲಿ ಇತ್ತೀಚೆಗೆ ಆದಂತಹ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸಿದ ಎಲ್ಲಾ ಸಂಘ, ಸಂಸ್ಥೆಗಳಿಗೂ, ದಾನಿಗಳಿಗೂ, ಸ್ವಯಂಪ್ರೇರಿತರಾಗಿ ಸೇವೆಗೈದ ಹಿರಿಯರಿಗೂ, ಯುವಕರಿಗೂ ನಾವು ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಮುಖಂಡ ಮಹಮ್ಮದ್ ಕುಂಞಿ ಗೂನಡ್ಕ ಮಾತನಾಡಿ “ಮೊನ್ನೆಯ ಪ್ರಾಕೃತಿಕ ವಿಕೋಪದಿಂದ ಕಲ್ಲುಗುಂಡಿಯಲ್ಲಿ ಇಂದಿಗೂ ಭಯದ ವಾತಾವರಣ ಇದೆ. ಅಲ್ಲಿರುವ ನದಿಗೆ ಶಾಶ್ವತ ತಡೆಗೋಡೆ ಆಗಬೇಕು. ಜಿಲ್ಲಾಕೇಂದ್ರ ಗಳು ಮೊನ್ನೆ ಬಂದು ಪರಿಶೀಲನೆ ನಡೆಸಿ ಹೋಗಿದ್ದಾರೆ. ಹಾನಿಗೊಳಗಾದ ಮನೆಗೆ ರೂ.10 ಸಾವಿರ ಹೊರತು ಪಡಿಸಿ ಬೇರೆ ಯಾವುದೇ ಅನುದಾನ ಸರಕಾರದಿಂದ ಬಂದಿಲ್ಲ” ಎಂದು ಹೇಳಿದರು.

ಸಂಪಾಜೆ ಗ್ರಾ.ಪಂ. ಉಪಾಧ್ಯಕ್ಷೆ ಲಿಸ್ಸಿ ಮೋನಾಲಿಸ, ಸದಸ್ಯರುಗಳಾದ ಶೌವಾದ್ ಗೂನಡ್ಕ, ಸುಮತಿ ಶಕ್ತಿವೇಲು, ಅನುಪಮ, ವಿಮಲ ಪ್ರಸಾದ್, ಮಾಜಿ ಅಧ್ಯಕ್ಷೆ ಯಮುನಾ ಬಿ.ಎಸ್., ಯೂತ್ ಕಾಂಗ್ರೆಸ್ ಸುಳ್ಯ ವಿಧಾನಸಭಾಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸ.ವಲಯ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಲೂಕಾಸ್, ಪ್ರಮುಖರಾದ ಎ.ಕೆ. ಇಬ್ರಾಹಿಂ, ಜ್ಞಾನಶೀಲನ್, ಹೆಚ್.ಹಮೀದ್, ರೋನಾಲ್ಡ್ ಕ್ರಾಸ್ತ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here