ಕುಂಡಡ್ಕದಲ್ಲಿ ರಕ್ಷಾಬಂಧನ ಕಾರ್ಯಕ್ರಮ

0

 

ಸೋದರ ಭಾವದಿಂದ ಬದುಕುವ ಸಂದೇಶ : ಜಗನ್ನಾಥ ಪೂಜಾರಿ ಮುಕ್ಕೂರು

ಅಣ್ಣ- ತಂಗಿಯ ಸಂಬಂಧ ಸಾರುವ ರಕ್ಷಾ ಬಂಧನವು ಸನಾತನ ಪರಂಪರೆಯ ಭಾರತ ದೇಶದ ಸಂಸ್ಕೃತಿ, ಸಂಸ್ಕಾರದ ಭಾಗ ಎಂದು ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಹೇಳಿದರು.

ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ನೇಸರ ಯುವಕ ಮಂಡಲದ ಆಶ್ರಯದಲ್ಲಿ ಆ.12 ರಂದು ಕುಂಡಡ್ಕ ಹುಕ್ರ ಅವರ ನಿವಾಸದಲ್ಲಿ ನಡೆದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೇಸರಿ ಬಣ್ಣ ತ್ಯಾಗದ ಸಂಕೇತ. ಅದು ದೇಶಕೋಸ್ಕರ, ಸಮಾಜಕೋಸ್ಕರ ಸಮರ್ಪಣೆ ಭಾವದ ಗುರುತು. ಅಂತಹ ಬಣ್ಣದ ರಾಖಿಯನ್ನು ಕಟ್ಟಿ ಸೋದರ ಸ್ಥಾನದ ಮೂಲಕ ರಕ್ಷಣೆ ನೀಡುವ ರಕ್ಷಾಬಂಧನ ಒಂದು ಅರ್ಥಪೂರ್ಣ ಆಚರಣೆ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ನೇಸರ ಯುವಕ ಮಂಡಲ ಗೌರವಾಧ್ಯಕ್ಷ ಹಾಗೂ ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಇನ್ನೊಬ್ಬರಿಗೆ ರಕ್ಷಣೆ ನೀಡಬೇಕು ಎನ್ನುವ ಸಂದೇಶ ನೀಡುವ ರಕ್ಷಾ ಬಂಧನವು ಬದುಕಿಗೆ ಹಲವು ಮೌಲ್ಯಗಳ ಪಾಠವನ್ನು ಸಾರುತ್ತದೆ. ಕಷ್ಟದಲ್ಲಿರುವ ವ್ಯಕ್ತಿಗೆ ನೆರವು ನೀಡುವ ಮೂಲಕ ಪರಸ್ಪರ ಸಹಬಾಳ್ವೆಯ ಜೀವನ ಸಾಗಿಸುವ ಸಾರವು ಈ ಆಚರಣೆಯಲ್ಲಿದೆ ಎಂದರು.

ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ರೈ ಕಾಪು ಮಾತನಾಡಿ, ರಕ್ಷಾ ಬಂಧನ ಅನ್ನುವುದು ಜಗತ್ತಿನಲ್ಲೇ ಒಂದು ವಿಶಿಷ್ಟ ಆಚರಣೆ. ಮಹತ್ವದ ಸಂದೇಶ ಇರುವ ಈ ಹಬ್ಬ ರಾಷ್ಟ್ರೀಯ ಹಬ್ಬವಾಗಬೇಕು. ತನ್ಮೂಲಕ ಇದರ ಸಾರ ರಾಷ್ಟ್ರ, ಜಾಗತಿಕವಾಗಿ ಪಸರಿಸಬೇಕು ಎಂದರು.

ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ರಕ್ಷಾ ಬಂಧನ ಅಂದರೆ ಸೋದರ ಪ್ರೀತಿಯ ಹಬ್ಬ. ಪ್ರತಿ ವ್ಯಕ್ತಿಗೆ ಇದರ ಮಹತ್ವ ಅರಿವಾದರೆ ದೇಶವು ಶಾಂತಿಯ‌ ತೋಟವಾಗಲಿದೆ ಎಂದರು.

ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ ಮಾತನಾಡಿ, ಪರಸ್ಪರ ಪ್ರೀತಿ, ಸ್ನೇಹ, ನಂಬಿಕೆಯ ಬದುಕಿಗೆ ರಾಖೀ ಮೂಲಕ ಮತ್ತಷ್ಟು ಶಕ್ತಿ ತುಂಬುವ ರಕ್ಷಾ ಬಂಧನ ಆಚರಣೆಯನ್ನು ಸಮಿತಿಯು ಕಳೆದ ವರ್ಷ ಪ್ರಾರಂಭಿಸಿತ್ತು. ಈ ವರ್ಷವು ಸರ್ವರ ಸಹಭಾಗಿತ್ವದಿಂದ ಅರ್ಥಪೂರ್ಣ ರೀತಿಯಲ್ಲಿ ನಡೆದಿದೆ. ಇದರ ಮಹತ್ವ ಅರಿತು ನಾವೆಲ್ಲರೂ ಬದುಕು ಸಾಗಿಸೋಣ ಎಂದರು.
ವೇದಿಕೆಯಲ್ಲಿ ಹಿರಿಯರಾದ ಹುಕ್ರ, ಯಕ್ಷಗಾನ ಕಲಾವಿದ ಐತ್ತಪ್ಪ ಕಾನಾವು, ವಸಂತ ಕುಂಡಡ್ಕ ಮೊದಲಾದವರು ಉಪಸ್ಥಿತರಿದ್ದರು. ಕ್ರೀಡಾಪಟು ಪುರುಷೋತ್ತಮ ಕುಂಡಡ್ಕ ಸ್ವಾಗತಿಸಿ, ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು ವಂದಿಸಿದರು.

ರಾಖೀ ಕಟ್ಟಿ ಸಂಭ್ರಮ
ಹಿರಿಯರಾದ ಹುಕ್ರ ಕುಂಡಡ್ಕ ಅವರು ರಾಖೀ ಕಟ್ಟುವ ಮೂಲಕ ಹಬ್ಬದ ಆಚರಣೆಗೆ ಚಾಲನೆ ನೀಡಿದರು. ಕುಂಕುಮ ಹಣೆಗೆ ಹಚ್ಚಿ ಪರಸ್ಪರ ರಾಖಿ ಕಟ್ಟಿ ಶುಭ ಕೋರಲಾಯಿತು. ಬಳಿಕ ಸಿಹಿ ತಿಂಡಿ ಹಂಚಲಾಯಿತು. ಪುಟಾಣಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡರು.