53 ವರ್ಷಗಳಿಂದ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುತ್ತಿದ್ದಾರೆ ಸುಳ್ಯದ ಪ್ರಭಾಕರನ್ ನಾಯರ್

0

 

 

 

ಸ್ವಾತಂತ್ರ್ಯ, ಗಣರಾಜ್ಯೋತ್ಸವ, ಗಾಂಧಿ ಜಯಂತಿಯಂದು ಧ್ವಜಾರೋಹಣ

ತನ್ನ ವಾಹನಗಳಲ್ಲೂ ರಾಷ್ಟ್ರ ಧ್ವಜ ಹಾರಿಸಿ ರಾಷ್ಟ್ರ ಜಾಗೃತಿ ಮೆರೆದ ಸಂಘಟಕ

ಇದು ಸ್ವಾತಂತ್ರ್ಯೋತ್ಸವದ ಅಮೃತ ವರ್ಷ. ದೇಶಕ್ಕೆ ದೇಶವೇ ಸಂಭ್ರಮದಲ್ಲಿದೆ. ಈ ಬಾರಿ ಹರ್ ಘರ್ ಧ್ವಜ ಆಂದೋಲನಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇಂದಿನಿಂದಲೇ ಮನೆ ಮನೆಗಳಲ್ಲಿ ತಿರಂಗ ಹಾರಾಡುತ್ತಿದೆ.

ಆದರೆ ಇಲ್ಲೊಬ್ಬರು ಕಳೆದ 53 ವರ್ಷಗಳಿಂದ ತನ್ನ ಮನೆಯಲ್ಲಿ ರಾಷ್ಟ್ರೀಯ ದಿನಾಚರಣೆಗಳಂದು ರಾಷ್ಟ್ರ ಧ್ವಜಾರೋಹಣ ಮಾಡುತ್ತಿದ್ದಾರೆ.
ತನ್ನ ವಾಹನಗಳಲ್ಲೂ ಧ್ವಜ ಹಾರಿಸುತ್ತಿದ್ದಾರೆ.

ಇವರು ಸಿ.ಎಚ್. ಪ್ರಭಾಕರನ್ ನಾಯರ್ ಮಧುವನ. ಸುಳ್ಯದ ಡಿಸಿಸಿ ಬ್ಯಾಂಕ್‌ನಲ್ಲಿ ಸುದೀರ್ಘ ಕಾಲ ಪಿಗ್ಮಿ ಸಂಗ್ರಾಹಕರಾಗಿ ಸ್ವಯಂ ನಿವೃತ್ತರಾದವರು.
ಪ್ರಸ್ತುತ ಹೋಟೆಲ್ ಉದ್ಯಮಿಯಾಗಿರುವ ಇವರು ಸುಳ್ಯದ ಹಲವು ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲ ಪದಾಧಿಕಾರಿ.‌ ತನ್ನ ಹೊಟೇಲ್ ಇರುವ ಪರಿಸರದಲ್ಲಿ ಹಲವು ವರ್ಷ ಸ್ವಚ್ಛತಾ ಅಭಿಯಾನ ನಡೆಸಿದ ಸಾಧಕ.

ಮೂಲತಃ ಕಾಸರಗೋಡು ಜಿಲ್ಲೆಯ ಮುಳಿಯಾರು ಗ್ರಾಮದ ಚೇಕೋಡ್ ನವರಾದ ಪ್ರಭಾಕರನ್ ನಾಯರ್ ಬೋವಿಕ್ಕಾನ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ಅಂದರೆ 1971 ರಲ್ಲಿ ಬಾಂಗ್ಲಾ ವಿಮೋಚನೆಗಾಗಿ ಇಂಡೋ ಪಾಕ್ ಯುದ್ಧ ನಡೆಯುತ್ತಿತ್ತು. ಆಗಲೇ ಶಾಲಾ ಅಸೆಂಬ್ಲಿಯಲ್ಲಿ ರಾಷ್ಟ್ರಧ್ವಜ ಹಾರಿಸಲಾಗುತ್ತಿತ್ತು. ಘೋಷಣೆಗಳು ಮೊಳಗುತಿತ್ತು.

ಆ ವರ್ಷದಿಂದಲೇ ಪ್ರಭಾಕರನ್ ನಾಯರ್ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸಲು ಮುಂದಾದರು.
1887 ರಲ್ಲಿ ಸುಳ್ಯಕ್ಕೆ ಬಂದು ನೆಲೆಸಿದ ಇವರು ಇಲ್ಲೂ ಈ ಪರಂಪರೆ ಮುಂದುವರೆಸಿದ್ದಾರೆ.

ಸುಳ್ಯಕ್ಕೆ ಬಂದ ಆರಂಭದ ಮೂರು ವರ್ಷ ಮಧುವನ ಮನೆಯಲ್ಲಿ, ವಿವಾಹವಾದ ನಂತರ ಸುಳ್ಯದ ಕುರುಂಜಿಯಲ್ಲಿದ್ದ ಬಾಡಿಗೆ ಮನೆಯ ಗೇಟ್ ನಲ್ಲಿ, ನಂತರ ಅರಂಬೂರು ಧರ್ಮಾರಣ್ಯದಲ್ಲಿ ನಿರ್ಮಿಸಿದ ” ಪ್ರಣವಂ ” ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುತ್ತಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ, ಪ್ರಜಾಪ್ರಭುತ್ವ ದಿನಾಚರಣೆ ಮತ್ತು ಗಾಂಧಿ ಜಯಂತಿಯಂದು ಮನೆ ಎದುರು ರಾಷ್ಟ್ರ ಧ್ವಜಾರೋಹಣ ಮಾಡುತ್ತಾರೆ. ಮಾತ್ರವಲ್ಲ ತನ್ನ ವಾಹನಗಳಲ್ಲೂ ರಾಷ್ಟ್ರ ಧ್ವಜ ಹಾರಿಸುತ್ತಾರೆ.

ಆರಂಭದಲ್ಲಿ ತನ್ನಲ್ಲಿದ್ದ ಸೈಕಲ್‌ಗೆ ರಾಷ್ಟ್ರಧ್ವಜ ಕಟ್ಟುತ್ತಿದ್ದರು. ನಂತರದ ವರ್ಷಗಳಲ್ಲಿ ಬೈಕ್, ಸ್ಕೂಟಿಗಳಲ್ಲೂ ರಾಷ್ಟ್ರಧ್ವಜ ಹಾರಿಸುತ್ತಿದ್ದರು. ಈಗ ಕಾರಿಗೂ ಧ್ವಜ ಕಟ್ಟುತ್ತಾರೆ.

” ರಾಷ್ಟ್ರೀಯ ದಿನಾಚರಣೆಗಳಂದು ಅರಂಬೂರಿನ ನನ್ನ ಮನೆಯಿಂದ ಧ್ವಜ ಕಟ್ಟಿದ ವಾಹನಗಳಲ್ಲಿ ಸುಳ್ಯಕ್ಕೆ ಬರುತ್ತಿದ್ದೆ. ಆಗ ಎಲ್ಲರೂ ನನ್ನನ್ನೇ ಗಮನಿಸುತ್ತಿದ್ದರು. ಕೆಲವು ವರ್ಷ ಕುರುಂಜಿಭಾಗ್‌ನಲ್ಲಿರುವ ನಮ್ಮ ಹೋಟೆಲ್‌ನ ಎದುರು ಧ್ವಜಸ್ತಂಭ ನಿರ್ಮಿಸಿ ರಾಷ್ಟ್ರಧ್ವಜಾರೋಹಣ ನಡೆಸಿದ್ದೂ ಇದೆ. ಮನೆಯಲ್ಲಂತೂ ನಾನು ಆರನೇ ತರಗತಿ ಕಲಿಯುವಾಗಿನಿಂದ ಹಿಡಿದು ಇಲ್ಲಿಯವರೆಗೂ ಧ್ವಜಾರೋಹಣ ಮಾಡುತ್ತಿದ್ದೇನೆ” ಎನ್ನುತ್ತಾರೆ ಪ್ರಭಾಕರನ್ ನಾಯರ್.

ಪ್ರಭಾಕರನ್ ನಾಯರ್ ಅವರ ಪತ್ನಿ ಶ್ರೀಮತಿ ವೀಣಾ ನಾಯರ್. ಪುತ್ರಿಯರಾದ ಶ್ರೀಮತಿ‌ ಅಂಜು ವಿವಾಹವಾಗಿದ್ದು ಪ್ರಸ್ತುತ ಜರ್ಮನಿಯಲ್ಲಿ ಉದ್ಯೋಗದಲ್ಲಿದ್ದು ಪತಿಯೊಂದಿಗೆ ಅಲ್ಲಿಯೇ ನೆಲೆಸಿದ್ದಾರೆ. ಇನ್ನೋರ್ವ ಪುತ್ರಿ ಮಂಜು ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಇಬ್ಬರು ಪುತ್ರಿಯರೂ ಉದಯೋನ್ಮುಖ ಗಾಯಕರು.

– ✍️ ದುರ್ಗಾಕುಮಾರ್ ನಾಯರ್ ಕೆರೆ