ಆ.29 ರಂದು‌ ಸುಳ್ಯದಲ್ಲಿ ಮೊಸರು ಕುಡಿಕೆ ಉತ್ಸವ

0

 

ವಾಗ್ಮಿ ಕು.ಹಾರಿಕಾ‌ ಮಂಜುನಾಥ್ ಉಪನ್ಯಾಸ – ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕ ರಿಗೆ ಸನ್ಮಾನ

 

ಕಳೆದ 9 ವರ್ಷಗಳಿಂದ ಸುಳ್ಯದಲ್ಲಿ ವಿಶ್ವ ಹಿಂದೂ ಪರಿಷದ್, ಬಜರಂಗದಳ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷದ್ ನ ಸ್ಥಾಪನಾ ದಿನಾಚರಣೆ ಅಂಗವಾಗಿ ನಡೆಯುವ ಸುಳ್ಯ ಮೊಸರು‌ ಕುಡಿಕೆ ಉತ್ಸವ ಆ.29 ರಂದು ಸುಳ್ಯ‌ ನಗರದಲ್ಲಿ ನಡೆಯಲಿದೆ ಎಂದು ಮೊಸರು‌ ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಹರೀಶ್ ರೈ ಉಬರಡ್ಕ ತಿಳಿಸಿದ್ದಾರೆ.

ಆ.16 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಕರೆದು ವಿವರ ನೀಡಿದ ಅವರು, ಆ.29 ರಂದು ಮಧ್ಯಾಹ್ನ ಸುಳ್ಯ ಚೆನ್ನಕೇಶವ ದೇವಸ್ಥಾನದ ಎದುರು ಮೊಸರು ಕುಡಿಕೆ ಉತ್ಸವಕ್ಕೆ ಚೆನ್ನಕೇಶವ ದೇವಸ್ಥಾನದ ಆಡಳಿತ‌ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಚಾಲನೆ ನೀಡುವರು.


ಅಲ್ಲಿಂದ ಶೋಭಾಯಾತ್ರೆ ಆರಂಭಗೊಂಡು ಎ.ಪಿ.ಎಂ.ಸಿ ರಸ್ತೆ, ಕುರುಂಜಿಭಾಗ್, ವಿವೇಕಾನಂದ ಸರ್ಕಲ್, ಜೂನಿಯರ್ ಕಾಲೇಜ್ ರಸ್ತೆ, ಮುಳಿಯ ಮೈದಾನ, ಶಾಸ್ತ್ರಿ ‌ವೃತ್ತ, ವಿಶ್ವ ಸೆಂಟ್ರಲ್, ಶ್ರೀ ರಾಮಪೇಟೆ ಸುಳ್ಯ, ಶ್ರೀಹರಿ ಕಾಂಪ್ಲೆಕ್ಸ್ ಮುಂಭಾಗ, ರಾಜಶ್ರೀ ಕಾಂಪ್ಲೆಕ್ಸ್ ಮುಂಭಾಗ, ಖಾಸಗಿ ಬಸ್ ನಿಲ್ದಾಣ, ನಾಯರ್ ಕಾಂಪ್ಲೆಕ್ಸ್, ಗಾಂಧಿನಗರ, ಐಡಿಯಲ್ ಅಟೋ ವರ್ಕ್ಸ್, ‌ಭಗವತೀ ಹಾರ್ಡ್ ವೇರ್ ಮುಂಭಾಗದಲ್ಲಿ ಕಟ್ಟಲಾಗುವ ಮೊಸರು ಕುಡಿಕೆ (ಅಟ್ಟಿ ಮಡಿಕೆ)ಯನ್ನು ಯುವಕರ ತಂಡದಿಂದ ಒಡೆಯಲಾಗುತ್ತದೆ. ಶೋಭಾಯಾತ್ರೆಯಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಯುವಕರು ಭಾಗವಹಿಸಲಿದ್ದಾರೆ ಎಂದು ಹೇಳಿದ ಅವರು, ಸಂಜೆ 6 ಗಂಟೆಗೆ ಮೊಸರು‌ ಕುಡಿಕೆ ಉತ್ಸವ ಮುಗಿದು ಸಭಾ ಕಾರ್ಯಕ್ರಮ ನಡೆಯುವುದು.
ಸಮಾರಂಭದಲ್ಲಿ ಬೆಂಗಳೂರಿನ ಹಾರಿಕಾ ಮಂಜುನಾಥ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕರನ್ನು ಸನ್ಮಾನಿಸಲಾಗುವುದು ಎಂದು ವಿವರ ನೀಡಿದರು.

ಗ್ರಾಮಗಳಿಂದ ಬೈಕ್ ಜಾಥಾ : ಶೋಭಾಯಾತ್ರೆಗೂ ಮೊದಲು ತಾಲೂಕಿನ ವಿವಿಧ ಗ್ರಾಮಗಳಿಂದ ಸಂಘಟನೆಯ ಕಾರ್ಯಕರ್ತರು ಬೈಕ್ ಜಾಥಾದೊಂದಿಗೆ ಚೆನ್ನಕೇಶವ ದೇವಸ್ಥಾನಕ್ಕೆ ಬರಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಮೊಸರು‌ ಕುಡಿಕೆ ಉತ್ಸವ ಮಾಡಿಲ್ಲ. ಈ ಬಾರಿ ಅದ್ದೂರಿಯಾಗಿ ಮಾಡುತ್ತೇವೆ. ತಂಡಗಳ ಹೆಸರನ್ನು ಅದೇ ದಿನ ಸ್ವೀಕರಿಸಲಿದ್ದು, ಅತೀ ಹೆಚ್ಚು ಅಟ್ಟಿ ಮಡಿಕೆ ಒಡೆದು ಪ್ರಥಮ ಬಂದ ತಂಡಕ್ಕೆ 10001, ದ್ವಿತೀಯ 7001, ತೃತೀಯ 4001 ಮತ್ತು ಶಾಶ್ವತ ಫಲಕ ನೀಡಲಾಗುವುದು. ‌ಭಾಗವಹಿಸಿದ ಎಲ್ಲ ತಂಡಗಳಿಗೂ ಸಮಾಧಾನಕರ ಬಹುಮಾನ ನೀಡುತ್ತೇವೆ. 15 ಮಂದಿ ಯುವಕರು ಒಂದು ತಂಡವಾಗಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ಸೋಮಶೇಖರ್ ಪೈಕ ಹಾಗೂ ಉತ್ಸವ ಸಮಿತಿ ಸಹ ಕಾರ್ಯದರ್ಶಿ ಭಾನುಪ್ರಕಾಶ್ ಪೆರುಮುಂಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಯಾದವ್, ಕೋಶಾಧಿಕಾರಿ ರಂಜಿತ್ ಕುಮಾರ್ ಉಪಸ್ಥಿತರಿದ್ದರು.