ಧ್ವಜ ಹಾರಿಸುವ ವೇಳೆ ಕಟ್ಟಡದಿಂದ ಬಿದ್ದು ಸುಳ್ಯದ ಯುವಕ ಬೆಂಗಳೂರಿನಲ್ಲಿ ಸಾವು

0

 

 

ಹ‌ರ್ ಘರ್ ತಿರಂಗಾ ಅಭಿಯಾನದ ಪ್ರಯುಕ್ತ ತಾವು ವಾಸಿಸುತ್ತಿದ್ದ ಕಟ್ಟಡದ 2ನೇ ಮಹಡಿಯ ಟೆರೇಸ್‌ನಲ್ಲಿ ರಾಷ್ಟ್ರಧ್ವಜ ಹಾರಿಸುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸುಳ್ಯದ ಸಾಫ್ಟ್ ವೇರ್ ಎಂಜಿನಿಯರ್ ಮೃತಪಟ್ಟ ಘಟನೆ ಬೆಂಗಳೂರಿನ ಹೆಣ್ಣೂರಿನಲ್ಲಿ ಆ. 14ರಂದು ಸಂಭವಿಸಿದೆ.

ಮೂಲತಃ ದ.ಕ. ಜಿಲ್ಲೆಯ ಸುಳ್ಯದ ಬೂಡು ಭಗವತಿ ದೇವಸ್ಥಾನ ಬಳಿಯ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಇದ್ದು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ (ಮೂಲತಃ ವಿಟ್ಲ ಸಮೀಪದ ಎತ್ತುಕಲ್ಲು ಪುರೋಹಿತ ಮನೆತನದವರು) ನಾರಾಯಣ ಭಟ್ ಅವರ ಪುತ್ರ ವಿಶ್ವೇಶ ಕುಮಾರ್ (33) ಮೃತರು. ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಅವರು, ಹೆಣ್ಣೂರು ಎಚ್‌ಬಿಆರ್ ಲೇಔಟ್ 5ನೇ ಬ್ಲಾಕ್‌ನಲ್ಲಿ ತಮ್ಮ ಕಟ್ಟಡದ ಟೆರೇಸ್‌ಗೆ ರಾಷ್ಟ್ರಧ್ವಜ ಹಾರಿಸುವ ಸಲುವಾಗಿ ಹೋಗಿದ್ದರು.

ಎರಡು ಮಹಡಿಯ ಕಟ್ಟಡದ ನೆಲಮಹಡಿಯಲ್ಲಿ ಅವರು ಪತ್ನಿ ಹಾಗೂ ಎರಡು ವರ್ಷದ ಮಗಳು ಮತ್ತು ಪೋಷಕರ ಜತೆ ವಾಸವಿದ್ದರು. ಸುಳ್ಯದಲ್ಲಿದ್ದ ನಾರಾಯಣ ಭಟ್ ಕುಟುಂಬ ಮಗನಿಗೆ ಉದ್ಯೋಗ ಸಿಕ್ಕಿ, ಮದುವೆಯಾದ ಬಳಿಕ ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.