ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಕ್ಷರ ದಾಸೋಹ ಸಿಬ್ಬಂದಿಗಳ ಪ್ರತಿಭಟನೆ

0

ಜನಪ್ರತಿನಿಧಿಗಳಿಗೆ ಲಕ್ಷ ಲಕ್ಷ ಸಂಬಳ ನೀಡುವ ಸರಕಾರಕ್ಕೆ ಅಕ್ಷರ ದಾಸೋಹ ಸಿಬ್ಬಂದಿಗಳಿಗೆ ಕನಿಷ್ಠ ವೇತನ ನೀಡಲು ಯಾಕೆ ಸಾಧ್ಯವಿಲ್ಲ? : ರಾಬರ್ಟ್ ಪ್ರಶ್ನೆ

20 ವರ್ಷದಿಂದ ಅಕ್ಷರ ದಾಸೋಹ ನೌಕರರು ಪ್ರಾಮಾಣಿಕವಾಗಿ ದುಡಿಯುತ್ತಿದ್ದು ಕನಿಷ್ಠ ವೇತನವನ್ನು ನೀಡಬೇಕೆಂದು ಹಲವು ಸಮಯದಿಂದ ಸರಕಾರಕ್ಕೆ ಒತ್ತಾಯ ಮಾಡಲಾಗುತ್ತಿದೆ. ಆದರೆ ಸರಕಾರ ವೇತನ ನೀಡದೆ ಸಿಬ್ಬಂದಿಗಳನ್ನು ಗುಲಾಮರಂತೆ ನೋಡುತ್ತಿದೆ. ಸರಕಾರದ ಈ ಕ್ರಮ ಖಂಡನೀಯ. ಸರಕಾರ ಕೊಡುವ 2700 ವೇತನದಲ್ಲಿ ಬದುಕು ಸಾಧಿಸಲು ಸಾಧ್ಯವೇ? ಎಂದು ಸಿಐಟಿಯು ಮುಖಂಡ, ಹಾಗೂ ಅಕ್ಷರದಾಸೋಹ ನೌಕರರ ಸಂಘದ ಗೌರವಾಧ್ಯಕ್ಷ ಕೆ.ಪಿ. ರಾಬರ್ಟ್ ಡಿಸೋಜಾ ಪ್ರಶ್ನಿಸಿದರು.

ಆ.17 ರಂದು ಸುಳ್ಯದ ತಾಲೂಕು ಪಂಚಾಯತ್ ಎದುರು ಅಕ್ಷರ ದಾಸೋಹ ನೌಕರರ ಸಂಘದವರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಡಬಲ್ ಇಂಜಿನ್ ಸರಕಾರ ಆಡಳಿತಕ್ಕೆ ಬಂದಾಗ ಎಲ್ಲರಿಗೂ ಸಾಕಷ್ಟು ಆಶ್ವಾಸನೆ ನೀಡಿದ್ದಾರೆ. ಬೆಲೆ ಏರಿಕೆ ದಿನದಿಂದ ದಿನಕ್ಕೆ ಏರುತ್ತಿದೆ. ಆಹಾರಕ್ಕೆ ಬೆಲೆ ಏರಿಸುವ ಸರಕಾರ ದುಡಿಯುವ ಕಾರ್ಮಿಕರಿಗೆ 2700 ಕೊಟ್ಟರೆ ಬದುಕಲು ಸಾಧ್ಯವೇ?. ಕ್ಷೇತ್ರದಿಂದ ಆಯ್ಕೆಯಾದ ಶಾಸಕರುಗಳಿಗೆ ಸರಕಾರ ಕೂಡಾ ಇದೇ ವೇತನ ನೀಡಲಿ. ಅವರಿಗೆ ಲಕ್ಷ ಲಕ್ಷ ಸಂಬಳ ನೀಡುತ್ತಿದೆ. ಹಾಗಿರುವಾಗ ಇವರಿಗೆ ಕನಿಷ್ಠ ಸಂಬಳ ನೀಡಲು ಆಗೋದಿಲ್ಲವೇ ಎಂದ ಅವರು ಅಕ್ಷರ ದಾಸೋಹ ಸಿಬ್ಬಂದಿಗಳಿಗೆ ನೀಡುವ ಗೌರವಧನವನ್ನೇ ನಮ್ಮನ್ನಾಳುವ ಜನ ಪ್ರತಿನಿಧಿ ಗಳಿಗೆ ನೀಡಲಿ. ಆಗ ಅವರಿಗೆ ಬಡವರ ಕಷ್ಟದ ಅರಿವಾಗುತ್ತದೆ ಎಂದು‌ ಹೇಳಿದರು.

ಸಿಐಟಿಯು ಜಿಲ್ಲಾ ಮುಖಂಡ ರಾಮಣ್ಣ ವಿಟ್ಲ ಮಾತನಾಡಿ, “ಅಕ್ಷರದಾಸೋಹ ಸಿಬ್ಬಂದಿಗಳನ್ನು ಜೀತದಾಳುಗಳಂತೆ ನೋಡದೇ ಸರಕಾರ ಅವರಿಗೆ ಸರಿಯಾದ ರೀತಿಯಲ್ಲಿ ವೇತನ ನೀಡಬೇಕು. ಅವರ ಬೇಡಿಕೆಯನ್ನು ಸರಕಾರ ಈಡೇರಿಸಬೇಕು” ಎಂದು ಆಗ್ರಹಿಸಿದರು.

ತಾಲೂಕು ಸಂಘದ ಅಧ್ಯಕ್ಷೆ ಲೀಲಾವತಿ ಅಲೆಕ್ಕಾಡಿ, ಪ್ರಧಾನ ಕಾರ್ಯದರ್ಶಿ ಲೀಲಾವತಿ ಸೂರ್ತಿಲ, ಉಪಾಧ್ಯಕ್ಷ ರುಗಳಾದ ವಿಜಯಲಕ್ಷ್ಮಿ ಐವರ್ನಾಡು, ಸುನಿತ ಎಲಿಮಲೆ, ಭವ್ಯ ಎಡಮಂಗಲ, ಲತಾ ಪದವು, ಪ್ರಮುಖರಾದ ಕುಸುಮ, ಸಾವಿತ್ರಿ, ಕೋಶಾಧಿಕಾರಿ ಪುಷ್ಪ ಸೇರಿದಂತೆ ನೂರರಷ್ಟು ಮಹಿಳೆಯರು ಪ್ರತಿಭಟನೆ ಯಲ್ಲಿದ್ದರು.

ಬೇಡಿಕೆ : 60 ವರ್ಷ ದಾಟಿದ ಬಿಸಿಯೂಟ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸುವಾಗ ನಿವೃತ್ತಿ ವೇತನ ನೀಡುವುದು, ಬಜೆಟ್ ನಲ್ಲಿ ಬಿಸಿಯೂಟ ನೌಕರರಿಗೆ ಹೆಚ್ಚಳ ಮಾಡಿದ ರೂ 1 ಸಾವಿರ ವೇತನವನ್ನು ಜನವರಿ 2022 ರಿಂದ ಅನ್ವಯಿಸಿ ಜಾರಿ ಮಾಡುವುದು, ಶಾಲಾ ಅವಧಿಯ ನಂತರ ನರೇಗಾ ಯೋಜನೆ ಅಡಿ ಶಾಲಾ ಕೈತೋಟದ ಕೆಲಸ ಇವರಿಗೆ ನೀಡಿ ಈ ಯೋಜನೆಯಿಂದಲೂ ವೇತನ ನೀಡುವುದು, ಬಿಸಿಯೂಟ ನೌಕರರನ್ನು ಕಾಯಂ ಮಾಡಿ ಶಾಸನಾತ್ಮಕ ಸವಲತ್ತುಗಳನ್ನು ಜಾರಿ ಮಾಡುವುದು. ಕನಿಷ್ಠ ವೇತನ ಜಾರಿಗೊಳಿಸುವುದು ಇತ್ಯಾದಿ ವೇತನ ನೀಡಬೇಕೆಂದು ಬೇಡಿಕೆ ಮುಂದಿಟ್ಟರು.