ಉಬರಡ್ಕ ಮಿತ್ತೂರಿನ ವಿದ್ಯುತ್ ಗ್ರಾಹಕರನ್ನು ಸುಳ್ಯ ಉಪಕೇಂದ್ರದಲ್ಲೇ ಉಳಿಸಿಕೊಳ್ಳಲು ಪಿ.ಎಸ್.ಗಂಗಾಧರ್ ಒತ್ತಾಯ

0

ಉಬರಡ್ಕ ಮಿತ್ತೂರು ಗ್ರಾಮದ ವಿದ್ಯುತ್ ಗ್ರಾಹಕರು ಸುಳ್ಯ ಉಪಕೇಂದ್ರದಲ್ಲಿ ತಮ್ಮ ಗ್ರಾಮದ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಿಕೊಂಡು ಬರುತ್ತಿದ್ದರು. ಆದರೆ ಅವರು ಇನ್ನು ಮುಂದೆ ಸುಳ್ಯದ ಬದಲಾಗಿ ಜಾಲ್ಸೂರಿಗೆ ಹೋಗಬೇಕಾಗುತ್ತದೆ ಎಂಬ ಮಾಹಿತಿ ಸಿಕ್ಕಿದೆ. ಯಾಕೆಂದರೆ ಸುಳ್ಯ ವಿದ್ಯುತ್ ವಿತರಣಾ ಉಪಕೇಂದ್ರದಲ್ಲೇ ಕಚೇರಿ ಹೊಂದಿದ್ದ ಜಾಲ್ಸೂರು ಶಾಖೆಯ ಮೂಲಕ ಈ ಹಿಂದೆ ಉಬರಡ್ಕ ಗ್ರಾಮದ ಪಂಪ್‌ಸೆಟ್‌ಗಳನ್ನು ಜೆಐಪಿ ಎಂದು ನೋಂದಣಿ ಮಾಡಲಾಗಿದೆ. ಇದೀಗ ಜಾಲ್ಸೂರು ಶಾಖೆಯನ್ನು ಜಾಲ್ಸೂರಿಗೇ ಸ್ಥಳಾಂತರ ಮಾಡುವ ಕಾರ್ಯ ನಡೆಯುತ್ತಿದ್ದು, ಉಬರಡ್ಕ ಗ್ರಾಮದವರು ತಮ್ಮ ಸಮಸ್ಯೆಗಳ ನಿವಾರಣೆಗೆ ಜಾಲ್ಸೂರಿಗೆ ಹೋಗಬೇಕಾಗುತ್ತದೆ. ಆದ್ದರಿಂದ ಜಾಲ್ಸೂರು ಶಾಖೆಯ ಕಚೇರಿಯನ್ನು ಸುಳ್ಯದ ಬದಲಾಗಿ ಜಾಲ್ಸೂರಿಗೆ ಸ್ಥಳಾಂತರ ಮಾಡುವುದಿದ್ದರೆ ಉಬರಡ್ಕ ಮಿತ್ತೂರು ಗ್ರಾಮವನ್ನು ಸುಳ್ಯ ಉಪಕೇಂದ್ರದಲ್ಲೇ ಉಳಿಸಿಕೊಳ್ಳಬೇಕು. ಆ. ೨೦ರಂದು ಉಬರಡ್ಕದಲ್ಲಿ ನಡೆಯುವ ವಿದ್ಯುತ್ ಗ್ರಾಹಕರ ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿ ಈ ಬಗ್ಗೆ ಸ್ಪಷ್ಟ ವಿವರಣೆ ನೀಡಬೇಕು. ತಪ್ಪಿದರೆ ಗ್ರಾಮಸ್ಥರನ್ನು ಸೇರಿಸಿಕೊಂಡು ಪ್ರತಿಭಟನೆ ಮಾಡಲಾಗುವುದು ಎಂದು ಪಿ.ಎಸ್.ಗಂಗಾಧರ್ ತಿಳಿಸಿದ್ದಾರೆ.