ಆ. 29 : ಕೆದಂಬಾಡಿ ರಾಮಯ್ಯ ಗೌಡರವರ ಕಂಚಿನ ಪ್ರತಿಮೆ ದ.ಕ. ಜಿಲ್ಲೆಗೆ ಆಗಮನ

0

 

ತಾಲೂಕಿನ ಸಮಸ್ತ ನಾಗರಿಕರು ಮತ್ತು ಸಂಘ ಸಂಸ್ಥೆಗಳ ವತಿಯಿಂದ ಅದ್ದೂರಿ ಸ್ವಾಗತಕ್ಕೆ ಸಿದ್ಧತೆ: ಚಂದ್ರ ಕೋಲ್ಚಾರ್

ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಪ್ರಮುಖ ನಾಯಕ ಸುಳ್ಯದ ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪ್ರತಿಮೆಯನ್ನು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಪ್ರತಿಷ್ಠಾಪಿಸಲು ಸರಕಾರ ತೀರ್ಮಾನಿಸಿದ್ದು ಪ್ರತಿಮೆಯ ಸ್ವಾಗತಕ್ಕೆ ಕೆದಂಬಾಡಿ ರಾಮಯ್ಯಗೌಡರ ಹುಟ್ಟೂರು ಸುಳ್ಯದಲ್ಲಿ ಭವ್ಯ ಸ್ವಾಗತವನ್ನು ಕೋರಲಾಗುವುದು ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ಚಂದ್ರ ಕೋಲ್ಚಾರ್ ಇಂದು ಸುಳ್ಯ ಪ್ರೆಸ್ ಕ್ಲಬ್ಬಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬೃಹತ್ ಸ್ವಾಗತ ಕಾರ್ಯಕ್ರಮದ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು 1837ರಲ್ಲಿ ಅಮರ ಸುಳ್ಯ ಸ್ವಾತಂತ್ರ್ಯ ಸಮರದ ಮುಂಚೂಣಿ ನಾಯಕರಾಗಿ, ಬ್ರಿಟಿಷರ ವಿರುದ್ಧ ಹೋರಾಡಿದ ಸುಳ್ಯ ತಾಲೂಕಿನ
ಉಬರಡ್ಕ ಮಿತ್ತೂರು ಗ್ರಾಮದ ಮದುವೆಗದ್ದೆ ಕೆದಂಬಾಡಿ ರಾಮಯ್ಯ ಗೌಡರವರ ಕಂಚಿನ ಪುತ್ತಳಿ ಮಂಗಳೂರಿನಲ್ಲಿ ಅನಾವರಣಗೊಳ್ಳಲಿದೆ.
ಈ ಪುತ್ತಳಿಗೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ಕಂಚಿನಿಂದ ತಯಾರಾಗಿದ್ದು ಇದರ ಎತ್ತರ ಸುಮಾರು 11 ಅಡಿ ಇದ್ದು ಚಿನ್ನದ ಬಣ್ಣದಿಂದ ಕೂಡಿರುತ್ತದೆ ಎಂದು ಹೇಳಿದರು.
ಆಗಸ್ಟ್ 27ರಂದು ಮಂಡ್ಯದ ಆದಿಚುಂಚನಗಿರಿ ಕ್ಷೇತ್ರಕ್ಕೆ ತಲುಪಿ ಅಲ್ಲಿಂದ ಆಗಸ್ಟ್ 28ರಂದು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ಸ್ವಾಮೀಜಿಯವರ ಆಶೀರ್ವಾದ ಹಾಗೂ ಮಾರ್ಗದರ್ಶನದಂತೆ ಹೊರಟು ಸಂಜೆ ವೇಳೆ ಮಡಿಕೇರಿ ತಲುಪಲಿದೆ.

ಆಗಸ್ಟ್ 29ರಂದು ಬೆಳಿಗ್ಗೆ 9 ಗಂಟೆಗೆ ಸಂಪಾಜೆ ಗೇಟಿನ ಬಳಿಗೆ ಬರಲಿದ್ದು ಪ್ರತಿಮೆ ಇರುವ ವಾಹನವನ್ನು ಬಹಳ ಅದ್ದೂರಿಯಿಂದ ಸ್ವಾಗತ ಮಾಡಲು ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು, ಸುಳ್ಯ ಶಾಸಕರು ಸಚಿವರು, ವಿವಿಧ ಜನಪ್ರತಿನಿಧಿಗಳು, ಅಧಿಕಾರಿ ವೃಂದದವರು, ಹಾಗೂ ಸಾರ್ವಜನಿಕರು ಸೇರಿ ಸುಮಾರು 300ಕ್ಕೂ ಮಿಕ್ಕ ವಿವಿಧ ವಾಹನದ ಜಾತದ ಮೂಲಕ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಸುಳ್ಯದಿಂದ
ಹೊರಟು ಮುಂದೆ ಸಾಗಿ ಪುತ್ತೂರು, ಮಾಣಿ ಫರಂಗಿಪೇಟೆ ಮೂಲಕ ಮಂಗಳೂರಿನ ಬಾವುಟ ಗುಡ್ಡೆಗೆ ಆಗಮಿಸಲಿದೆ.
ಕೆದಂಬಾಡಿ ರಾಮಯ್ಯಗೌಡರು ಬಾವುಟಗುಡ್ಡೆಯಲ್ಲಿ
ಸ್ವಾತಂತ್ರ್ಯ ಧ್ವಜ ಏರಿಸಿ 13 ದಿನಗಳ ಕಾಲ ಆಡಳಿತವನ್ನು ಮಾಡಿದ್ದು ಇದೀಗ ಇತಿಹಾಸ.
ಇವರ ನೆನಪಿನ ಪ್ರತಿಷ್ಠಾನಕ್ಕಾಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಯದಲ್ಲಿ ಕರ್ನಾಟಕದ ಎರಡು ಸ್ಥಳಗಳನ್ನು ಗುರುತಿಸಿದ್ದು, ಈಗಾಗಲೇ
ಪ್ರಥಮ ಸ್ವಾತಂತ್ರ್ಯದ ಹೋರಾಟದ ಬೆಳ್ಳಾರೆಯ ಪ್ರವಾಸಿ ಮಂದಿರವನ್ನು ಅಭಿವೃದ್ಧಿಗೊಳಿಸುವುದು ಹಾಗೂ ಬಾವುಟ
ಗುಡ್ಡೆಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಪ್ರಮುಖ ನಾಯಕ ಕದಂಬಾಡಿ ರಾಮಯ್ಯ ಗೌಡರವರ ಕಂಚಿನ
ಪ್ರತಿಮೆಯನ್ನು ಪ್ರತಿಸ್ಪಾಪಿಸುವುದು ಮುಂತಾದ ಕೆಲಸಕಾರ್ಯಗಳನ್ನು ಸರಕಾರ ಕೈಗೆತ್ತಿಕೊಂಡಿದೆ .
ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಈಗಾಗಲೇ ಕೆದಂಬಾಡಿ ರಾಮಯ್ಯ ಗೌಡರವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲು ಅಂಗಣ
ಕೆಲಸ ಪೂರ್ಣಗೊಂಡಿದ್ದು ಅಡಿಪಾಯದ ಕಾಮಗಾರಿ ಪೂರ್ಣಗೊಂಡಿದೆ.
ಇದಕ್ಕಾಗಿ ಮಂಗಳೂರಿನ ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಮಂಗಳೂರು ಮಹಾನಗರ
ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಹಾಗೂ ಕೆದಂಬಾಡಿ ರಾಮಯ್ಯ ಗೌಡರವರ ಸ್ಮಾರಕ ರಚನೆಯ
ಸಮಿತಿಯ ಅಧ್ಯಕ್ಷರಾದ ಕಿರಣ್ ಬುಡ್ಲೆಗುತ್ತು ಹಾಗೂ ಪದಾಧಿಕಾರಿಗಳು ಶ್ರಮಿಸುತ್ತಿದ್ದಾರೆ.
ಪ್ರತಿಮೆಯ ವಾಹನ ಸುಳ್ಯಕ್ಕೆ ಬರುತ್ತಿದ್ದಂತೆ ಗಾಂಧಿನಗರದ ಕಾಯರ್ತೋಡಿ ದೇವಸ್ಥಾನಕ್ಕೆ ತೆರಳುವ ಕೇಂದ್ರದಲ್ಲಿ ವಿಶೇಷವಾಗಿ ಉಬರಡ್ಕ ಮಿತ್ತೂರು ಜನತೆ ಹಾಗೂ ಕೆದಂಬಾಡಿ ಮನೆತನದವರಿಂದ ವಿಶೇಷ ಸ್ವಾಗತ ನೀಡುವ ಕಾರ್ಯಕ್ರಮ ನಡೆಯಲಿದೆ. ಅದಕ್ಕೂ ಮುನ್ನ ಅರಂತೋಡು, ಪೆರಾಜೆ ಕೇಂದ್ರಗಳಲ್ಲಿ ಪುಷ್ಪಾರ್ಚನೆ ಮಾಡಿ ಸ್ವಾಗತ ಕಾರ್ಯಕ್ರಮ ನಡೆಯಲಿದೆ.
ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ನೆಹರು ಸ್ಮಾರಕ ವಿದ್ಯಾಲಯದ ವಿದ್ಯಾರ್ಥಿಗಳಿಂದ ಇತ್ತೀಚಿಗೆ ರಾಜ್ಯ ಪ್ರಶಸ್ತಿ ಪಡೆದ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದ ಕಿರು ನಾಟಕ ಪ್ರದರ್ಶನ ನಡೆಯಲಿದೆ.
ತದನಂತರ ಪೈಚಾರು, ಜಾಲ್ಸೂರು, ಕನಕಮಜಲು ಮಾರ್ಗದ ಮೂಲಕ ಪುತ್ತೂರಿಗೆ ತೆರಳಲಿದೆ.
ಆದ್ದರಿಂದ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿ ಕಾರ್ಯದರ್ಶಿ ಬೆಳ್ಳಿಯಪ್ಪ ಗೌಡ ಬಳ್ಳಡ್ಕ, ಮುಖಂಡರುಗಳಾದ ದಿನೇಶ್ ಮಡಪ್ಪಾಡಿ, ಡಾ. ಎನ್.ಎ. ಜ್ಞಾನೇಶ್, ಎ ಕೆ ಹಿಮಕರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.