ಪೆರುವಾಜೆ : ಮೊಸರು ಕುಡಿಕೆ ಉತ್ಸವಕ್ಕೆ ಚಾಲನೆ

0

 

ಸಂಘಟನೆಗಳು ಊರಿಗೆ ಬೆಳಕಾಗಬೇಕು : ನಾರಾಯಣ ಕೊಂಡೆಪ್ಪಾಡಿ

ಪೆರುವಾಜೆ ಭಾವೈಕ್ಯ ಯುವಕ ಮಂಡಲ, ಭಾವೈಕ್ಯ ಯುವತಿ ಮಂಡಲ ಆಶ್ರಯದಲ್ಲಿ ಪೆರುವಾಜೆ ಶಾಲಾ ಆವರಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವಕ್ಕೆ ಆ.21 ರಂದು ಚಾಲನೆ ನೀಡಲಾಯಿತು.

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ನಾರಾಯಣ ಕೊಂಡೆಪ್ಪಾಡಿ ಅವರು ದೀಪ ಬೆಳಗಿಸಿ ಮಾತನಾಡಿ ದೇವರ ಹೆಸರಿನಲ್ಲಿ ಮಾಡುವ ಪ್ರತಿ ಕೆಲಸವನ್ನು ದೇವರೇ ಮೆಚ್ಚುವಂತಿರಬೇಕು. ಆ ಪ್ರಯತ್ನ ಭಾವೈಕ್ಯ ತಂಡದ ಮೂಲಕ ಇಲ್ಲಿ ಅಭಿವ್ಯಕ್ತಗೊಂಡಿದೆ ಎಂದರು.

ಸಂಘಟನೆಗಳು ತಾನು ಬೆಳಗಿ ಊರನ್ನು ಬೆಳಗಿಸಬೇಕು. ದೀಪದ ತರಹ ಊರಿಗೆ ಬೆಳಕಾಗಬೇಕು. ಅದಕ್ಕಾಗಿ ಶ್ರೀಕೃಷ್ಣನ ಆದರ್ಶಗಳನ್ನು ಅನುಷ್ಠಾನಿಸುವ ಕಾರ್ಯವನ್ನು ಸಂಘಟನೆ ಮೂಲಕ ಮಾಡಬೇಕು ಎಂದವರು ಹೇಳಿದರು.

ರಾಜಕೀಯ ಆಧಾರಿತವಾಗಿ ಸಂಘಟನೆ ಇರುವುದು ತಪ್ಪಲ್ಲ. ಆದರೆ ಒಳ ರಾಜಕೀಯ ಇರಬಾರದು ಎಂದ ಅವರು, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾವೈಕ್ಯ ಯುವಕ ಮಂಡಲದ ಕೊಡುಗೆ ಇತರೆ ಸಂಘಟನೆಗಳಿಗೆ ಸ್ಪೂರ್ತಿದಾಯಕ ಎಂದರು.

ಭಾವೈಕ್ಯ ಯುವಕ ಮಂಡಲ ಅಧ್ಯಕ್ಷ ಶಿವಪ್ರಸಾದ್ ಪೆರುವಾಜೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಗ್ರಾ.ಪಂ. ಸದಸ್ಯ ಮಾಧವ, ಭಾವೈಕ್ಯ ಯುವತಿ ಮಂಡಲದ ಅಧ್ಯಕ್ಷೆ ಪ್ರಮೀಳಾ ಶೆಟ್ಟಿ ಉಪಸ್ಥಿತರಿದ್ದರು.
ದೀಕ್ಷಿತ್ ಪ್ರಾರ್ಥಿಸಿದರು. ಸನತ್ ಪೆರುವಾಜೆ ಸ್ವಾಗತಿಸಿ, ನಿರೂಪಿಸಿದರು. ಬಳಿಕ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು.