ಇನ್ವರ್ಟರ್ ಮತ್ತು ಬ್ಯಾಟರಿ ವ್ಯವಹಾರದಲ್ಲಿ ವಂಚನೆ

0

ಪಲಾಯನ ಮಾಡುತ್ತಿದ್ದ ವ್ಯಕ್ತಿಗೆ ಸಂಪಾಜೆ ಗೇಟ್ ನಲ್ಲಿ ತಡೆ

ಸುಳ್ಯದಲ್ಲಿ ಇನ್ವರ್ಟರ್ ಹಾಗು ಬ್ಯಾಟರಿ ವ್ಯವಹಾರ ನಡೆಸಿ ಗ್ರಾಹಕರಿಗೆ ಮತ್ತು ಸಾರ್ವಜನಿಕರಿಂದ ಲಕ್ಷಾಂತರ ವಂಚಿಸಿ ಪಲಾಯನ ಮಾಡುತ್ತಿದ್ದ ವ್ಯಕ್ತಿಯನ್ನು ಸಂಪಾಜೆ ಗೇಟ್ ನಲ್ಲಿ ತಡೆದ ಘಟನೆ ಇಂದು ನಡೆದಿದೆ.

ಸುಳ್ಯದ ಹಳೆಗೇಟಿನಲ್ಲಿ ಕಚೇರಿಯನ್ನು ಹೊಂದಿದ್ದ ಗಣೇಶಕೃಷ್ಣ ಶೆಟ್ಟಿ ಎಂಬಾತ ಬ್ಯಾಟರಿ,ಇನ್ವರ್ಟರ್ ವ್ಯವಹಾರದಲ್ಲಿ ತೊಡಗಿ ವರ್ತಕರಿಂದ ಮತ್ತು ಗ್ರಾಹಕರಿಂದ ಮುಂಗಡ ಹಣ ಪಡೆದು ನಂತರ ಯಾವುದೇ ವಸ್ತು ನೀಡದೆ ಪಡೆದುಕೊಂಡ ಹಣವನ್ನೂ ಮರುಕಳಿಸದೆ ವರ್ಷಗಳಿಂದ ಸತಾಯಿಸುತ್ತಿದ್ದು, 20ಸಾವಿರದಿಂದ ಒಂದೂವರೆ ಲಕ್ಷದವರೆಗೆ ವಂಚನೆ ಮಾಡಿರುವ ಹತ್ತಾರು ಪ್ರಕರಣ ತಿಳಿದುಬಂದಿದೆ.

ಹಲವರಿಗೆ ಮೊತ್ತ ಹಿಂತಿರುಗಿಸದೆ, ಚೆಕ್ ನೀಡಿ, ನಂತರ ಚೆಕ್ ಅಮಾನ್ಯಗೊಂಡ 3 ಕೇಸ್ ಸುಳ್ಯ ನ್ಯಾಯಾಲದಲ್ಲಿರುವುದಾಗಿ ತಿಳಿದುಬಂದಿದೆ. ಲೋಕ್ ಅದಾಲತ್ ನಲ್ಲಿ ರಾಜಿ ಮಾಡಿದ ಸಂಧರ್ಭದಲ್ಲಿ ನೀಡಿದ ಚೆಕ್ ಗಳೂ ಅಮಾನ್ಯಗೊಂಡಿದ್ದ ನಂತರ ಸುಳ್ಯದಿಂದ ತಲೆಮರೆಸಿಕೊಂಡಿದ್ದ. ತಾನು ಪಡೆದ ಹಣವನ್ನು ನಾಳೆ, ನಾಡಿದ್ದು ಕೊಡುತ್ತೇನೆ ಎಂದು ನಂಬಿಸಿ, ಫೋನ್ ಕರೆಗೂ ಸಿಗದೇ ತಪ್ಪಿಸಿಕೊಂಡಿರುವ ಬಗ್ಗೆ ಗೊತ್ತಾಗಿದೆ. ಮೂಲತಃ ಶೃಂಗೇರಿಯ ಕೋಚವಳ್ಳಿಯವನಾದ ಗಣೇಶ ಕೃಷ್ಣ ಶೆಟ್ಟಿಇಂದು ಸುಳ್ಯದ ಬಾಡಿಗೆ ಮನೆಯಿಂದ ಪತ್ನಿ,ಮಗುವಿನೊಂದಿಗೆ ಮನೆಯ ಸಾಮಾಗ್ರಿ ಸಹಿತ ಮಡಿಕೇರಿಗೆ ಪಲಾಯನಗೊಳ್ಳುತ್ತಿದ್ದ ಈತನ ವಂಚನೆಯ ಮಾಹಿತಿ ತಿಳಿದು ಸಂಪಾಜೆ ಬಳಿ ಈತನನ್ನು ಪೋಲೀಸರು ಹಿಡಿದು ನಿಲ್ಲಿಸಿದರು. ಅಲ್ಲಿಗೆ ತೆರಳಿದ ವಂಚನೆಗೊಳಗಾದ ಮೂವರು ಅವನನ್ನು ತರಾಟೆಗೆತ್ತಿಕೊಂಡರೆಂದೂ ಅವರಿಗೆ ತನ್ನ ಪತ್ನಿಯ ಹೆಸರಿನ ಚೆಕ್ ನೀಡಿ ಮಡಿಕೇರಿಯ ಕಡೆ ಹೋಗಿರುವುದಾಗಿ ತಿಳಿದುಬಂದಿದೆ.