ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಶತಮಾನೋತ್ಸವ ಪ್ರಯುಕ್ತ ಪೂರ್ವಭಾವಿ ಸಭೆ

0

 

ಅ.16ರಂದು ಶತಮಾನೋತ್ಸವ ಸಮಾರಂಭ ನಡೆಸಲು ನಿರ್ಧಾರ

ಸಹಕಾರಿ ಸಂಘದ ಮಹಾಸಭೆಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ: ಡಾ. ಗೋಪಾಲಕೃಷ್ಣ ಭಟ್

ಕನಕಮಜಲು ಪ್ರಾಥಮಿಕ ಕೃಷಿ
ಪತ್ತಿನ ಸಹಕಾರಿ ಸಂಘವು ಶತಮಾನೋತ್ಸವದ ಹೊಸ್ತಿಲಿನಲ್ಲಿದ್ದು, ಮುಂಬರುವ ಅಕ್ಟೋಬರ್ 16ರಂದು ಶತಮಾನೋತ್ಸವದ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದ್ದು, ಶತಮಾನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಸಹಕಾರಿ ಸಂಘದ ಕನಕಸೌಧ ಸಭಾಭವನದಲ್ಲಿ ಆ.25ರಂದು ನಡೆಯಿತು.

ಸಹಕಾರಿ ಸಂಘದ ಅಧ್ಯಕ್ಷ ಡಾ. ಗೋಪಾಲಕೃಷ್ಣ ಭಟ್ ಕಾಟೂರು ಅವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ನಾರಾಯಣ ಬೊಮ್ಮೆಟ್ಟಿ, ಸಹಕಾರಿ ಸಂಘದ ಸದಸ್ಯ ನ. ಸೀತಾರಾಮ, ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಡಾ. ಗೋಪಾಲಕೃಷ್ಣ ಭಟ್ ಅವರು ಮಾತನಾಡಿ “ಮುಂದಿನ ಸೆಪ್ಟೆಂಬರ್ ತಿಂಗಳ 11ರಂದು ಜಾಲ್ಸೂರಿನಲ್ಲಿ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಜರುಗಲಿದ್ದು, ಆ ಸಭೆಯಲ್ಲಿ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರಿಂದ ಶತಮಾನೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಿದ್ದೇವೆ.


ಅಕ್ಟೋಬರ್ ತಿಂಗಳ 16ರಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಕಾರ್ತಿಕೇಯ ಸಭಾಭವನದಲ್ಲಿ ಶತಮಾನೋತ್ಸವ ಸಮಾರಂಭವು ಜರುಗಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ರಾಜೇಂದ್ರ ಕುಮಾರ್ ಸೇರಿದಂತೆ ಗಣ್ಯ ಅತಿಥಿಗಳು, ಸಹಕಾರಿ ಬಂಧುಗಳು ಭಾಗವಹಿಸಲಿದ್ದಾರೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಹಕಾರಿ ಸಂಘದ ನಿರ್ದೇಶಕರುಗಳು, ಮಾಜಿ ಅಧ್ಯಕ್ಷರುಗಳು, ಮಾಜಿ ಉಪಾಧ್ಯಕ್ಷರುಗಳು, ಮಾಜಿ ನಿರ್ದೇಶಕರುಗಳು ಸೇರಿದಂತೆ ಜಾಲ್ಸೂರು ಹಾಗೂ ಕನಕಮಜಲು ಗ್ರಾಮದ ಸಹಕಾರಿ ಬಂಧುಗಳು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ ಅವರು ಸ್ವಾಗತಿಸಿ, ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಕಾರಿ ಸಂಘದ ಸಿಬ್ಬಂದಿಗಳು ಸಹಕರಿಸಿದರು.