ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಸುಳ್ಯ ಸ್ವಾತಂತ್ರ್ಯ ಹೋರಾಟಗಾರ ಸಂಸ್ಮರಣೆ

0

 

 

 

 

ಸುಳ್ಯ: ನಾವು ವಿದೇಶಿಯರ ದಾಸ್ಯದಿಂದ ಬಿಡುಗಡೆ ಆಗಿದ್ದೇವೆಯೇ ಹೊರತು ಇನ್ನೂ ಸಂಪೂರ್ಣ ಸ್ವತಂತ್ರರಾಗಿಲ್ಲ. ನಾವು ಇತಿಹಾಸದಿಂದ ಪಾಠ ಕಲಿತು ದೇಶದ ಮುಂದಿನ ಹಾದಿಯನ್ನು ರೂಪಿಸಿಕೊಂಡು ಸಂಪೂರ್ಣ ಸ್ವಾತಂತ್ರ್ಯವನ್ನು ಅನುಭವಿಸಬೇಕು ಎಂದು ಸ್ನೇಹಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಹೇಳಿದರು.
ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಸುಳ್ಯ ತಾಲೂಕು ವತಿಯಿಂದ ಶುಕ್ರವಾರ ಸುಳ್ಯದ ಸ್ನೇಹಾ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರ ಸಂಸ್ಮರಣೆ ಹಾಗೂ ಅಭಿನಂದನಾ ಕಾರ್ಯಕ್ರಮ ದಲ್ಲಿ ಸಮಾರೋಪ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಮಾತನಾಡಿ ಐತಿಹಾಸಿಕ ವಿಷಯಗಳು ಸಾಹಿತ್ಯ ರೂಪದಲ್ಲಿ ಮೂಡಿ ಬರಬೇಕು. ಭಾರತೀಯರು ಆತ್ಮಾಭಿಮಾನದಿಂದ ನಮ್ಮ ದೇಶದ ಬಗ್ಗೆ ಚಿಂತಿಸಬೇಕು ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಧರ‌ ಎಣ್ಮಕಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಅಮರ ಸುಳ್ಯ ಸ್ವಾತಂತ್ರ್ಯ ಸಮರದ ರೂವಾರಿಗಳಾದ ಕೆದಂಬಾಡಿ, ಕುಡೆಕಲ್ಲು, ಕುಕ್ಕನ್ನೂರು ಕುಟುಂಬದ ಹಿರಿಯರಾದ ವೆಂಕಟರಮಣ ಕೆದಂಬಾಡಿ, ವಾಸುದೇವ ಗೌಡ ಕುಡೆಕಲ್ಲು, ಶಿವರಾಮ ಗೌಡ ಕುಕ್ಕನ್ನೂರು ಹಾಗೂ ಸ್ವಾತಂತ್ರ್ಯ ಹೋರಾಟಗಾರ ಬೆಳ್ಳಾರೆ ನಾಮದೇವ ಶೆಣೈ ಅವರ ಕುಟುಂಬದ ಮಿಥುನ್ ಶೆಣೈ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ತಾಲ್ಲೂಕಿನ ಆಯ್ದ ಮೂರು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನಡೆಸಿದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ತಾಲೂಕು ಸಮಿತಿ ಅಧ್ಯಕ್ಷ ಜನಾರ್ದನ ಕಣಕ್ಕೂರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೇಟಿ ಸಂಸ್ಮರಣ ಭಾಷಣ ಮಾಡಿದರು. ಉಪಾಧ್ಯಕ್ಷೆ ಡಾ. ಅನುರಾಧಾ ಕುರುಂಜಿ ಸ್ವಾಗತಿಸಿ, ಸದಸ್ಯ ಉದಯಭಾಸ್ಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯೆ ಶ್ರೀಮತಿ ರಾಜೀವಿ ವಂದಿಸಿದರು. ಸದಸ್ಯ ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು. ಸ್ನೇಹಾ ಶಾಲಾ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ದಾಮ್ಲೆ, ಅ.ಭಾ.ಸಾ.ಪ. ತಾಲೂಕು ಸಮಿತಿ ಸದಸ್ಯರಾದ ಸತೀಶ್ ಕಾಟೂರು, ಪ್ರವೀಣ್ ಕಾಟೂರು ಸಹಕರಿಸಿದರು.