ಸುಳ್ಯ ಶ್ರೀರಾಂಪೇಟೆ ಜಂಕ್ಷನ್ ರಸ್ತೆಯ ಹೊಂಡ ಮುಚ್ಚಿಸಿದ ಡಾ.ಎನ್.ಎ. ಜ್ಞಾನೇಶ್

0

 

 

ಜ್ಞಾನೇಶರ ಕಾರ್ಯಕ್ಕೆ ಸಾರ್ವಜನಿಕರ ಶ್ಲಾಘನೆ

ಬಾರೀ ಚರ್ಚೆಯಲ್ಲಿದ್ದ ಸುಳ್ಯ ಶ್ರೀರಾಂಪೇಟೆಯಿಂದ ಜೂನಿಯರ್ ಕಾಲೇಜ್ ಗೆ ತಿರುಗುವ ಜಂಕ್ಷನ್ ನಲ್ಲಿದ್ದ ಹೊಂಡ ಗುಂಡಿಗಳನ್ನು ಸುಳ್ಯ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಎನ್.ಎ. ಜ್ಞಾನೇಶ್ ರವರು‌ ಮುಚ್ಚಿಸಿದ್ದಾರೆ.

ರಸ್ತೆಯಲ್ಲಿರುವ ಈ ಹೊಂಡ ಗುಂಡಿಗಳಿಂದ ಬಾರೀ‌ ಚರ್ಚೆಗಳಾಗಿತ್ತಾದರೂ ನಗರಾಡಳಿತ ಮಳೆಯ ಕಾರಣ ನೀಡಿ ಹೊಂಡಗಳನ್ನು ಮುಚ್ಚುವ ಗೋಜಿಗೆ ಹೋಗಿರಲಿಲ್ಲ.

ಎರಡು ವಾರದ ಹಿಂದೆ ರೇಡಿಯೋ ಜಾಕಿ ತ್ರಿಶೂಲ್ ಕಂಬಳರು ಈ ಗುಂಡಿಯ ಕುರಿತು ವಿಡಿಯೋ ಚಿತ್ರೀಕರಣ ಮಾಡಿ ಹೊಂಡಗಳಿಂದ ಆಗುವ ಅಪಾಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದರು.

ಈ ವಿಡಿಯೋ ವನ್ನು ನೋಡಿದ ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕರು ತ್ರಿಶೂಲ್ ಕಂಬಳರನ್ನು ಟೀಕಿಸಿದ್ದರು. ಬಳಿಕ ತ್ರಿಶೂಲ್ ಕಂಬಳ – ವಿನಯ ಕಂದಡ್ಕರ ನಡುವೆ ವಿವಾದ ಏರ್ಪಟ್ಟು ಪ್ರಕರಣ ಪೋಲೀಸ್ ಠಾಣೆ ಮೆಟ್ಟಿಲೇರಿತ್ತು. ಆದರೆ ಹೊಂಡ ಗುಂಡಿ ಹಾಗೇ ಉಳಿದಿತ್ತು.

ಆ.27 ರಂದು ಬೆಳಗ್ಗೆ ಎನ್.ಎ. ಜ್ಞಾನೇಶರು ತಮ್ಮ ಕೆಲಸದವರೊಂದಿಗೆ ಸೇರಿ ರಸ್ತೆಯ ಗುಂಡಿ ಮುಚ್ಚಿಸುವ ಕೆಲಸ ಮಾಡಿದ್ದಾರೆ. ಅವರ ಕೆಲಸ ಕಾರ್ಯಕ್ಕೆ ಸಾರ್ವಜನಿಕ ವಾಗಿ ಶ್ಲಾಘನೆ ವ್ಯಕ್ತವಾಗಿದೆ.

ಈ ಕುರಿತು ಎನ್.ಎ. ಜ್ಞಾನೇಶರನ್ನು ಮಾತನಾಡಿಸಿದಾಗ, “ರಸ್ತೆಯಲ್ಲಿ ಅಪಾಯದ ಹೊಂಡಗಳಿತ್ತು. ನನಗೆ ಸೇರಿದಂತೆ ಎಲ್ಲರಿಗೂ ಸಮಸ್ಯೆಗಳಾಗಿದೆ. ಅದನ್ನು ನಾನು ಮುಚ್ಚಿಸಿದ್ದೇನೆ” ಎಂದು ತಿಳಿಸಿದ್ದಾರೆ.