ಗುಜರಾತ್ ನಲ್ಲಿ ಡಾ. ಆರ್.ಕೆ. ನಾಯರ್ ಅರಣ್ಯ ಬೆಳೆಸಿರುವ ಸ್ಮೃತಿ ವನ್ ಪ್ರಧಾನಿಯವರಿಂದ ಲೋಕಾರ್ಪಣೆ

0

ಗಿಡ ನೆಟ್ಟು ನೀರುಣಿಸಿ ಉದ್ಘಾಟಿಸಿದ ನರೇಂದ್ರ ಮೋದಿ, ಗುಜರಾತ್ ಮುಖ್ಯಮಂತ್ರಿ ಸಹಿತ ಗಣ್ಯರು ಭಾಗಿ

ಗ್ರೀನ್ ಹೀರೋ, ಸುಳ್ಯದವರಾದ ಡಾ.ಆರ್.ಕೆ. ನಾಯರ್ ಗುಜರಾತ್‌ನ ಕಛ್‌ನಲ್ಲಿ ಬೆಳೆಸಿರುವ ಅತ್ಯಂತ ದೊಡ್ಡ ಮಿಯಾವಾಕಿ ಅರಣ್ಯ ಸಹಿತವಾದ ಸ್ಮೃತಿ ವನ್ ಇಂದು ಲೋಕಾರ್ಪಣೆಗೊಂಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇದರ ಉದ್ಘಾಟನೆ ನೆರವೇರಿಸಿದರು.

ಕಛ್ ಭಾರತದ ಅತಿ ದೊಡ್ಡ ಜಿಲ್ಲೆಯಾಗಿದ್ದು, ೨೦೧೧ರ ಜನಗಣತಿ ಯಂತೆ ಅಲ್ಲಿ ವಾಸ್ತವ್ಯ ವಿರುವುದು ಎರಡು ದಶಲಕ್ಷ ಜನ. ಇಂತಹ ಕಛ್ ಜಿಲ್ಲೆಯಲ್ಲಿ ಭುಜಂಗ ಪರ್ವತದ ಶ್ರೇಣಿಯಲ್ಲಿ ೨೦೦೧ ರಲ್ಲಿ ಘಟಿಸಿದ ಭೂಕಂಪವು ಅತ್ಯಂತ ದೊಡ್ಡ ನಾಶ ನಷ್ಟವನ್ನು ಉಂಟುಮಾಡಿತು. ಅಂಜಾರ್, ಭುಜ್ ಮತ್ತು ಬಚಾವ್ ತಾಲೂಕಿನಲ್ಲಿ ನೂರಾರು ಹಳ್ಳಿಗಳು ನೆಲಸಮಗೊಂಡಿತ್ತು. ಅನೇಕ ಐತಿಹಾಸಿಕ ಕಟ್ಟಡಗಳು ಸೇರಿದಂತೆ ಒಂದು ದಶಲಕ್ಷಕ್ಕೂ ಹೆಚ್ಚು ಹಾನಿಗೊಳಗಾಗಿತ್ತು. ಹೀಗೆ ಭೂಕಂಪದಿಂದ ಸಾವಿಗೀಡಾದವರ ನೆನಪಿನಲ್ಲಿ ಗುಜರಾತ್ ಸರಕಾರವು ಬೃಹತ್ತಾದ ಸ್ಮೃತಿ ವನ್ ಮೆಮೋರಿಯಲ್ ಪ್ರಾಜೆಕ್ಟ್‌ಗೆ ಮುಂದಾಗಿದ್ದು ಇದರಲ್ಲಿ ಮ್ಯೂಸಿಯಂ ಮತ್ತು ಸ್ಮೃತಿವನ್ ಒಳಗೊಂಡಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಇದಾಗಿದ್ದು, ಈ ಪೈಕಿ ಸ್ಮೃತಿವನದ ರೂವಾರಿ, ಜಪಾನ್ ತಂತ್ರಜ್ಞಾನದ ಮಿಯಾವಾಕಿ ಫಾರೆಸ್ಟ್ ಮೂಲಕ ದೇಶದಾದ್ಯಂತ ಹಸಿರು ಕ್ರಾಂತಿ ಸೃಷ್ಟಿಸಿರುವ ಫಾರೆಸ್ಟ್ ಕ್ರಿಯೇಟರ್ಸ್ ಮುಖ್ಯಸ್ಥ ಡಾ. ಆರ್.ಕೆ. ನಾಯರ್.

ಸುಳ್ಯ ತಾಲೂಕಿನ ಜಾಲ್ಸೂರಿನವರಾದ ಆರ್.ಕೆ. ನಾಯರ್ ಕಳೆದ ಹಲವು ದಶಕಗಳಿಂದ ಗುಜರಾತ್‌ನಲ್ಲಿ ನೆಲೆಸಿದ್ದು, ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ ಗಾರ್ಮೆಂಟ್ಸ್ ಉದ್ಯಮಿಯಾಗಿ ಪ್ರಸಿದ್ಧರಾಗಿದ್ದಾರೆ. ನೂರಾರು ಮಂದಿಗೆ ಉದ್ಯೋಗ ನೀಡಿದ್ದಾರೆ. ಹಲವು ವರ್ಷಗಳಿಂದ ಮಿಯಾವಾಕಿ ಮಾದರಿ ಅರಣ್ಯ ಬೆಳೆಸುತ್ತಿರುವ ಆರ್.ಕೆ. ನಾಯರ್‌ರವರು ದೇಶದ ವಿವಿಧ ರಾಜ್ಯಗಳಲ್ಲಿ ನೂರಕ್ಕೂ ಹೆಚ್ಚು ಹಸಿರು ವನಗಳ ಮೂಲಕ ಲಕ್ಷಾಂತರ ಗಿಡಗಳನ್ನು ಬೆಳೆಸಿದ್ದು, ಒಂದು ಕೋಟಿ ಗಿಡ ಬೆಳೆಸುವ ಗುರಿ ಹೊಂದಿದ್ದು, ಭುಜ್ ಪ್ರದೇಶದಲ್ಲೂ ಈ ಅರಣ್ಯ ಬೆಳೆಸಿದ್ದಾರೆ. ಇದು ವಿಶ್ವದ ಅತ್ಯಂತ ದೊಡ್ಡ ಮಿಯಾವಾಕಿ ಅರಣ್ಯ.

 

ಗುಜರಾತ್ ಸ್ಟೇಟ್ ಡಿಸಾಸ್ಟರ್‌ವಮ್ಯಾನೇಜ್‌ಮೆಂಟ್ ಅಥೋರಿಟಿ (ಜಿ.ಎಸ್.ಡಿ.ಎಂ.ಎ.) ಮುಖಾಂತರ ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಫಂಡ್ (ಸಿಎಸ್‌ಆರ್) ಮುಖಾಂತರ ಈ ಕಾರ್ಯ ಕಾರ್ಯಗತಗೊಳ್ಳುತ್ತಿದ್ದು, ಇಲ್ಲಿ ಒಟ್ಟು ೨,೨೩,೫೩೩ ಗಿಡಗಳನ್ನು ನೆಡಲಾಗಿದೆ. ಕಳೆದ ಒಂದು ವರ್ಷದಿಂದ ಈ ಕಾರ್ಯ ಪ್ರಗತಿಯಲ್ಲಿದ್ದು, ಸುಮಾರು ೧೧೭ ಜಾತಿಯ ಗಿಡಗಳನ್ನು ನೆಡಲಾಗಿದೆ. ಒಂದು ವರ್ಷದಲ್ಲಿಯೇ ಹಸಿರು ವನ ಕಂಗೊಳಿಸಿದೆ. ಕುಕ್ಕೆಸುಬ್ರಹ್ಮಣ್ಯ ಸಮೀಪದ ನೆಟ್ಟಣದ ಜಯಕೃಷ್ಣರವರು ಡಾ. ಆರ್.ಕೆ. ನಾಯರ್ ತಂಡದ ಟೀಮ್ ಸೈಟ್ ಇನ್‌ಚಾರ್ಜ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇಂದು ಈ ಬೃಹತ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದರು. ಡಾ. ಆರ್.ಕೆ. ನಾಯರ್ ಜೊತೆಗಿದ್ದರು. ಗಿಡ ನೆಟ್ಟು ನೀರುಣಿಸಿ ಪ್ರಧಾನಿಯವರು ಉದ್ಘಾಟನೆ ನೆರವೇರಿಸಿದರು. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸೇರಿದಂತೆ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.