ಸೆ.2 : ಪ್ರಧಾನಿ ಕಾರ್ಯಕ್ರಮಕ್ಕೆ ಸುಳ್ಯ ತಾಲೂಕಿನಿಂದ 3599 ಫಲಾನುಭವಿಗಳು

0

 

ತಾ.ಪಂ.ನಲ್ಲಿ ಸಚಿವ ಎಸ್.ಅಂಗಾರರ ನೇತೃತ್ವದಲ್ಲಿ ಪೂರ್ವಭಾವಿ ಸಭೆ

 

ಸೆ.2 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ನಡೆಯುವ ಸಭಾ ಕಾರ್ಯಕ್ರಮಕ್ಕೆ ಸುಳ್ಯ ತಾಲೂಕಿನಿಂದ ಭಾಗವಹಿಸಲು ವಿವಿಧ ಯೋಜನೆಗಳಲ್ಲಿ ಒಟ್ಟು 3599 ಫಲಾನುಭವಿಗಳನ್ನು ಗುರುತಿಸಲಾಗಿದೆ. ಪಲಾನುಭವಿಗಳನ್ನು ಕರೆದೊಯ್ಯುವ ಕುರಿತು ಸಿದ್ಧತೆಗಾಗಿ ರೂಟ್ ನೋಡಲ್ ಅಧಿಕಾರಿಗಳು ಮತ್ತು ರೂಟ್ ಆಫೀಸರ್‌ಗಳ ಪೂರ್ವ ಭಾವಿ ಸಭೆ ಸುಳ್ಯ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಆ.30 ರಂದು ನಡೆಯಿತು.

ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್. ಅಂಗಾರ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಹಶೀಲ್ದಾರ್ ಅನಿತಾ ಲಕ್ಷ್ಮಿ ಹಾಗು ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ಎನ್.ಭವಾನಿಶಂಕರ ಅಧಿಕಾರಿಗಳಿಗೆ ಮಾಹಿತಿ ಮತ್ತು ಸಲಹೆ ಸೂಚನೆಗಳನ್ನು ನೀಡಿದರು.

ಉಪ ತಹಶೀಲ್ದಾರ್ ಚಂದ್ರಕಾಂತ್, ಎಂ.ಆರ್. ತಾಲೂಕು ಆರೋಗ್ಯಾಧಿಕಾರಿ ಬಿ.ನಂದಕುಮಾರ್, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಮೆಸ್ಕಾಂ ಎಇಇ ಹರೀಶ್ ನಾಯ್ಕ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಸುಳ್ಯ ತಾಲೂಕಿನ 14 ಸ್ಥಳಗಳಿಂದ ಬಸ್ಸುಗಳು ಬೆಳಿಗ್ಗೆ 6 ಗಂಟೆಗೆ ಹೊರಡಲಿದ್ದು ರೂಟ್ ನೋಡಲ್ ಅಧಿಕಾರಿಗಳಾಗಿ ನೇಮಕಗೊಂಡವರು ಆ ಸ್ಥಳಗಳಿಂದ ಹೊರಡುವ ಬಸ್ಸುಗಳಲ್ಲಿ ನಿಗದಿತ ಫಲಾನುಭವಿಗಳು ಆಗಮಿಸಿದ ನಂತರ ನಿಗದಿತ ಸಮಯದಲ್ಲಿ ಬಸ್ಸುಗಳನ್ನು ಹೊರಡಿಸುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಮತ್ತು ಬಸ್ಸುವಾರು ನೇಮಿಸಿದ ರೂಟ್ ಆಫೀಸರಗಳೊಂದಿಗೆ ಸಮನ್ವಯ ಸಾಧಿಸಿ ಪ್ರಧಾನ ಮಂತ್ರಿಗಳ ಕಾರ್ಯಕ್ರಮಕ್ಕೆ ಫಲಾನುಭವಿಗಳನ್ನು ಯಾವುದೇ ತೊಂದರೆ ಇಲ್ಲದ ರೀತಿಯಲ್ಲಿ ಕರೆದುಕೊಂಡು ಹೋಗಲು ಅಗತ್ಯ ಕ್ರಮವಹಿಸಬೇಕು ಎಂದು ತಹಶೀಲ್ದಾರ್ ಅನಿತಾ ಲಕ್ಷ್ಮಿ ಹಾಗು ಇಬ ಭವಾನಿಶಂಕರ್ ಅಧಿಕಾರಿಗಳಿಗೆ ಸೂಚಿಸಿದರು. ಪ್ರತಿ ಬಸ್ಸಿಗೆ ಒಬ್ಬರಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಲಭ್ಯವಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.

3599 ಫಲಾನುಭವಿಗಳು: ಪ್ರಧಾನ ಮಂತ್ರಿಗಳ ಕಾರ್ಯಕ್ರಮಕ್ಕೆ ತೆರಳಲು ಸುಳ್ಯ ತಾಲೂಕಿನಿಂದ 3599 ಫಲಾನುಭವಿಗಳನ್ನು ಗುರುತಿಸಲಾಗಿದೆ. ಸಂಜೀವಿನಿ ಯಲ್ಲಿ 500, ಪಿ.ಎಮ್ ಕಿಸಾನ್ ಯೋಜನೆಯಲ್ಲಿ 1000, ಮೆಸ್ಕಾಂ 625, ಪಿ.ಎಮ್ ಸ್ವನಿಧಿ 100, ಸ್ವಾಮಿತ್ಯ 150, ಆಯುಷ್ಮಾನ್ ಭಾರತ್ 224 ಫಲಾನುಭವಿ ಸೇರಿದಂತೆ ಇನ್ನಿತರ ಫಲಾನುಭವಿ ಗಳನ್ನು ಕರೆದುಕೊಂಡು ಹೋಗಲು ನಿರ್ಧಾರ ಮಾಡಲಾಯಿತು.

14 ರೂಟ್‌ನಿಂದ ಬಸ್‌ ಹೊರಡಲಿದೆ: ಫಲಾನುಭವಿಗಳನ್ನು ಕರೆದೊಯ್ಯಲು ಬಸ್ ಹೊರಡಲು 14 ರೂಟ್‌ಗಳನ್ನು ಗುರುತಿಸಲಾಗಿದೆ. ಪಂಜ, ನಿಂತಿಕಲ್ಲು, ಬೆಳ್ಳಾರೆ, ಗುತ್ತಿಗಾರು ಕೆಎಸ್‌ರ್‌ಟಿಸಿ ಬಸ್ ನಿಲ್ದಾಣ, ಕೊಲ್ಲಮೊಗ, ಎಲಿಮಲೆ, ಕುಕ್ಕುಜಡ್ಕ, ಸಂಪಾಜೆ ಕಲ್ಲುಗುಂಡಿ, ಅರಂತೋಡು, ಮರ್ಕಂಜ ಗೋಳಿಯಡ್ಕ, ಕೋಲ್ಕಾರು ಆಲೆಟ್ಟಿ, ಮಂಡೆಕೋಲು, ಜಾಲೂರು, ಸುಳ್ಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಬಸ್ ಹೊರಡಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.