ಪ್ರಧಾನಿ ಮೋದಿಯವರ ಪ್ರಭಾವಕ್ಕೆ ಜನರು ಸೇರುತ್ತಿಲ್ಲ. ಇದನ್ನರಿತ ಬಿಜೆಪಿ‌ ಅಧಿಕಾರಿಗಳ ಮೂಲಕ ಜನರನ್ನು ಸೇರಿಸುತ್ತಿದ್ದಾರೆ

0

ಅಧಿಕಾರಿಗಳು ಜನ ಸೇವಕರು, ಬಿಜೆಪಿ ಏಜೆಂಟರಾಗಬಾರದು : ಕಾಂಗ್ರೆಸ್

ಮಂಗಳೂರಿನಲ್ಲಿ ಸೆ.2ರಂದು ನಡೆಯಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮದಲ್ಲಿ ಭಾಗವಹಿಸಲು ಫಲಾನುಭವಿಗಳನ್ನು ಕರೆದೊಯ್ಯುವ ಕುರಿತು ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಹಶಿಲ್ದಾರರ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ಉಪಸ್ಥಿತಿಯನ್ನು ನೋಡಿದಾಗ ಅಧಿಕಾರಿಗಳು ಭಾರತೀಯ ಜನತಾ ಪಾರ್ಟಿಯ ಏಜೆಂಟರಾಗಿ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಮತ್ತು ಇಂತಹ ಅಧಿಕಾರಿಗಳ ನಡೆಯನ್ನು ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್, ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ್, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಭರತ್ ಮುಂಡೋಡಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ನಡೆಯುವ ಪ್ರಧಾನಮಂತ್ರಿಗಳ ಕಾರ್ಯಕ್ರಮಕ್ಕೆ ಜನರನ್ನು ಸೇರಿಸುವ ಜವಾಬ್ದಾರಿಯನ್ನು ಸರಕಾರಿ ಅಧಿಕಾರಿಗಳು ತೆಗೆದುಕೊಂಡಿರುವುದು ನಾಚಿಕೆಗೇಡಿನ ಕೆಲಸ. ಈಗ ಮೋದಿಯವರ ಪ್ರಭಾವ ಕಡಿಮೆಯಾಗಿದ್ದು ಜನರು ಸೇರುವುದಿಲ್ಲವೆಂದು ಮನದಟ್ಟಾಗಿರುವ ಬಿಜೆಪಿ ಯವರು ಇಂತಹ ನೀಚ ರಾಜಕೀಯಕ್ಕೆ ಇಳಿದಿರುವುದು ನಾಚಿಕೆಗೇಡು.

ದ.ಕ. ಜಿಲ್ಲೆಯಲ್ಲಿ ಅಧಿಕಾರಿಗಳು ಎಲ್ಲಿಯೂ ಬಿಜೆಪಿಯ ನಾಯಕರ ಜೊತೆಯಲ್ಲಿ ಕುಳಿತು ಸಭೆ ಮಾಡಿದ್ದು ಕಂಡುಬಂದಿರುವುದಿಲ್ಲ. ಅದು ಸುಳ್ಯದಲ್ಲಿ ಮಾತ್ರ ನಡೆದಿರುತ್ತದೆ. ಜನಸಾಮಾನ್ಯರು ಬೆಲೆ ಏರಿಕೆಯಿಂದ ಕಂಗೆಟ್ಟಿದ್ದರೂ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಇದರ ಗೋಚರವೇ ಇಲ್ಲ. ರಸ್ತೆಗಳು ವಾಹನಗಳಿಗೆ, ಜನಸಾಮಾನ್ಯರಿಗೆ ಕೂಡ ಸಂಚಾರಕ್ಕೆ ಯೋಗ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಜನಸಾಮಾನ್ಯರನ್ನು ಇಲಾಖೆಯ ಅಧಿಕಾರಿಗಳು ಆಮೀಷ ಒಡ್ಡಿ ಬಲಾತ್ಕಾರವಾಗಿ ಮೋದಿ ಕಾರ್ಯಕ್ರಮಕ್ಕೆ ಎಳೆದು ತರುವುದು ಕಂಡು ಬಂದಿದೆ. ವಿವಿಧ ಇಲಾಖೆಗಳಿಂದ ಅಧಿಕಾರಿಗಳು ಕೂಡಾ ದೂರವಾಣಿಯಲ್ಲಿ ಸಂಪರ್ಕಿಸಿ ನೀವು ಸರಕಾರದ ಯೋಜನೆಯ ಫಲಾನುಭವಿಯಾಗಿದ್ದೀರಿ ಕಾರ್ಯಕ್ರಮಕ್ಕೆ ಬರಬೇಕೆಂದು ಜನಸಾಮಾನ್ಯರನ್ನು ಒತ್ತಾಯ ಪಡಿಸುತ್ತಿರುವುದು ಕಂಡುಬರುತ್ತಿದೆ. ಸರಕಾರಿ ಅಧಿಕಾರಿಗಳು ಜನರ ತೆರಿಗೆಯಿಂದ ಸವಲತ್ತುಗಳನ್ನು ವಿತರಣೆಯಾಗುತ್ತಿದೆ ಎಂದು ಅರಿಯದೇ ಮೋದಿ ಯವರ ಕಿಸೆಯಿಂದ ಸವಲತ್ತು ನೀಡುವುದೆಂದು ತಿಳಿದಿದ್ದಾರೆಯೋ ಎಂಬ ಪ್ರಶ್ನೆ ಜನಸಾಮಾನ್ಯರದ್ದಾಗಿದೆ. ಅಧಿಕಾರಿಗಳ ಸಂಬಳವೂ ಕೂಡ ಜನಸಾಮಾನ್ಯರ ತೆರಿಗೆಯಾಗಿದೆ. ಅಧಿಕಾರಿಗಳನ್ನು ಜನಸಾಮಾನ್ಯರ ಕೆಲಸ ಮಾಡಲಿಕ್ಕೆ ನೇಮಕ ಆಗಿದೆಯೋ ಹೊರತು ಪಕ್ಷದ ಕೆಲಸ ಮಾಡುವುದಕ್ಕೆ ಅಲ್ಲ ಎಂಬ ಅರಿವು ಅಧಿಕಾರಿಗಳಿಗೆ ಇರಲಿ. ಇಂತಹ ಅಧಿಕಾರಿಗಳ ನಡೆಯನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.