ಸುಳ್ಯದ ಎಂ.ಟಿ.ಜಿತೇಂದ್ರರಿಗೆ ಬ್ಯುಸಿನೆಸ್ ಲೀಡರ್‍ಸ್ ಆಂಡ್ ಎಕ್ಸಲೆನ್ಸ್ ಅವಾರ್ಡ್

0

 

ದೇಶದ ಅತಿದೊಡ್ಡ ಸುದ್ದಿವಾಹಿನಿ ಜಾಲ ನೆಟ್​ವರ್ಕ್​18ನ ಕನ್ನಡ ವಾಹಿನಿ ನ್ಯೂಸ್​18 ಕನ್ನಡ ಚಾನೆಲ್​​ನವರು ಕೊಡಮಾಡುವ ಬ್ಯುಸಿನೆಸ್​ ಲೀರ್ಡ್ಸ್​ ಆ್ಯಂಡ್ ಎಕ್ಸಲೆನ್ಸ್​ ಅವಾರ್ಡ್​ಗೆ ಸುಳ್ಯದ ಯುವ ಉದ್ಯಮಿ ಜಿತೇಂದ್ರ ಎಂ.ಟಿ. ಆಯ್ಕೆಯಾಗಿದ್ದು, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪಡೆದುಕೊಂಡರು.
ಆ.27ರಂದು ಬೆಂಗಳೂರಿನ ಐಟಿಸಿ ಗಾರ್ಡೇನಿಯಾ ಹೊಟೇಲ್​ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಹಾಗು ಚಿತ್ರ ನಟಿ ಅರ್ಚನಾ ಜೋಶಿ ಜಿತೇಂದ್ರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಶೂನ್ಯದಿಂದ ಮೇಲೆ ಬಂದು ಕೋಟ್ಯಂತರ ರೂ. ವ್ಯವಹಾರ ನಡೆಸುತ್ತಿರುವ ರಾಜ್ಯದ ಉದ್ಯಮಿಗಳನ್ನು ಈ ಪ್ರಶಸ್ತಿಗೆ ಆರಿಸಲಾಗಿದ್ದು, ಜಿತೇಂದ್ರ ಎಂ.ಟಿ. ಪ್ರಶಸ್ತಿ ಸ್ವೀಕರಿಸಿದ ಅತಿ ಕಿರಿಯ ಉದ್ಯಮಿಯಾಗಿದ್ದಾರೆ. ಸುಳ್ಯದಂಥ ಗ್ರಾಮೀಣ ಪ್ರದೇಶದಲ್ಲಿ ಇಂಥ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಏಕೈಕ ಉದ್ಯಮಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ| ಅಶ್ವಥನಾರಾಯಣ, ಡಿಸಿಪಿ ಶ್ರೀನಿವಾಸ ಗೌಡ, ಚಿತ್ರನಟ ರಮೇಶ್ ಅರವಿಂದ್, ಶಾಸಕ ಹ್ಯಾರಿಸ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಸುಳ್ಯದಲ್ಲಿ ಶಿಕ್ಷಣ ಮುಗಿಸಿ ಬೆಂಗಳೂರಿಗೆ ತೆರಳಿದ್ದ ಜಿತೇಂದ್ರ ಅವರು ಬಳಿಕ ಅಲ್ಲೇ ಇಂಟೀರಿಯರ್ ಸಂಸ್ಥೆಯೊಂದರಲ್ಲಿ ಕೆಲಸದಲ್ಲಿದ್ದು, ಬಳಿಕ ಸ್ವಂತ ಉದ್ಯಮವನ್ನು ಸ್ಥಾಪಿಸಿದ್ದರು. ಬೆಂಗಳೂರಿನಲ್ಲಿ ಅವರದ್ದೇ ಸ್ವಂತ ಫ್ಯಾಕ್ಟರಿಯನ್ನೂ ಹೊಂದಿದ್ದು, ಹಲವರಿಗೆ ಉದ್ಯೋಗವನ್ನೂ ದೊರಕಿಸಿದ್ದಾರೆ. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರಾಗಿರುವ ಜಿತೇಂದ್ರ ಅವರು ತಮ್ಮ ಸಂಸ್ಥೆಗೂ ರಾಯರ ಹೆಸರನ್ನೇ ಇರಿಸಿದ್ದಾರೆ. ಜೊತೆಗೆ ಪ್ರತಿ ಗುರುವಾರ ರಾಯರನ್ನು ನೆನಪಿಸಿಕೊಂಡು ಬೆಂಗಳೂರಿನ ಎನ್​ಜಿಒಗಳಿಗೆ ಬಡಬಗ್ಗರ ಸೇವೆಗೆಂದು ದೇಣಿಗೆಯನ್ನೂ ನೀಡುತ್ತಿದ್ದಾರೆ.
ಸುಳ್ಯದ ಶ್ರೀ ರಾಘವೇಂದ್ರ ಗ್ಲಾಸ್ ಆಂಡ್ ಪ್ಲೈವುಡ್ ಸಂಸ್ಥೆಯ ಮಾಲಕ ಲಯನ್ .ಎಂ.ಎಂ. ತಮ್ಮಯ್ಯ ಹಾಗೂ ಶ್ರೀಮತಿ ಪೊನ್ನಕ್ಕಿ ದಂಪತಿಯ ಪುತ್ರನಾಗಿರುವ ಜಿತೇಂದ್ರ ಎಂ.ಟಿ.ಯವರು ಪ್ರಾಥಮಿಕ ಶಿಕ್ಷಣವನ್ನು ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ, ಪಿಯುಸಿ ವಿದ್ಯಾಭ್ಯಾಸವನ್ನು ಸುಳ್ಯದ ನೆಹರೂ ಮೆಮೋರಿಯಲ್ ಪಿ.ಯು. ಕಾಲೇಜಿನಲ್ಲಿ, ಬಿ.ಬಿ.ಎಂ. ಪದವಿಯನ್ನು ಸುಳ್ಯದ ನೆಹರೂ ಮೆಮೋರಿಯಲ್ ಪದವಿ ಕಾಲೇಜು ಹಾಗೂ ಡಿಪ್ಲೊಮಾ ಇನ್ ಇಂಟೀರಿಯರ್ ಸ್ನಾತಕೋತರ ಪದವಿಯನ್ನು ಬೆಂಗಳೂರಿನಲ್ಲಿ ಪೂರೈಸಿದರು.
ವಿದ್ಯಾಭ್ಯಾಸದ ಬಳಿಕ ಆರಂಭದಲ್ಲಿ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸ ಆರಂಭಿಸಿದರು. 5 ವರ್ಷದ ಹಿಂದೆ ಬೆಂಗಳೂರಿನ ಜಯನಗರದಲ್ಲಿ ಎಸ್.ಆರ್. ಇಂಟೀರಿಯರ್ ಹಾಗು ಆರ್ಕಿಟೆಕ್ಟ್ ಸಂಸ್ಥೆಯನ್ನು ಹುಟ್ಟು ಹಾಕಿದರು. ಇದೀಗ ಆ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.
ತಮ್ಮಯ್ಯ ಗೌಡರು ಕಳೆದ 32 ವರ್ಷಗಳಿಂದ ಸುಳ್ಯದ ಶ್ರೀರಾಂ ಪೇಟೆಯ ಕೊಯಿಂಗೋಡಿ ಕಾಂಪ್ಲೆಕ್ಸ್ ನಲ್ಲಿ ಶ್ರೀ ರಾಘವೇಂದ್ರ ಗ್ಲಾಸ್ ಆಂಡ್ ಪ್ಲೈವುಡ್ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಮೂಲತಃ ಮಡಿಕೇರಿಯ ಅರವತ್ತೊಕ್ಲು ಮೂಟೇರ ಮನೆಯವರಾಗಿರುವ ತಮ್ಮಯ್ಯ ಗೌಡರು ಪ್ರಸ್ತುತ ಸುಳ್ಯದ ಸರಕಾರಿ ಆಸ್ಪತ್ರೆ ಬಳಿಯ ಶ್ರೀನಗರದಲ್ಲಿ ಸ್ವಂತ ಕಾಮಧೇನು ನಿಲಯವನ್ನು ಹೊಂದಿ ವಾಸವಿದ್ದಾರೆ.  ಜಿತೇಂದ್ರ ಅವರ ತಂಗಿ ಎಂ.ಟಿ.ತೃಪ್ತಿ ಸುಳ್ಯದ ಎನ್.ಎಂ.ಸಿ.ಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.

 

.