ಕೋಡಿ ಕುಶಾಲಪ್ಪ ಗೌಡರ ನಿಧನಕ್ಕೆ ಬಿ.ಎ.ವಿವೇಕ ರೈ ಸಂತಾಪ

0

 

 

“ಆಪ್ತತೆಯ ಹಿರಿಯರನ್ನು ಕಳೆದುಕೊಂಡು ಮನಸ್ಸು ಭಾರವಾಗಿದೆ”

ಕನ್ನಡದ ಹಿರಿಯ ವಿದ್ವಾಂಸ, ಭಾಷಾವಿಜ್ಞಾನಿ ಪ್ರೊ.ಕೋಡಿ ಕುಶಾಲಪ್ಪ ಗೌಡರ ನಿಧನಕ್ಕೆ ವಿಶ್ರಾಂತ ಉಪ ಕುಲಪತಿ ಡಾ. ಬಿ. ಎ. ವಿವೇಕ ರೈ ಸಂತಾಪ ಸೂಚಿಸಿದ್ದಾರೆ.

 

ಕೋಡಿಯವರ ನಿಧನವು ಕನ್ನಡ ವಿದ್ವತ್ ಲೋಕಕ್ಕೆ ಅಪಾರವಾದ ನಷ್ಟ. ಪ್ರೊ.ಕುಶಾಲಪ್ಪ ಗೌಡರ ಜೊತೆಗೆ ನನಗೆ ನಲವತ್ತು ವರ್ಷಗಳ ಆತ್ಮೀಯ ಸಂಬಂಧ ಇತ್ತು.ನಾನು ಮಂಗಳೂರು ವಿವಿಯ ಕನ್ನಡ ವಿಭಾಗದ ಮುಖ್ಯಸ್ಥನಾಗಿ ಇದ್ದಾಗ ಅವರು ಮದ್ರಾಸು ವಿವಿಯ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಇದ್ದರು.ಆ ಸಂದರ್ಭದಲ್ಲಿ ಅವರು ನಮ್ಮ ಕನ್ನಡ ವಿಭಾಗದ ಅಧ್ಯಯನ ಮಂಡಳಿ, ಪರೀಕ್ಷಾ ಮಂಡಳಿ, ಅಧ್ಯಾಪಕರ ಆಯ್ಕೆ ಸಮಿತಿ ಇತ್ಯಾದಿಗಳ ಸದಸ್ಯರಾಗಿ ನನಗೆ ಸಹಕಾರ ಮಾರ್ಗದರ್ಶನ ಕೊಡುತ್ತಿದ್ದರು. ನಾನು ಕೂಡಾ ಮದ್ರಾಸು ವಿವಿ ಯ ಅವರ ಕನ್ನಡ ವಿಭಾಗದ ಸಭೆಗಳಲ್ಲಿ ಭಾಗವಹಿಸುತ್ತಿದ್ದೆನು.ನಾನು ಕುಟುಂಬ ಸಹಿತ ಮದ್ರಾಸಿನ ಅವರ ಮನೆಯಲ್ಲಿ ಆತಿಥ್ಯ ಪಡೆಯುತ್ತಿದ್ದೆನು.
ಪ್ರೊ.ಕುಶಾಲಪ್ಪ ಗೌಡರು ಮದ್ರಾಸು ವಿವಿಯಿಂದ ನಿವೃತ್ತಿ ಹೊಂದಿದ ಬಳಿಕ ,ನನ್ನ ಕೋರಿಕೆಯನ್ನು ಒಪ್ಪಿಕೊಂಡು ಮಂಗಳೂರು ವಿವಿಯ ಕನ್ನಡ ವಿಭಾಗದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ನಮ್ಮ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ,ಮಾರ್ಗದರ್ಶನ ನೀಡಿದ ದಿನಗಳು ಅವಿಸ್ಮರಣೀಯ. ಮಂಗಳೂರಿನ ನಮ್ಮ ಮನೆಗೆ ಅವರು ತಮ್ಮ ಶ್ರೀಮತಿ ಅವರ ಜೊತೆಗೆ ಬಂದು ಆತಿಥ್ಯ ಸ್ವೀಕರಿಸಿದ ನೆನಪು ಹಸಿರಾಗಿದೆ.
ಶಾಸ್ತ್ರ ಮತ್ತು ಲಲಿತ ಸಾಹಿತ್ಯ – ಎರಡೂ ಕ್ಷೇತ್ರಗಳಲ್ಲಿ ಅವರು ಶ್ರೇಷ್ಠ ಸಾಧಕರಾಗಿದ್ದರು.
ಪ್ರೊ.ಕುಶಾಲಪ್ಪ ಗೌಡರ ಅನಾರೋಗ್ಯದ ವಿಷಯವನ್ನು ತಿಳಿದು ಆಗಸ್ಟ್ ೩೦ ರಂದು ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ಅವರನ್ನು ಕಂಡೆ.ಅವರು ನಿದ್ರೆಯ ಮಂಪರಿನಲ್ಲಿ ಇದ್ದ ಕಾರಣ ಅವರ ಜೊತೆಗೆ ಮಾತಾಡಲು ಆಗಲಿಲ್ಲ
ಅವರ ಮಗಳು ಮಾಲಿನಿ ,ಅಳಿಯ ಮತ್ತು ಮೊಮ್ಮಗ ಅವರ ಜೊತೆಗೆ ಮಾತಾಡಿ ಬಂದೆ.ಆದರೆ ಇಷ್ಟು ಬೇಗ ಅವರು ನಮ್ಮನ್ನು ಅಗಲುತ್ತಾರೆ ಎಂದು ನಾನು ಭಾವಿಸಿರಲಿಲ್ಲ.
ನಾಲ್ಕು ದಶಕಗಳ ಕಾಲದ ಆಪ್ತತೆಯ ಹಿರಿಯರನ್ನು ಕಳೆದುಕೊಂಡು ಮನಸ್ಸು ಭಾರವಾಗಿದೆ.ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ.ಅವರ ಕುಟುಂಬದವರ ದುಃಖದಲ್ಲಿ ನನ್ನ ಕುಟುಂಬ ಭಾಗಿ ಎಂದು ಸಂತಾಪ ಸಲ್ಲಿಸುತ್ತೇನೆ ಎಂದವರು ತಿಳಿಸಿದ್ದಾರೆ.