ಸಾರ್ಥಕ ಬದುಕು ಮುಗಿಸಿದ ಸಾತ್ವಿಕ ಸಾಧಕ

0

 

ನಾಡು ಕಂಡ ಶ್ರೇಷ್ಠ ಭಾಷಾ ವಿದ್ವಾಂಸ, ವ್ಯಾಕರಣ ತಜ್ಞ

ಪ್ರೊ. ಕೋಡಿ ಕುಶಾಲಪ್ಪ ಗೌಡರಿಗೆ ನುಡಿ ನಮನ

 

ನಾಡಿನ ಹಿರಿಯ ಸಾಹಿತಿ, ವಿದ್ವಾಂಸ, ಭಾಷಾ ವಿಜ್ಞಾನಿ, ವ್ಯಾಕರಣ ತಜ್ಞ ಕೋಡಿ ಕುಶಾಲಪ್ಪ ಗೌಡರು ಇನ್ನಿಲ್ಲ. ಮದರಾಸ್ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರು ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊಫೆಸರ್ ಕೋಡಿಯವರು ಈ ನಾಡು ಕಂಡ ಶ್ರೇಷ್ಠ ಭಾಷಾ ವಿಜ್ಞಾನಿ. ಕವಿ ಹೃದಯದ ವಿದ್ವಾಂಸ ಡಾ. ಕೋಡಿ ಕುಶಾಲಪ್ಪ ಗೌಡ ಭಾಷಾ ವಿಜ್ಞಾನ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಖ್ಯಾತಿ ಗಳಿಸಿದವರು. ವ್ಯಾಕರಣ ಹಾಗೂ ಭಾಷಾ ವಿಜ್ಞಾನವನ್ನು ನೀರಸವೆಂದು ಹೀಗಳೆದ ಕಾಲದಲ್ಲೂ ತಮ್ಮ ಒಡನಾಡಿಗಳಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಈ ಕುರಿತ ಆಸಕ್ತಿ ಹುಟ್ಟಿಸಿದವರು.

1931 ರಲ್ಲಿ ಪೆರಾಜೆಯ ಕೋಡಿಯಲ್ಲಿ ಕೋಡಿ ಕೃಷ್ಣಪ್ಪ ಮತ್ತು ಕೋಡಿ ಗೌರಮ್ಮನವರ ಪುತ್ರನಾಗಿ ಜನಿಸಿದ ಕುಶಾಲಪ್ಪ ಗೌಡರು ಪೆರಾಜೆಯ ಪ್ರಾಥಮಿಕ ಶಾಲೆಯಲ್ಲಿ ೪ನೇ ತರಗತಿಯವರೆಗೆ, ಸುಳ್ಯದ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ೮ನೇ ತರಗತಿಯವರೆಗೆ, ಪುತ್ತೂರಿನ ಬೋರ್ಡ್ ಹೈಸ್ಕೂಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ವರೆಗೆ, ಮಡಿಕೇರಿಯ ಸರಕಾರಿ ಕಾಲೇಜಿನಲ್ಲಿ ಇಂಟರ್‌ಮೀಡಿಯೆಟ್ ಹಾಗೂ ಮದ್ರಾಸಿನ ಪ್ರೆಸಿಡೆಂಟ್ ಸಿ ಕಾಲೇಜಿನಲ್ಲಿ ಕನ್ನಡ ಬಿ.ಎ. ಹಾನರ್‍ಸ್ ಪಡೆದರು. ಮದರಾಸ್ ವಿಶ್ವ ವಿದ್ಯಾನಿಲಯದಿಂದ ಎಂ.ಎ., ಅಣ್ಣಾಮಲೈ ವಿಶ್ವವಿದ್ಯಾನಿಲಯದಿಂದ ಡಿಪ್ಲೊಮಾ ಇನ್ ಲಿಂಗ್ವಿಸ್ಟಿಕ್, ಎಂಲಿಟ್ ಹಾಗೂ ಪಿಎಚ್‌ಡಿ ಪಡೆದರು. ಪ್ರೊಫೆಸರ್ ಟಿ.ಪಿ. ಮೀನಾಕ್ಷಿ ಸುಂದರಂ ಮಾರ್ಗದರ್ಶನದಲ್ಲಿ ವಡ್ಡಾರಾಧನೆಯ ಸಂಶೋಧಕ ಪ್ರಬಂಧಕ್ಕೆ ಎಂಲಿಟ್ ಪಡೆದಿದ್ದು, ಅದೇ ವಿಶ್ವ ವಿದ್ಯಾಲಯದ ಪ್ರೊಫೆಸರ್ ಅಗಸ್ತ್ಯಲಿಂಗಂರವರ ನಿರ್ದೇಶನದಲ್ಲಿ ಕೊಡಗು, ಉತ್ತರಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕ್ರಿ.ಶ. 1೦೦೦ದಿಂದ 14೦೦ ವರೆಗಿನ ಕನ್ನಡ ಶಾಸನಗಳ ಭಾಷಾ ವಿಷ್ಲೇಷಣೆ ಎಂಬ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ದೊರಕಿದೆ.

1955 ರಲ್ಲಿ ವೃತ್ತಿ ಬದುಕು ಪ್ರಾರಂಭಿಸಿದ ಕುಶಾಲಪ್ಪ ಗೌಡರು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಕನ್ನಡ ವೃತ್ತಿ ನಿರ್ವಹಿಸಿದರು. ಬಳಿಕ ಆಂಧ್ರಪ್ರದೇಶದ ಮದನಪಳ್ಳಿಯ ಬೆಸೆಂಟ್ ಥಿಯೋಸಾಫಿಕಲ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾದರು. 1957 ರಲ್ಲಿ ಅಣ್ಣಾಮಲೈ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ನೇಮಕಗೊಂಡು 1966 ರಲ್ಲಿ ಲೀಡರ್ ಇನ್ ಲಿಂಗಿಸ್ಟಿಕ್ ಆಗಿ ಭಡ್ತಿಗೊಂಡರು. ಬಳಿಕ ಭಾಷಾ ವಿಜ್ಞಾನದ ಪ್ರೌಢ ಅಧ್ಯಯನ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾದರು. 1976 ರಿಂದ ನಿವೃತ್ತಿಯಾಗುವ ತನಕ ಮದ್ರಾಸ್ ವಿಶ್ವವಿದ್ಯಾನಿಯದಲ್ಲಿ ಕನ್ನಡ ಪ್ರೋಫೆಸರ್ ಮತ್ತು ವಿಭಾಗ ಮುಖ್ಯಸ್ಥರಾಗಿದ್ದರು. ಇಂಗ್ಲೇಂಡ್‌ನ ಮ್ಯಾಂಚೆಸ್ಟರ್ ವಿಶ್ವ ವಿದ್ಯಾನಿಲಯದಲ್ಲಿ 1೦ ತಿಂಗಳ ಕಾಲ ವಿಶೇಷ ಅಧ್ಯಯನ ನಡೆಸಿದ್ದು, ಜರ್ಮನಿ, ಸ್ವಿಜರ್‌ಲ್ಯಾಂಡ್‌ಗಳ ಪ್ರವಾಸವನ್ನು ಮಾಡಿದ್ದಾರೆ.

ಬೋಧನೆ ಮತ್ತು ಸಂಶೋಧನೆಯಲ್ಲಿ ಪ್ರಸಿದ್ಧರಾದ ಕುಶಾಲಪ್ಪ ಗೌಡರು ಹಲವು ಕನ್ನಡ ಮತ್ತು ಇಂಗ್ಲೀಷ್ ಕೃತಿಗಳನ್ನು ಹೊರತಂದಿದ್ದಾರೆ. ಸಾಹಿತ್ಯ ವಿಮರ್ಷಾತ್ಮಕ ಪ್ರಬಂಧಗಳು, ಲಘು ಪ್ರಬಂಧಗಳು, ಸಾಮಾನ್ಯ ವಿಜ್ಞಾನಗಳು, ಕವಿತೆಗಳು ಪ್ರಕಟಗೊಂಡಿದೆ. ಸುಬ್ರಹ್ಮಣ್ಯದಲ್ಲಿ ನಡೆದ ಸುಳ್ಯ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠ ಅಲಂಕರಿಸಿದ್ದ ಕೋಡಿಯವರು ಮಡಿಕೇರಿ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಗೌರವ ಪಡೆದಿದ್ದರು. 1994 ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ 7ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು.

ಕನ್ನಡ ಭಾಷೆ ಮತ್ತು ವ್ಯಾಕರಣಗಳು ಒಂದು ಅಧ್ಯಯನ, ಕನ್ನಡ ತಿರುಳು ಮತ್ತು ಕನ್ನಡ ಸಮಾಜ, ಕನ್ನಡ ಭಾಷೆ ಮತ್ತು ವ್ಯಾಕರಣಗಳ ಒಂದು ಸಮೀಕ್ಷೆ, ಕನ್ನಡ ಸಂಕ್ಷಿಪ್ತ ವ್ಯಾಕರಣ, ವಡ್ಡಾರಾಧನೆಯ ಭಾಷಿಕ ವ್ಯಾಕರಣ, ಕನ್ನಡ ಭಾಷಾವಲೋಕನ, ಗೌಡ ಕನ್ನಡ, ಎ ಗ್ರಾಮರ್ ಆಫ್ ಕನ್ನಡ, ದ್ರಾವಿಡಿಯನ್ ಕೆ ಸಿಸ್ಟಮ್, ಎ ಕೋರ್ಸ್ ಇನ್ ಮಾಡರ್ನ್ ಕನ್ನಡ ಕುಶಾಲಪ್ಪ ಗೌಡರ ಅಮೂಲ್ಯ ಕೃತಿಗಳು, ಇವುಗಳ ಜೊತೆಗೆ ಗಂಗಾದೇವಿ ವಿರಚಿತ ಮಧುರಾ ವಿಜಯನ್ ಮತ್ತು ಕಂಬನ್ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ಅರೆಭಾಷೆಯಲ್ಲಿ ಮಹಾಭಾರತವನ್ನು ಬರೆದ ಮೊದಲಿಗರು ಅವರು.

ಭಾಷಾ ಶಾಸ್ತ್ರದ ಮಹಾಪಂಡಿತರಾಗಿದ್ದರೂ ಕುಶಾಲಪ್ಪ ಗೌಡರಿಗೆ ಪ್ರಬಂಧ ಸಾಹಿತ್ಯದಲ್ಲಿ ಬಹಳ ಆಸಕ್ತಿ ಇತ್ತು. ಊರೊಸಗೆ, ಕಡಲ ತಡಿಯ ಕನವರಿಕೆ, ಪಯಸ್ವಿನಿಯ ಕಲರವ, ನಾನು ಸತ್ತಿಲ್ಲ, ಕೊಳಚೆ ಪುರಿಯ ವಶಕ ಪುರಾಣ, ಪುಸ್ತಕಂ ವಿನೀತಾ ವಿತ್ತಂ, ಸತ್ಯದ ಸುಳ್ಳು, ಹೆಂಡತಿಯನ್ನು ಹೇಗೆ ಕರಿಯೋದು ಮೊದಲಾದವುಗಳು ಅವರ ನಗು ಹಾಸ್ಯದ ಪ್ರಬಂಧ ಸಂಕಲನಗಳು.

ತನ್ನ ಪತ್ನಿ ಕಮಲಾ ತೀರಿಕೊಂಡಾಗ ತೀರಾ ಕುಸಿದ ಹೋಗಿದ್ದ ಅವರು ಪತ್ನಿಯ ಗೌರವಾರ್ಥ ಕಮಲ ನಿಮೀಲನ ಎಂಬ ಪುಸ್ತಕ ಬರೆದು ಪತ್ನಿಯೊಂದಿಗಿನ ಒಡನಾಟವನ್ನು ಅನಾವರಣಗೊಳಿಸಿದ್ದರು.

ಇಳಿವಯಸ್ಸಿನಲ್ಲಿ ಅರೆಭಾಷೆ ಸಾಹಿತ್ಯ ಕೃಷಿಯತ್ತ ಹೆಚ್ಚು ಒಲವು ತೋರಿದ್ದ ಕೋಡಿಯವರು ಅರೆಭಾಷೆ ಕುರಿತಂತೆ ಹಲವು ಕೃತಿಗಳನ್ನು ಬರೆದಿದ್ದರು. ಬದುಕಿನ ಅಂತ್ಯದ ವೇಳೆಯಲ್ಲಿ ವ್ಯಾಕರಣ ಪುಸ್ತಕವೊಂದನ್ನು ಸಿದ್ಧಪಡಿಸಿದ್ದರು.

ಸಾಹಿತ್ಯ ಪ್ರತಿಭೆಯನ್ನು ಗಮನಿಸಿ ಹಲವು ಪ್ರಶಸ್ತಿಗಳು ಅವರ ಮುಡಿಗೇರಿತು. ಕರ್ನಾಟಕ ಸರಕಾರದ ರಾಜ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

೨೦೦೫ರಲ್ಲಿ ಸುಳ್ಯದಲ್ಲಿ ಪ್ರೊಫೆಸರ್ ಕೋಡಿ ಕುಶಾಲಪ್ಪ ಗೌಡ ಅಭಿನಂದನಾ ಸಮಿತಿ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆದು ಡಾ. ಕೆ. ಚಿನ್ನಪ್ಪ ಗೌಡರ ಸಂಪಾದತ್ವದ ದುಡಿ ಒಸಗೆ ಎಂಬ ಅಭಿನಂದನಾ ಸಂಪುಟ ಸಮರ್ಪಣೆಯಾಗಿತ್ತು.

ಕೋಡಿಯವರ ಪತ್ನಿ ಶ್ರೀಮತಿ ಕಮಲ 1991 ರಲ್ಲಿ ದಿವಂಗತರಾಗಿದ್ದಾರೆ. ಕೋಡಿಯವರಿಗೆ ಮೂವರು ಪುತ್ರಿಯರು. ಹಿರಿಯಾಕೆ ಶ್ರೀಮತಿ ಕುಸುಮಾ. ಎರಡನೆಯಾಕೆ ಶ್ರೀಮತಿ ಕೆ. ಸುಮನ, ಕೊನೆಯಾಕೆ ಶ್ರೀಮತಿ ಕೆ. ಮಾಲಿನಿ.

ಸುದ್ದಿ ಬಿಡುಗಡೆ ಪತ್ರಿಕೆಯೊಂದಿಗೆ ಆರಂಭದಿಂದಲೇ ಹಿತೈಷಿಯಾಗಿದ್ದ ಕೋಡಿಯವರ ಬರಹಗಳು ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ, ಸುದ್ದಿ ಬಿಡುಗಡೆ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಗೊಳ್ಳುತ್ತಿತ್ತು. ಅಗ್ರಮಾನ್ಯ ಸಾಹಿತ್ಯ ಸಾಧಕನಿಗಿದೋ ಅಂತಿಮ ವಿದಾಯ.

  • ದುರ್ಗಾಕುಮಾರ್ ನಾಯರ್‌ಕೆರೆ