ಪ್ರತಿಮನೆಗೂ ವಿದ್ಯುತ್ : ಅಧಿಕಾರಿಗಳೇ ಹೊಣೆ

0

 

ಅರ್ಜಿ ಬಂದಿಲ್ಲವೆಂದು ಸುಮ್ಮನಿರಬಾರದು : ಪಿಡಿಒ ಗಳು ಸರ್ವೆ ಮಾಡಬೇಕು

ತ್ರೈಮಾಸಿಕ ಕೆ.ಡಿ.ಪಿ. ಸಭೆಯಲ್ಲಿ ಸಚಿವ ಅಂಗಾರ ಸೂಚನೆ

ಸುಳ್ಯ ವಿಧಾನ ಸಭಾ ಕ್ಷೇತ್ರದ ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕದ ವ್ಯವಸ್ಥೆ ಆಗಬೇಕು. ವಿದ್ಯುತ್ ಸಂಪರ್ಕ ಆಗಿಲ್ಲ ಎಂಬ ದೂರು ಬರಬಾರದು. ಅರ್ಜಿ ಬಂದಿಲ್ಲ ಎಂಬ ಸಬೂಬು ನೀಡದೇ ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಯಾ ಪಿಡಿಒಗಳು ಸರ್ವೆ ನಡೆಸಿ ವಿದ್ಯುತ್ ಸಂಪರ್ಕ ಆಗದ ಮನೆಗಳ ಮಾಹಿತಿ ನೀಡಬೇಕು. ಮೆಸ್ಕಾಂ ಇಲಾಖೆ ವಿದ್ಯುತ್ ಸಂಪರ್ಕದ ವ್ಯವಸ್ಥೆ ಕಲ್ಪಿಸಬೇಕು” ಎಂದು ಸಚಿವ ಎಸ್ ಅಂಗಾರ ಖಡಕ್ ಸೂಚನೆ ನೀಡಿದ್ದಾರೆ.

ತಾಲೂಕು ಪಂಚಾಯತ್‌ನ ಸಭಾಂಗಣದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸುಳ್ಯ ಮೆಸ್ಕಾಂ ವಿಭಾಗಕ್ಕೆ ಸಂಬಂಧಿಸಿದಂತೆ ೩೮೫ ಅರ್ಜಿಗಳಲ್ಲಿ ೩೮೧ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಸುಬ್ರಹ್ಮಣ್ಯ ಉಪ ವಿಭಾಗದಲ್ಲಿ ೧೬೬ ಮನೆಗೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

`’ಅರ್ಜಿ ಬಂದುದಕ್ಕೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಹೇಳುತ್ತೀರಿ. ತಾಲೂಕಿನಲ್ಲಿ ಸರಿಯಾದ ರೀತಿಯಲ್ಲಿ ಸರ್ವೆ ನಡೆಸಬೇಕು. ಆಯಾ ಗ್ರಾಮ ಪಂಚಾಯತ್ ನ ಪಿಡಿಒ ಗಳು ಆಯಾ ವ್ಯಾಪ್ತಿಯಲ್ಲಿ ಸರ್ವೆ ನಡೆಸಿ ಇಲಾಖೆಗೆ ಮಾಹಿತಿ ನೀಡಬೇಕು. ವಿದ್ಯುತ್ ಸಂಪರ್ಕ ಆಗಿಲ್ಲ ಎಂಬ ಒಂದೇ ಒಂದು ದೂರು ಬರಬಾರದು. ಸರಕಾರ ಬೆಳಕು, ಭಾಗ್ಯ ಜ್ಯೋತಿಯಂತಹ ಯೋಜನೆ ತಂದಿರುವಾಗ ಅದನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವ ವ್ಯವಸ್ಥೆ ಅಧಿಕಾರಿಗಳು ಮಾಡಬೇಕು” ಎಂದು ಸಚಿವರು ಹೇಳಿದರು.
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಪರಂಬೋಕಿನಲ್ಲಿ ಕಟ್ಟಲಾದ ಕಟ್ಟಡಗಳ ಕುರಿತು ಪಾಲನಾ ವರದಿಯಲ್ಲಿ ಪ್ರಸ್ತಾಪವಾದಾಗ, “೧೩ ಕಟ್ಟಡಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ೩ ಅಕ್ರಮ ಕಟ್ಟಡಗಳಿಗೆ ೨ ಪಟ್ಟು ದಂಡ ವಿಧಿಸಲಾಗುತ್ತಿದೆ ಎಂದು ಮುಖ್ಯಾಧಿಕಾರಿಗಳು ಹೇಳಿದಾಗ, “ದಂಡ ಹಾಕುತ್ತೀರಿ ಆಕ್ಷನ್ ಆಗುವುದಿಲ್ಲವಾದರೆ ನದಿ, ರಸ್ತೆ ಪರಂಬೊಬೀಕಿನಲ್ಲಿ ಎಲ್ಲರೂ ಕಟ್ಟಡ ಕಟ್ಟಿ ದಂಡ ಕಟ್ಟುತ್ತಾರೆ. ಏನಾದರೂ ಆಕ್ಷನ್ ಆಗಬೇಕಲ್ವ” ಎಂದು ಸಚಿವರು ಪ್ರಶ್ನಿಸಿದಾಗ, ಅಕ್ರಮವಾಗಿ ಕಟ್ಟಡ ಕಟ್ಟಿದ್ದಾರೆ. ಅದಕ್ಕೆ ಈಗ ದಂಡ ಹಾಕಲಾಗಿದೆ. ಆದರೆ ರಸ್ತೆ ಅಗಲೀಕರಣ ಸಂದರ್ಭ ಅದನ್ನು ತೆಗೆಯಬೆಂದು ಬಂದರೆ ಅದನ್ನು ತೆಗೆಯಬೇಕಾಗುತ್ತದೆ ಎಂದು ತಾ.ಪಂ. ಆಡಳಿತಾಧಿಕಾರಿ ಅಭಿಷೇಕ್ ಎ ಹೇಳಿದರು. `’ಮತ್ತೊಮ್ಮೆ ದಾಖಲೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಿ” ಎಂದು ಸಚಿವರು ಸೂಚನೆ ನೀಡಿದರು.

ಕಲ್ಮಕಾರಿನಲ್ಲಿ ಪ್ರಾಕೃತಿಕ ವಿಕೋಪದಿಂದ ಮೂರು ವರ್ಷಗಳ ಹಿಂದೆ ಮನೆ ಕಳೆದುಕೊಂಡ ೯ ಕುಟುಂಬಗಳಿಗೆ ನಿವೇಷನಕ್ಕಾಗಿ ೫೫ ಸೆಂಟ್ಸ್ ಜಾಗ ಗುರುತಿಸಿಕೊಂಡವರಿಗೆ
೪ ವರ್ಷದಿಂದ ಮಲೇರಿಯಾ ಇಲ್ಲ
ಸುಳ್ಯ ತಾಲೂಕಿನಲ್ಲಿ ಕಳೆದ ೪ ವರ್ಷದಿಂದ ಮಲೇರಿಯಾ ಪ್ರಕರಣಗಳು ಕಂಡು ಬಂದಿಲ್ಲ. ಡೆಂಗ್ಯೂ ಕೂಡಾ ಈಗ ನಮ್ಮಲ್ಲಿ ಇಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ನಂದ ಕುಮಾರ್ ಮಾಹಿತಿ ನೀಡಿದರು.
ನಾಯಿ ಕಡಿತ, ಹಾವು ಕಡಿತ ಸೇರಿದಂತೆ ಎಲ್ಲ ಔಷಧಗಳು ಇದೆ ಎಂದು ಅವರು ಮಾಹಿತಿ ನೀಡಿದರು.
ಎಷ್ಟಿಮೇಟ್ ಪಟ್ಟಿ ಕೊಡಿ
ಪ್ರಾಕೃತಿಕ ವಿಕೋಪದಿಂದ ಕಲ್ಮಕಾರು ಶೆಟ್ಯಡ್ಕ ಸೇತುವೆ, ಕಲ್ಮಕಾರು ಪೇಟೆಯಿಂದ ಇನ್ನೊಂದು ಕಡೆಯಿರುವ ಸೇತುವೆ, ಕಲ್ಮಕಾರಿನ ಪೇಟೆಯ ಸೇತುವೆ, ಗುಂಡಿಹಿತ್ಲು ಸೇತುವೆ, ಬಾಳುಗೋಡು ಸೇತುವೆ, ಗುತ್ತಿಗಾರು ಬಳ್ಳಕ ಸೇತುವೆ, ಜಳಕದ ಹೊಳೆ ಸೇತುವೆ ಗಳು ಹಾನಿಗೊಂಡಿದ್ದು ಅದರ ಎಷ್ಟಿಮೇಟ್ ಮಾಡಿ ತಕ್ಷಣವೇ ನೀಡಬೇಕು ಎಂದು ಸಚಿವರು ಇಂಜಿನಿಯರ್‌ರಿಗೆ ಸೂಚನೆ ನೀಡಿದರು.
ಮಾರ್ಚ್ ಒಳಗೆ ಕೆಲಸ ಪೂರ್ಣ ಆಗಬೇಕು
ತಾಲೂಕಿನ ರಸ್ತೆಗಳ, ಕಟ್ಟಡಗಳ ಸೇರಿದಂತೆ ಇನ್ನಿತರ ಕೆಲಸಗಳಿಗೆ ಬಂದಿರುವ ಅನುದಾನಗಳು ಯಾವುದೂ ಲ್ಯಾಪ್ಸ್ ಆಗದಂತೆ ಅಧಿಕಾರಿಗಳು ನೋಡಬೇಕು. ಫ್ರೆಬರಿಯಲ್ಲೇ ಕೆಲಸ ಪೂರ್ತಿಯಾಗುವಂತೆ ನೋಡಿಕೊಳ್ಳಬೇಕು. ಮಾರ್ಚ್‌ನಲ್ಲಿ ಪೂರ್ಣವಾದ ವರದಿ ನೀಡಬೇಕು ಎಂದು ಸಚಿವರು ಸೂಚನೆ ನೀಡಿದರು.
ಅತಿಥಿ ಶಿಕ್ಷಕರಿಗೆ ಸಂಬಳ ಆಗಿಲ್ಲ
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹಾದೇವರು ಮಾಹಿತಿ ನೀಡಿ, ತಾಲೂಕಿನಲ್ಲಿ ಈ ಬಾರಿ ಬೇಡಿಕೆಯಂತೆ ಅತಿಥಿ ಶಿಕ್ಷಕರನ್ನು ನೀಡಲಾಗಿದೆ. ಆದರೆ ಅವರಿಗೆ ಸಂಬಳ ಆಗಿಲ್ಲ” ಎಂದು ಹೇಳಿದರು. `’ಸ್ವಲ್ಪ ಸಮಸ್ಯೆ ಆಗಿರಬಹುದು. ಸರಕಾರದ ಗಮನಕ್ಕೆ ತಂದು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.