ಎನ್ನೆಂಸಿಯಲ್ಲಿ ಕಾಲೇಜು ವಾರ್ಷಿಕೋತ್ಸವ

0

 


ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವು ಆಗಸ್ಟ್ 25ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ), ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ. ವಿ ಚಿದಾನಂದರು ಅಧ್ಯಕ್ಷತೆ ವಹಿಸಿ ಮಾತನಾಡಿ, ‘ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಾಗ ದೇಶದ ಉತ್ತಮ ನಾಗರಿಕರಾಗಲು ಸಾಧ್ಯ’ ಎಂದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಜಿರೆಯ ಎಸ್ ಡಿಎಂ ಕಾಲೇಜಿನ ಪ್ರಾಂಶುಪಾಲ ಉದಯಚಂದ್ರ ಪಿ ಎನ್ ಮಾತನಾಡಿ, ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಜ್ಞಾನಾರ್ಜನೆಯೊಂದಿಗೆ ಜೀವನ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳುವುದಕ್ಕೆ ಮತ್ತು ಸಾಂಸ್ಕೃತಿಕ ರಾಯಭಾರಿಗಳಾಗುವುದಕ್ಕೆ ಕಾಲೇಜು ವಾರ್ಷಿಕೋತ್ಸವಗಳು ಪೂರಕ ಮತ್ತು ಪ್ರೇರಕವಾಗಲಿ ಎಂದರು. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಭೋಜರಾಜ ವಾಮಂಜೂರು ಮಾತನಾಡಿ, ವಿದ್ಯೆ ಮನುಷ್ಯನಿಗೆ ಗೌರವವನ್ನು ತಂದುಕೊಡುತ್ತದೆ ನಿಮ್ಮ ಶೈಕ್ಷಣಿಕ ಅವಧಿಯಲ್ಲಿ ವಿದ್ಯೆಯ ಕಡೆಗೆ ಗಮನವನ್ನು ಕೇಂದ್ರೀಕರಿಸಿ ನಿಮ್ಮ ಜೀವನವನ್ನು ಸಂಪದ್ಭರಿತವಾಗಿ ಮಾಡಿಕೊಳ್ಳಿ ಎಂದರು. ವೇದಿಕೆಯಲ್ಲಿ ಕಾಲೇಜಿನ ಶೈಕ್ಷಣಿಕ ಸಲಹೆಗಾರ ಪ್ರೊ. ಎಂ. ಬಾಲಚಂದ್ರ ಗೌಡ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶಿವಪ್ರಸಾದ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀಮತಿ ರತ್ನಾವತಿ ಡಿ, , ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ವಾರ್ಷಿಕ ವರದಿ ವಾಚಿಸಿದರು.
ಕಾಲೇಜು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಪ್ರತೀಕ್ಷಾ ಕೆ ಬಿ ಸಂದೇಶ ವಾಚಿಸಿದರು. ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಯೋಗೀಶ್ ಭಾರದ್ವಾಜ್ ಹಾಗೂ ವಿದ್ಯಾರ್ಥಿ ಸಂಘದ ಜತೆ ಕಾರ್ಯದರ್ಶಿ ಲಾವಣ್ಯ ಜೆ ಡಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.
ಸಮಾರಂಭದಲ್ಲಿ ಕಾಲೇಜಿನ ರಾಂಕ್‌ ವಿಜೇತೆ ಆಶ್ರೀತಾ ಕೆ ಎಂ, ಕ್ರೀಡಾ ಸಾಧಕ ರಾಕೇಶ್ ಗೌಡ, ಎನ್ ಸಿ ಸಿ ಸಾಧಕ ಅಭಿಷೇಕ್ ಎ ಇವರುಗಳನ್ನು ಸನ್ಮಾನಿಸಲಾಯಿತು.
ಕಾಲೇಜಿನ ವಿದ್ಯಾರ್ಥಿಗಳಾದ ರೇಷ್ಮಾ, ರಶ್ಮಿ, ರತ್ನ ಸಿಂಚನ ಜೆ, ನಿರೀಕ್ಷಾ ಜೆ, ಹಾಗೂ ಅನಘಾ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಭರತ್ ಎಂ ಎಲ್ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀ ಶ್ಯಾಮ್ ಎಸ್ ಪ್ರಸಾದ್ ವಂದನಾರ್ಪಣೆಗೈದರು. ವಿದ್ಯಾರ್ಥಿಗಳಾದ ಸುನೋ, ತೃತೀಯ ಬಿ ಎಸ್ಸಿ ಹಾಗೂ ಕುಲದೀಪ್ ಹೆಚ್, ತೃತೀಯ ಬಿ ಕಾಂ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.