ತೊಡಿಕಾನ: ಯುವಕನಿಂದ ಮಹಿಳೆ ಮೇಲೆ ಕತ್ತಿಯೇಟು

0
2060

ಮಹಿಳೆ ಗಂಭೀರ – ತಲೆಮರೆಸಿಕೊಂಡ ಯುವಕ

ತೊಡಿಕಾನ ಗ್ರಾಮದ ಕಲ್ಲಂಬಳ ಎಂಬಲ್ಲಿ ಯುವಕನೋರ್ವ ಮಹಿಳೆಗೆ ಕತ್ತಿಯಿಂದ ಕಡಿದಿದ್ದು , ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಯುವಕ ತಲೆಮರೆಸಿಕೊಂಡಿದ್ದು ಆತನ ಮೇಲೆ ಪ್ರಕರಣ ದಾಖಲಾಗಿದೆ.

ತೊಡಿಕಾನ ಕಲ್ಲಂಬಳದ ಹರಿಣಾಕ್ಷಿ ಎಂಬ ಮಹಿಳೆ ತೊಡಿಕಾನ ಶಾಲೆಯಲ್ಲಿ ಬಿಸಿಯೂಟದ ಸಿಬ್ಬಂದಿಯಾಗಿದ್ದು , ಸೆ. 9 ರಂದು ಸಂಜೆ ಕೆಲಸ ಮನೆಗೆ ಬರುತ್ತಿದ್ದಾಗ ಕಲ್ಲಂಬಳ ಬಸ್ ನಿಲ್ದಾಣದ ಬಳಿ ಕಾದು ಕುಳಿತಿದ್ದ ಸುರೇಂದ್ರ ಎಂಬ ಯುವಕ ಏಕಾಏಕಿ ಕತ್ತಿಯಿಂದ ಕಡಿದನೆನ್ನಲಾಗಿದೆ. ಮಹಿಳೆಯ ಕತ್ತಿನ ಭಾಗಕ್ಕೆ ಕತ್ತಿ ಬೀಸಿದಾಗ ಆಕೆ ಕೈ ಅಡ್ಡಹಿಡಿದಿದ್ದು ಎರಡೂ ಕೈಗಳಿಗೆ ಕತ್ತಿಯೇಟು ಬಿತ್ತೆನ್ನಲಾಗಿದೆ. ಸೊಂಟದ ಭಾಗಕ್ಕೂ ಕತ್ತಿಯಿಂದ ಕಡಿದಿದ್ದು ಮಹಿಳೆ ಗಂಭೀರವಾಗಿ ಗಾಯಗೊಂಡರು. ಮಹಿಳೆಗೆ ಯುವಕ ಸುರೇಂದ್ರ ಕತ್ತಿಯಿಂದ ಕಡಿಯುವ ವೇಳೆ ಮಹಿಳೆ ರಸ್ತೆಯಲ್ಲಿ ಓಡತೊಡಗಿದ್ದು ಆಗ ಎದುರಿನಿಂದ ಸುರೇಂದ್ರನ ತಂದೆ ಕರುಣಾಕರ ಎಂಬವರೂ ಮಹಿಳೆಯ ಮುಂದೆ ಕತ್ತಿ ಹಿಡಿದು ಬಂದರೆನ್ನಲಾಗಿದೆ. ಆಗ ಮಹಿಳೆ ಅಲ್ಲೇ ಪಕ್ಕದ ಮನೆಗೆ ಓಡಿ ಜಗುಲಿಯಲ್ಲಿ ಕುಸಿದು ಬಿದ್ದರು. ಕೂಡಲೇ ಹರಿಣಾಕ್ಷಿಯವರ ಮನೆಯವರು ಹಾಗೂ ಸ್ಥಳೀಯರು ಬಂದು ಹರಿಣಾಕ್ಷಿಯವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು. ಸ್ಥಳೀಯರು ಸ್ಥಳಕ್ಕೆ ಬರುತ್ತಿದ್ದಂತೆ ಯುವಕ ಸುರೇಂದ್ರ ತನ್ನ ಬೈಕ್ ಹತ್ತಿ ಪರಾರಿಯಾಗಿದ್ದಾನೆ. ಯುವಕ ಸುರೇಂದ್ರ ಹಾಗೂ ಆತನ ತಂದೆ ಕರುಣಾಕರರ ಮೇಲೆ ಮಹಿಳೆ ದೂರು ನೀಡಿದ್ದು ಇಬ್ಬರೂ ತಲೆಮರೆಸಿಕೊಂಡಿರುವುದಾಗಿ ತಿಳಿದು ಬಂದಿದೆ. ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಯುವಕ ಹಾಗೂ ಮಹಿಳೆಯ ವಿಚಾರವಾಗಿ ವರ್ಷದ ಹಿಂದೆ ಎರಡೂ ಕಡೆಯವರ ಮಧ್ಯೆ ಹೊಡೆದಾಟ ನಡೆದಿದ್ದು ಅದೇ ವಿಚಾರದಲ್ಲಿ ಈಗ ಘಟನೆ ನಡೆದಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here