ಹೈದಂಗೂರು : ಗ್ಯಾಸ್ ಸಿಲಿಂಡರ್ ಗೆ ಹಿಡಿದ ಬೆಂಕಿ

0

ಬೆಂಕಿ ನಂದಿಸಿ ಅಪಾಯ ತಪ್ಪಿಸಿದ ಅಗ್ನಿಶಾಮಕ ದಳ

 

ಸ್ಟವ್ ಉರಿಸುವ ವೇಳೆ ಗ್ಯಾಸ್ ಹಂಡೆಗೆ ಬೆಂಕಿ ಹಿಡಿದ ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ ಘಟನೆ ಮರ್ಕಂಜದ ಹೈದಂಗೂರುವಿನಿಂದ ವರದಿಯಾಗಿದೆ. 

 

ಹೈದಂಗೂರು ಬಳಿಯ ಈಂದುಗುಂಡಿ ರಾಧಾಕೃಷ್ಣ ನಾಯಕ್ ಎಂಬವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ. 

 

ಮನೆಯವರು ಸಂಜೆ ಸುಮಾರು 6.30ರ ವೇಳೆಗೆ ಚಾಹ ಮಾಡಲೆಂದು ಅಡುಗೆ ಕೋಣೆಗೆ ಹೋದಾಗ ಗ್ಯಾಸ್ ವಾಸನೆ ಬರತೊಡಗಿತೆಂದೂ, ಗ್ಯಾಸ್ ಸ್ಟವ್ ಉರಿಸಲು ಮುಂದಾದಾಗ ಒಂದೊಮ್ಮೆಲೆ ಗ್ಯಾಸ್ ಹಂಡೆಗೆ ಬೆಂಕಿ ಹಿಡಿಯೆತ್ತೆನ್ನಲಾಗಿದೆ. 

ವಿಷಯ ತಿಳಿದು ಅಕ್ಕಪಕ್ಕದವರು, ರೆಂಜಾಳ ಶಾಸ್ತಾವು ಯುವಕ ಮಂಡಲದ ಸದಸ್ಯರು, ಹೈದಂಗೂರು ಪರಿಸರದವರು ಬಂದು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಸುಮಾರು 7.45ರ ವೇಳೆಗೆ ಸುಳ್ಯದ ಅಗ್ನಿಶಾಮಕ ದಳದವರು ಆಗಮಿಸಿ, ಗ್ಯಾಸ್ ಹಂಡೆಯ ರೆಗ್ಯುಲೇಟರ್ ನ್ನು ಆಫ್ ಮಾಡಿ ಬೆಂಕಿ ನಂದಿಸಿ, ಸಾಂಭಾವ್ಯ ಅವಘಡವನ್ನು ತಪ್ಪಿಸಿದರು.

ಅಪಾಯ ತಪ್ಪಿಸಿದ ಯುವಕರು : ಗ್ಯಾಸ್ ಹಂಡೆಗೆ ಬೆಂಕಿ ತಗುಲಿ, ಬಳಿಕ ನಂದಿಸುವ ಪ್ರಯತ್ನ ನಡೆಸಿದರಾದರೂ ಗ್ಯಾಸ್ ಹಂಡೆ ಒಡೆಯಬಹುದೆಂಬ ಭಯದಲ್ಲಿ ಅಲ್ಲಿ ಸೇರಿದವರು ಅಸಹಾಯಕರಾಗಿ ನಿಂತಿದ್ದರು. ಸ್ಥಳಕ್ಕೆ ಬಂದ ರೆಂಜಾಳ ಶಾಸ್ತಾವು ಯುವಕ ಮಂಡಲದ ಸದಸ್ಯರಲ್ಲಿ  ರಾಜೇಶ್ ಬೇರಿಕೆ ಮತ್ತು ಮೋಹನ ರೆಂಜಾಳ ಎಂಬಿಬ್ಬರು ಮನೆಯೊಳಗೆ ಹೋಗಿ ಗ್ಯಾಸ್ ಹಂಡೆಗೆ ಒದ್ದೆ ಬಟ್ಟೆ ಹಾಕಿ, ಇತರೆಡೆಗೆ ಹಬ್ಬುವ ಬೆಂಕಿಯನ್ನು ಕಡಿಮೆ ಮಾಡಿದರಾದರೂ ಸಂಪೂರ್ಣ ಬೆಂಕಿಯನ್ನು ನಂದಿಸಲು ಸಾಧ್ಯವಾಗಿರಲಿಲ್ಲ. ಆ ಸಂದರ್ಭ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿಯನ್ನು ಸಂಪೂರ್ಣ ನಂದಿಸುವ ಕಾರ್ಯ ನಡೆಸಿದರೆಂದು ತಿಳಿದು ಬಂದಿದೆ.