ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

 

ಸಂಸ್ಥೆಯ ಶತಮಾನೋತ್ಸವ ಆಚರಿಸಲು ಸದಸ್ಯರ ಸಲಹೆ – ಸಮಿತಿ ರಚನೆಗೆ ನಿರ್ಧಾರ

ಸಭಾಂಗಣದಲ್ಲಿ ಮಾಂಸಾಹಾರದ ಊಟದ ವ್ಯವಸ್ಥೆಗೆ ನಿರ್ಧಾರ

ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂರನೇ ಮಹಾಸಭೆಯು ಸೆ.15 ರಂದು ಸಂಘದ ಸಭಾಭವನವಾದ ಅಮರ ಸಹಕಾರ ಸೌಧದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸೊಸೆಟಿ ಅಧ್ಯಕ್ಷ ಕೇಶವ ಕರ್ಮಜೆ ವಹಿಸಿದ್ದರು.
ಸೊಸೈಟಿಗೆ ನೂರು ವರ್ಷ ಕಳೆದಿದ್ದು ಶಾಶ್ವತ ಯೋಜನೆಯೊಂದಿಗೆ ಶತಮಾನೋತ್ಸವ ಕಾರ್ಯಕ್ರಮ ಆಚರಿಸಬೇಕೆಂದು ಸದಸ್ಯರಾದ ಎಂ ಜಿ ಸತ್ಯನಾರಾಯಣ, ಆನೆಕಾರ ಗಣಪಯ್ಯ ಮೊದಲಾದವರು ಸಲಹೆ ನೀಡಿದರು.

ಮಹಾ ಸಭೆಯಲ್ಲಿ ಪ್ರಸ್ತಾಪಿಸಿ ಸದಸ್ಯರ ಸಲಹೆಯಂತೆ ಮಾಡುವುದೆಂದು ಯೋಚಿಸಿದ್ದೆವು ಎಂದು ಅಧ್ಯಕ್ಷ ಕೇಶವ ಕರ್ಮಜೆ ಹೇಳಿದರು. ಶತಮಾನೋತ್ಸವವನ್ನು ಆಚರಿಸಲು ಶತಮಾನೋತ್ಸವ ಸಮಿತಿಯನ್ನು ರಚಿಸುವುದಾಗಿ ನಿರ್ದೇಶಕ ರಾಧಾಕೃಷ್ಣ ಬೊಳ್ಳೂರು ಹೇಳಿದರು.

 

ಕುಕ್ಕುಜಡ್ಕ ದಲ್ಲಿರುವ ಚುಕ್ಕಾಣಿ ಸೊಸೈಟಿಯ ಸಭಾಂಗಣದಲ್ಲಿ ಮಾಂಸಾಹಾರದ ಕಾರ್ಯಕ್ರಮಗಳಿಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಭಾಂಗಣದಲ್ಲಿ ಕಾರ್ಯಕ್ರಮ ಕಡಿಮೆಯಾಗಿ ಆದಾಯ ಕಡಿಮೆಯಾಗುತ್ತದೆ. ಇಷ್ಟು ದೊಡ್ಡ ಸಭಾಂಗಣ ನಿರ್ಮಿಸಿ ಕಾರ್ಯಕ್ರಮಗಳಿಲ್ಲದೆ ನಷ್ಟದಲ್ಲಿ ನಡೆಯುವಂತಾದರೆ ಅದು ಸರಿಯಲ್ಲ ಎಂದು ಸದಸ್ಯರುಗಳಾದ ಕೃಷ್ಣಪ್ಪ ಗೌಡ ಕೋಡ್ತುಗುಳಿ, ನಿತಿನ್ ಪಡ್ಪು ಮೊದಲಾದವರು ಸಲಹೆ ನೀಡಿದರು.
ಈ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.
ಚೊಕ್ಕಾಡಿ ಸೊಸೈಟಿಗೆ ಸ್ಥಳದಾನ ಮಾಡಿದವರು ಮಹಾಬಲೇಶ್ವರ ಯ್ಯನವರು ಈ ಸೊಸೈಟಿಯೊಂದಿಗೆ ನಮ್ಮ ಭಾವನೆಗಳಿವೆ ಆದ್ದರಿಂದ ಇಲ್ಲಿ ಮಾಂಸಾಹಾರ ಮಾಡಬಾರದು. ಅಲ್ಲದೆ ಸಭಾಂಗಣವನ್ನು ಸಮರ್ಪಕವಾಗಿ ಶುಚಿಯಾಗಿರಿಸಲು ನಿಮಗೆ ಸಾಧ್ಯವಿಲ್ಲ ಎಂಬುದು ಈಗಾಗಲೇ ಗೊತ್ತಾಗಿದೆ. ಮಾಂಸಾಹಾರದ ತೀರ್ಮಾನ ಮಾಡುವುದಿದ್ದರೆ ನಾನು ಅದಕ್ಕೆ ಲಿಖಿತ ಆಕ್ಷೇಪಣೆ ಸಲ್ಲಿಸುತ್ತೇನೆ. ಎಂದು ಮಾಜಿ ಅಧ್ಯಕ್ಷರಾದ ಎಂ ಜಿ ಸತ್ಯನಾರಾಯಣರು ಹೇಳಿದರು.
ಮಾಂಸಾಹಾರ ಇಲ್ಲಿ ಮಾಡಬಾರದೆಂದು ಹೇಳುವಂತವರ ಪೈಕಿ ಯಾರೂ ಈ 5 ವರ್ಷದಲ್ಲಿ ಈ ಸಭಾಂಗಣದಲ್ಲಿ ಕಾರ್ಯಕ್ರಮ ಮಾಡಿಲ್ಲ. ಮಾಂಸಾಹಾರದ ವ್ಯವಸ್ಥೆ ಇದ್ದರೆ ಇನ್ನಷ್ಟು ಹೆಚ್ಚು ಮಂದಿ ಇಲ್ಲಿ ಕಾರ್ಯಕ್ರಮಗಳನ್ನು ಮಾಡಲು ಮುಂದೆ ಬರುತ್ತಾರೆ ಎಂದು ಅಧ್ಯಕ್ಷ ಕೇಶವ ಕರ್ಮಜೆಯವರು ಅಭಿಪ್ರಾಯಪಟ್ಟರು.
ಮಾಂಸಾಹಾರದ ವ್ಯವಸ್ಥೆ ಮಾಡಿದರೆ ಶುಚಿಯಾಗಿ ಸಭಾಂಗಣವನ್ನು ನಿರ್ವಹಿಸಲು ನಿಮಗೆ ಸಾಧ್ಯವಿದೆಯೇ ? ಸೊಸೈಟಿಗೆ ವ್ಯವಹಾರಕ್ಕೆ ಬರುವ ಹಲವರಿಗೆ ಮುಜುಗರವಾಗದಂತೆ ನೋಡಿಕೊಳ್ಳಬೇಕು. ಆದ್ದರಿಂದ ಮಾಂಸಾಹಾರದ ವ್ಯವಸ್ಥೆ ಅನಿವಾರ್ಯವೇ ಎಂದು ಪರಿಶೀಲಿಸಿಕೊಂಡು ನಿರ್ಧಾರಕ್ಕೆ ಬನ್ನಿ ಎಂದು ಆನೆಕಾರ ಗಣಪಯ್ಯ ಸಲಹೆ ನೀಡಿದರು.

ಮಾಂಸಾಹಾರದ ವ್ಯವಸ್ಥೆ ಸಭಾಂಗಣದಲ್ಲಿ ಬೇಕೆಂದಿಲ್ಲ. ಸಸ್ಯಾಹಾರಕ್ಕೂ ಮಾಂಸಾಹಾರಕ್ಕೂ ಪ್ರತ್ಯೇಕ ಸಭಾಂಗಣ ಇದ್ದರೆ ಇದು ಆಗಬಹುದಿತ್ತು ಎಂದು ಹಿರಿಯರಾದ ನಾಯರ್ಕಲ್ಲು ಪುಟ್ಟಣ್ಣ ಗೌಡರು ಹೇಳಿದರು.
ಹೀಗೆ ಚರ್ಚೆ ನಡೆದಾಗ ಮಾಂಸಾಹಾರದ ವ್ಯವಸ್ಥೆ ಬೇಕೆಂದು ವಾದಿಸುವವರ ಮಾತಿಗೆ ಸಭಾಂಗಣದಲ್ಲಿರುವ ಬಹುತೇಕ ಜನ ಚಪ್ಪಾಳೆ ತಟ್ಟುತ್ತಿರುವುದು ಕಂಡುಬಂತು.

ಮಹಾಸಭೆ ಏನು ಹೇಳುತ್ತದೋ ಅದನ್ನು ನಾವು ಅನುಷ್ಠಾನಕ್ಕೆ ತರುತ್ತೇವೆ ಎಂದು ನಿರ್ದೇಶಕ ರಾಧಾಕೃಷ್ಣ ಬೊಳ್ಳೂರು ಹೇಳಿದರು
ಹಾಗಿದ್ದರೆ ಮಾಂಸಾಹಾರ ಬೇಕೆ ಬೇಡವೆ ಎಂಬ ಬಗ್ಗೆ ಈ ಮಹಾಸಭೆಯಲ್ಲಿ ಓಟಿನ ವ್ಯವಸ್ಥೆ ಮಾಡಿ ಎಂದು ಪದ್ಮನಾಭ ಬೊಳ್ಳೂರು, ನಾರಾಯಣ ಕೋಡ್ತುಗುಳಿ ಮತ್ತಿತರರು ಹೇಳಿದರು.
ವೋಟಿಂಗ್ ವ್ಯವಸ್ಥೆ ಮಾಡಿ ಗ್ರಾಮದ ಜನರನ್ನು ಇಬ್ಭಾಗ ಮಾಡುವ ಕೆಲಸ ನಾವು ಮಾಡುವುದಿಲ್ಲ. ಮಹಾಸಭೆ ಒಮ್ಮತದಿಂದ ಹೇಳಿದ ರೀತಿ ಮಾಡುತ್ತೇವೆ ಎಂದು ರಾಧಾಕೃಷ್ಣ ಬೊಳ್ಳೂರು ಸ್ಪಷ್ಟಪಡಿಸಿದರು. ಮತ್ತೂ ಚರ್ಚೆ ಮುಂದುವರಿದಾಗ, ಕಳೆದ ಮಹಾಸಭೆಯಲ್ಲಿಯೂ ಇದೇ ವಿಚಾರ ಚರ್ಚೆ ನಡೆದಿತ್ತು. ಆ ಬಳಿಕ ಯಾರೂ ಮಾಂಸಾಹಾರಕ್ಕೆ ಅವಕಾಶ ಬೇಕೆಂದು ಕೇಳಿಕೊಂಡು ಬಂದಿರಲಿಲ್ಲ. ಇನ್ನು ಈ ಚರ್ಚೆಯನ್ನು ಮುಂದುವರಿಸುವುದು ಬೇಡ. ಸಭಾಂಗಣದ ಒಳಗೆ ಮಾಂಸಾಹಾರದ ವ್ಯವಸ್ಥೆಯನ್ನು ಮಾಡುವುದಿಲ್ಲ. ಆದರೆ ಮಾಂಸಾಹಾರ ತಯಾರಿಗೆ ಸಭಾಂಗಣದ ಹಿಂಬದಿ ಶೆಡ್ ನಿರ್ಮಿಸಿ ಕೊಡುತ್ತೇವೆ. ಮಾಂಸಾಹಾರದ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ರಾಧಾಕೃಷ್ಣ ಬೊಳ್ಳೂರು ಹೇಳಿದರು.
ಮದ್ಯವರ್ಜನ ಶಿಬಿರಕ್ಕೆ ಸಭಾಂಗಣವನ್ನು ಕೊಟ್ಟಾಗ ಸಭಾಂಗಣದಲ್ಲಿ ಬಾಟಲಿಗಳಿದ್ದ ಬಗ್ಗೆ ನಾರಾಯಣ ಕೋಡ್ತುಗುಳಿ ಗಮನ ಸೆಳೆದರು. ಅಂದಿನ ಕಾರ್ಯಕ್ರಮದ ಕೊನೆಯಲ್ಲಿ ಸೊಸೈಟಿ ಅಧ್ಯಕ್ಷರಿಗೆ ಸರಿಯಾಗಿ ಗೌರವ ಕೊಡದಿರುವ ಬಗ್ಗೆ ಗಣೇಶ್ ಪಿಲಿಕಜೆ ಆಕ್ಷೇಪ ವ್ಯಕ್ತಪಡಿಸಿದರು.
ಪೈಲಾರಿನಲ್ಲಿ ಸೊಸೈಟಿ ಶಾಖೆ ತೆರೆಯಬೇಕೆಂದು ಕೃಷ್ಣಪ್ರಸಾದ್ ಮಾಡಬಾಕಿಲು ಸಲಹೆ ನೀಡಿದರೆ, ದೊಡ್ಡತೋಟ ಸೊಸೈಟಿ ಶಾಖೆಗೆ ಹೋಗಲು ರಸ್ತೆ ಸರಿಯಿಲ್ಲದೆ ರಿಕ್ಷಾಗಳು ಹೋಗುವುದಿಲ್ಲ. ಅದನ್ನು ಸರಿಪಡಿಸಿಕೊಡಬೇಕೆಂದು ಸಂತೋಷ್ ಮಡಪ್ಪಾಡಿ ಸಲಹೆ ನೀಡಿದರು.
ಸೊಸೈಟಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಮೋಹನ್ ಕುಮಾರ್ ಪೊಯ್ಯೆಮಜಲು ವಾರ್ಷಿಕ ವರದಿಯನ್ನು ಮಂಡಿಸಿದರಲ್ಲದೆ, ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಸೊಸೈಟಿಗೆ ಅತಿ ಹೆಚ್ಚು ಅಡಿಕೆ ಮಾರಾಟ ಮಾಡಿದ ಕೃಷಿಕರಾದ ಗೆಜ್ಜೆ ಕುಶಾಲಪ್ಪ ಗೌಡ, ತಿರುಮಲೇಶ್ವರ ಕುಡುಂಬಿಲ ಮತ್ತು ಲತೇಶ್ವರಿ ಮಾಯಿಪಡ್ಕ ರವರನ್ನು ಕಿರು ಕಾಣಿಕೆ ನೀಡಿ ಸತ್ಕರಿಸಲಾಯಿತು. ಸಭೆಗೆ ಬಂದಿದ್ದ ಹತ್ತು ಮಂದಿ ಅದೃಷ್ಟವಂತ ಸದಸ್ಯರನ್ನು ಆರಿಸಿ ಬಹುಮಾನ ನೀಡಲಾಯಿತು.
ಲೆಕ್ಕ ಪರಿಶೋಧಕರಾದ ಸಿಎ ಗಣೇಶ್ ಭಟ್ ಉಪಸ್ಥಿತರಿದ್ದು, ಸದಸ್ಯರ ಅನುಮಾನಗಳನ್ನು ಪರಿಹರಿಸಿದರು.
ಸೊಸೈಟಿ ಉಪಾಧ್ಯಕ್ಷ ಪ್ರವೀಣ್ ಎಸ್. ರಾವ್, ನಿರ್ದೇಶಕರುಗಳಾದ ಅರುಣ್ ನಾಯರ್ ಕಲ್ಲು, ಉಮೇಶ್ ಚಿಲ್ಪಾರು, ನಿರಂಜನ ಕಾನಡ್ಕ, ರಘುರಾಮ, ಎ.ಕೆ.ನಾಯ್ಕ್, ಲತೇಶ್ವರಿ ಎಂ.ಎಸ್., ವೀಣಾ ಎಂ.ಡಿ., ಕುಮಾರ ಬೆಳ್ಚಪ್ಪಾಡ, ಅರುಣ್ ಕುಮಾರ್ ಪರ್ಮಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷ ಕೇಶವ ಕರ್ಮಜೆ ಸ್ವಾಗತಿಸಿ, ನಿರ್ದೇಶಕ ರಾಘವೇಂದ್ರ ಪಿ. ಕೆ. ವಂದಿಸಿದರು.