ಸುಳ್ಯ : 110 ವಿದ್ಯುತ್ ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆರಂಭ

0

 

 

ಸುಳ್ಯದ ಬಹು ನಿರೀಕ್ಷಿತ 110 ಕೆ.ವಿ. ವಿದ್ಯುತ್ ಸಬ್ ಸ್ಟೇಷನ್ ಹಾಗು 110 ಕೆ.ವಿ.ವಿದ್ಯುತ್ ಲೈನ್ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಪತ್ರಿಕೆಗಳಲ್ಲಿ ಟೆಂಡರ್ ಕರೆಯಲಾಗಿದೆ. 110 ಕೆವಿ ವಿದ್ಯುತ್ ಸಬ್ ಸ್ಟೇಷನ್ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಆರಂಭ ಆಗಿರುವ ಬಗ್ಗೆ ಸಚಿವ ಎಸ್.ಅಂಗಾರ ದೃಢೀಕರಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸುಳ್ಯದಲ್ಲಿ 33 / 11 ಕೆ.ವಿ . ವಿದ್ಯುತ್ ಉಪಕೇಂದ್ರವನ್ನು 110 / 11 ಕೆವಿ ವಿದ್ಯುತ್ ಉಪಕೇಂದ್ರವನ್ನಾಗಿ ಉನ್ನತೀಕರಿಸುವುದು ಹಾಗು ಸಂಬಂಧಿತ ಪ್ರಸರಣ ಮಾರ್ಗದೊಂದಿಗೆ ನಿರ್ಮಿಸುವುದಕ್ಕಾಗಿ ಟೆಂಡರ್ ಕರೆಯಲಾಗಿದೆ. ಬಿಡ್ ಸಲ್ಲಿಕೆಗೆ ಅ.28 ಕೊನೆಯ ದಿನವಾಗಿರುತ್ತದೆ. ಕಳೆದ 20 ವರ್ಷಗಳಿಂದ ಸುಳ್ಯಕ್ಕೆ 110 ಕೆವಿ ವಿದ್ಯುತ್ ಸಬ್ ಸ್ಟೇಷನ್ ನಿರ್ಮಾಣ‌ ಮಾಡಬೇಕು ಎಂಬ ಬೇಡಿಕೆ ಇದೆ. ಒಂದೂವರೆ ದಶಕಗಳ ಹಿಂದೆ‌110 ಕೆ.ವಿ ಸಬ್ ಸ್ಟೇಷನ್ ಮಂಜೂರಾಗಿದ್ದರೂ ನೆನೆಗುದಿಗೆ ಬಿದ್ದಿತ್ತು. ಇದೀಗ ಸುಳ್ಯ ಶಾಸಕ ಅಂಗಾರ ಸಚಿವರಾದ ಬಳಿಕ ಹಾಗು ವಿ.ಸುನಿಲ್ ಕುಮಾರ್‌ ಇಂಧನ ಸಚಿವರಾಗಿ ಅಧಿಕಾರ ವಹಿಸಿ ಬಳಿಕ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ 110 ಕೆವಿ ಸಬ್‌ಸ್ಟೇಷನ್ ನಿರ್ಮಾಣ ಪ್ರಕ್ರಿಯೆಗೆ ವೇಗ ಸಿಕ್ಕಿತ್ತು. ಇದೀಗ ಟೆಂಡರ್ ಪ್ರಕ್ರಿಯೆ ಆರಂಭವಾಗಿರುವುದರಿಂದ ಸುಳ್ಯ ಕ್ಷೇತ್ರ ಕ್ಕೆ 110 ಕೆ.ವಿ. ಸಬ್ ಸ್ಟೇಷನ್ ಆದಷ್ಟು ಶೀಘ್ರ ಆಗಬಹುದೆಂದು ನಿರೀಕ್ಷಿಸಲಾಗಿದೆ.