ಮಿನುಂಗೂರು : ದೇವಿಯ ಆಲಯ ಪುನರ್ ನಿರ್ಮಾಣಕ್ಕೆ ಭಕ್ತಾಧಿಗಳ ಸಭೆ – ಜೀರ್ಣೋದ್ಧಾರ ಸಮಿತಿ ರಚನೆ

0

 

 

ಅಧ್ಯಕ್ಷರಾಗಿ ಹರೀಶ್ ಕಂಜಿಪಿಲಿ ಆಯ್ಕೆ

ಮರ್ಕಂಜ ಹಾಗೂ ನೆಲ್ಲೂರು ಕೆಮ್ರಾಜೆ ಗ್ರಾಮಗಳನ್ನೊಳಗೊಂಡ ಪಂಚಸ್ಥಾಪನೆಗಳಿಗೆ ಒಳಪಟ್ಟ ಪುರಾಣ ಪ್ರಸಿದ್ಧ ಕಾರಣಿಕ ಕ್ಷೇತ್ರ ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರದ ಕುರಿತು ಭಕ್ತಾಧಿಗಳ ಸಭೆಯು ಪಂಚಸ್ಥಾಪನೆಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವ ಕಂಜಿಪಿಲಿಯವರ ಅಧ್ಯಕ್ಷತೆಯಲ್ಲಿ ದೇವಾಲದ ವಠಾರದಲ್ಲಿ ನಡೆಯಿತು.

ಪ್ರಾಸ್ತಾವಿಕ ವಾಗಿ ಮಾತನಾಡಿದ ಮಿನುಂಗೂರು ದೇವಸ್ಥಾನದ ಗೌರವಾಧ್ಯಕ್ಷ ಅಮೃತ ಕುಮಾರ್ ರೈ ಸೇವಾಜೆಯವರು ಮಾತನಾಡಿ ದೈವಜ್ಞರ ಸೂಚನೆಯಂತೆ ಕ್ಷೇತ್ರದ ತಂತ್ರಿಗಳಾದ ಪದ್ಮನಾಭ ತಂತ್ರಿಗಳ ನಿರ್ದೇಶನದಂತೆ ಕ್ಷೇತ್ರದಲ್ಲಿ ಪಯ್ಯನ್ನೂರು ಸಿ.ವಿ.ಪೊದುವಾಳ್ ರವರು ಪ್ರಶ್ನಾ ಚಿಂತನೆ ನಡೆಸಿದ್ದರು. ಈ ಸಂದರ್ಭ ದೇವಸ್ಥಾನ ಜೀರ್ಣೋದ್ಧಾರ ಗೊಳ್ಳುವ ಸಂಕಲ್ಪ ಮಾಡಿಕೊಳ್ಳಲಾಯಿತು. ಮತ್ತು ಹಲವು ವರ್ಷಗಳಿಂದ ಇದ್ದ ಜಾಗದ ವಿವಾದಗಳು ಇತ್ಯಾರ್ಥ ಕಂಡವು. ಅಲ್ಲದೇ ಕೆಲವೊಂದು ಸಮಸ್ಯೆಗಳು ಕಂಡು ಬಂದ ಕಾರಣ ಆಡಳಿತ ಮಂಡಳಿಯವರು ದೇವಸ್ಥಾನ ದ ಇತರ ಸಮಿತಿಗಳು ಜತೆಯಾಗಿ ಪರಿಹಾರ ಕಾರ್ಯಗಳನ್ನು ಮಾಡಲಾಗಿದೆ. ಕ್ಷೇತ್ರದ ಎಲ್ಲಾ ಭಕ್ತಾಧಿಗಳು ಒಟ್ಟಾಗಿ ಸೇರಿ ದೇವಿಯ ದೇವಸ್ಥಾನ ಜೀರ್ಣೋದ್ಧಾರ ದಲ್ಲಿ ಪಾಲ್ಗೊಳ್ಳಬೇಕಿದೆ ಎಂದರು.
ಬಳಿಕ ಭಕ್ತಾಧಿಗಳ ಸಲಹೆಯಂತೆ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಯಿತು.
ವೇದಿಕೆಯಲ್ಲಿ ಮಿನುಂಗೂರು ದೇವಸ್ಥಾನ ದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕಮಾಲಕ್ಷ ಪುರ, ಗೌರವಾಧ್ಯಕ್ಷರುಗಳಾದ ಬೋಜಪ್ಪ ಕೊಚ್ಚಿ, ರುಕ್ಮಯ್ಯ ಗೌಡ ಮಿತ್ತಪೇರಾಲು, ಮರ್ಕಂಜ ಗ್ರಾ.ಪಂ. ಅಧ್ಯಕ್ಷೆ ಪವಿತ್ರ ಗುಂಡಿ, ಅನ್ನಪೂರ್ಣ ಸಮಿತಿಯ ಅಧ್ಯಕ್ಷ ದಯಾನಂದ ಪುರ, ಭಜನಾ ಮಂಡಳಿ ಅಧ್ಯಕ್ಷ ಮಹೇಶ್ ಪುರ, ಧಾರ್ಮಿಕ ಮುಖಂಡ ಹರೀಶ್ ಕಂಜಿಪಿಲಿ ಉಪಸ್ಥಿತರಿದ್ದರು.
ಗ್ರಾ.ಪಂ. ಸದಸ್ಯ ಹಾಗೂ ಭಜನಾ ಮಂಡಳಿ ಉಪಾಧ್ಯಕ್ಷ ಗೋವಿಂದ ಅಳವುಪಾರೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಪುರ ವಂದಿಸಿದರು.