ಕಾಂಞಗಾಡ್ – ಕಾಣಿಯೂರು ರೈಲ್ವೇ ಮಾರ್ಗ : ರಾಜ್ಯ ಸರಕಾರದಿಂದ ತಿರಸ್ಕಾರ

0

 

ಅನೇಕ ವರ್ಷಗಳಿಂದ ನಿರೀಕ್ಷಿಸಲಾಗಿದ್ದ ಕಾಂಞಗಾಡ್ – ಕಾಣಿಯೂರು ರೈಲ್ವೇ ಮಾರ್ಗ ಪ್ರಸ್ತಾಪವನ್ನು ರಾಜ್ಯ ಸರಕಾರ ತಿರಸ್ಕರಿಸಿದೆ. ಇಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರೊಂದಿಗೆ ಬೆಂಗಳೂರಿನಲ್ಲಿ ಚರ್ಚೆ ನಡೆಸಿದ ಬಳಿಕ ಬೊಮ್ಮಾಯಿಯವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ.


ಅನೇಕ ವರ್ಷಗಳ ಹಿಂದೆಯೇ ೨ ರಾಜ್ಯಗಳನ್ನು ಹಾಗೂ ಈ ರಾಜ್ಯಗಳ ಪುಣ್ಯಕ್ಷೇತ್ರಗಳನ್ನು ಸಂಪರ್ಕಿಸುವ ದೃಷ್ಟಿಯಿಂದ ಈ ಪ್ರಸ್ತಾವನೆ ಚಾಲನೆಗೆ ಬಂದಿತ್ತು. ರೈಲ್ವೇ ಬಜೆಟ್‌ನಲ್ಲಿ ಇದರ ಸರ್ವೆಗೆ ಹಣವನ್ನೂ ಇರಿಸಲಾಗಿತ್ತು. ಕೇರಳ ಸರಕಾರ ರೈಲ್ವೇ ಮಾರ್ಗದ ಅನುಷ್ಠಾನಕ್ಕೆ ಹೆಚ್ಚಿ ಉತ್ಸುಕತೆ ತೋರಿದ್ದು, ಪಾಣತ್ತೂರುವರೆಗೆ ಸರ್ವೆ ಕಾರ್ಯ ಪೂರ್ತಿಗೊಳಿಸಿತ್ತು. ಈ ಯೋಜನೆ ನೆನೆಗುದಿಗೆ ಬೀಳುವ ಹಂತದಲ್ಲಿದ್ದಾಗ ಇಲ್ಲಿನ ಕೆಲ ಮುಖಂಡರು ಕ್ರಿಯಾಸಮಿತಿಯನ್ನು ರಚಿಸಿಕೊಂಡು ಕಾಂಞಗಾಡ್ ಭಾಗದ ಜನಪ್ರತಿನಿಧಿಗಳೊಂದಿಗೆ ಕೇಂದ್ರ ಸಚಿವರನ್ನು, ರಾಜ್ಯ ಸಚಿವರನ್ನು ಭೇಟಿ ಮಾಡಿದ್ದರು. ಆಗೆಲ್ಲಾ ಭರವಸೆಗಳು ದೊರೆತಿತ್ತು. ಈ ಭಾಗದ ಜನಪ್ರತಿನಿಧಿಗಳು ಕೂಡಾ ರೈಲ್ವೇ ಮಾರ್ಗದ ಅನುಷ್ಠಾನದ ಭರವಸೆಯ ಮಾತುಗಳನ್ನಾಡಿದ್ದರು.
ಈ ಮಧ್ಯೆ ಈ ಮಾರ್ಗವನ್ನು ರೈಲ್ವೇ ಇಲಾಖೆಯು ತಿರಸ್ಕರಿಸಿದ್ದು, ಎರಡೂ ರಾಜ್ಯಗಳು ಒಪ್ಪಿಗೆ ನೀಡಿದರೆ ಪರಿಶೀಲನೆ ನಡೆಸಬಹುದು ಎಂದು ತಿಳಿಸಿತ್ತು. ಈ ಹಿನ್ನಲೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರ್ನಾಟಕ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಿದ್ದರು. ಈ ವಿಚಾರವೂ ಸೇರಿದಂತೆ ಪ್ರಮುಖ ೩ ವಿಚಾರಗಳನ್ನು ಮುಂದಿಟ್ಟು ಪಿಣರಾಯಿ ವಿಜಯನ್ ಬೆಂಗಳೂರಿಗೆ ಆಗಮಿಸಿ ಬೊಮ್ಮಾಯಿಯವರೊಂದಿಗೆ ಚರ್ಚೆ ನಡೆಸಿದರು. ಎರಡು ಸರಕಾರಗಳ ಉನ್ನತ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿಯವರು ಕಾಂಞಗಾಡ್ ಕೇರಳದಲ್ಲಿದ್ದು, ಕಾಣಿಯೂರು ಕರ್ನಾಟಕದಲ್ಲಿದೆ. ಒಟ್ಟು ರೈಲ್ವೇ ಮಾರ್ಗದಲ್ಲಿ ೪೫ ಕಿ.ಮೀ ಕೇರಳದಲ್ಲಿ ಹಾಗೂ ೩೫ ಕಿ.ಮೀ. ಕರ್ನಾಟಕದಲ್ಲಿ ಹಾದುಹೋಗುತ್ತದೆ. ಈಗಾಗಲೇ ಈ ಮಾರ್ಗವನ್ನು ರೈಲ್ವೇ ಇಲಾಖೆ ತಿರಸ್ಕರಿಸಿದ್ದು, ಎರಡೂ ರಾಜ್ಯಗಳು ಒಪ್ಪಿಗೆ ನೀಡಿದರೆ ಪರಿಶೀಲನೆ ನಡೆಸಬಹುದು ಎಂದು ತಿಳಿಸಿದೆ. ಇದಕ್ಕಾಗಿ ಕೇರಳ ಮುಖ್ಯಮಂತ್ರಿಯವರು ನಮ್ಮ ಜೊತೆಗೆ ಮಾತುತೆಗೆ ಬಂದಿದ್ದರು. ಮೊದಲನೆಯದಾಗಿ ಈ ಯೋಜನೆಯಿಂದ ಕರ್ನಾಟಕದ ಕನರಿಗೆ ಪ್ರಯೋಜನ ಆಗುವುದಿಲ್ಲ. ಎರಡನೆಯದಾಗಿ ಈ ಮಾರ್ಗವು ಸುಳ್ಯ, ಸುಬ್ರಹ್ಮಣ್ಯದಂತಹ ಪರಿಸರ ಪರಿಸರ ಸೂಕ್ಮ ಪ್ರದೇಶಗಳಲ್ಲಿ ಹಾದು ಹೋಗುತ್ತದೆ. ಕರ್ನಾಟಕಕ್ಕೆ ಆಗುವ ಲಾಭದ ಜೊತೆಗೆ ಪರಿಸರ ವಿಚಾರವನ್ನೂ ಗಣನೆಗೆ ತೆಗೆದುಕೊಂಡು ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದೇವೆ ಎಂದು ಹೇಳಿದರು.