ದಿ| ಕೋಡಿ ಕುಶಾಲಪ್ಪ ಗೌಡರ ಉತ್ತರ ಕ್ರಿಯಾ ಕಾರ್ಯಕ್ರಮ

0

ಕೋಡಿಯವರ ಹಿರಿಮೆಯನ್ನು ಉಳಿಸಿಕೊಳ್ಳೋಣ : ಡಾ|ಬಿ.ಎ. ವಿವೇಕ್ ರೈ

`’ಪ್ರತಿಷ್ಠಿತ ಮದ್ರಾಸು ವಿವಿಗಳ ಘನತೆಯನ್ನು ಎತ್ತಿ ಹಿಡಿದವರು ಕೋಡಿ ಕುಶಾಲಪ್ಪ ಗೌಡರು. ಅಲ್ಲಿ ಕನ್ನಡವನ್ನು ಸ್ಥಾಪಿಸಿ, ಭಾಷಾ ವಿಜ್ಞಾನದ ಮೂಲಕ ಜಗತ್ತಿಗೆ ಪಸರಿಸಿದವರು ಕೋಡಿಯವರು. ಅವರ ಹಿರಿಮೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅವರ ಗ್ರಂಥಗಳನ್ನು ಇಂಗ್ಲೀಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಿ ಸಮಾಜಕ್ಕೆ ನೀಡೋಣ” ಎಂದು ವಿಶ್ರಾಂತ ಕುಲಪತಿ ಡಾ| ಬಿ.ಎ. ವಿವೇಕ್ ರೈ ಹೇಳಿದರು.

ಸುಳ್ಯದ ಕೇರ್ಪಳ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಸೆ.೧೭ರಂದು ಜರುಗಿದ ಖ್ಯಾತ ಸಾಹಿತಿ, ಭಾಷಾ ತಜ್ಞ ದಿ| ಪ್ರೊ. ಕೋಡಿ ಕುಶಾಲಪ್ಪ ಗೌಡರ ಉತ್ತರ ಕ್ರಿಯಾ ಸದ್ಗತಿ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


 ಶಿಸ್ತು ಮತ್ತು ಶೈಕ್ಷಣಿಕ ವಿಷಯದಲ್ಲಿ ಎಂದೂ ರಾಜಿ ಮಾಡಿಕೊಳ್ಳದ ವ್ಯಕ್ತಿ ಕುಶಾಲಪ್ಪ ಗೌಡರು. ಹೊಸ ಹೊಸ ಚಿಂತನೆಗಳನ್ನು ಸಮಾಜಕ್ಕೆ ನೀಡಿದ ಮಾನವೀಯ ವ್ಯಕ್ತಿ. ಅವರ ವಿದ್ವತ್‌ಗೆ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದವು. ಪಂಪ ಪ್ರಶಸ್ತಿ ಪಡೆಯಲು ಅರ್ಹರಾಗಿದ್ದವರು. ನಾನೂ ಕೂಡಾ ಅವರಿಂದ ಬೌತಿಕ ಚಿಂತನೆಗಳ ಮತ್ತು ಭಾವನಾತ್ಮಕ ವಿಚಾರಗಳನ್ನು ಕಲಿತಿದ್ದೇನೆ ಎಂದು ಅವರು ಹೇಳಿಕೊಂಡರು.


 ಶಿಕ್ಷಣ ಸಿದ್ಧಾಂತಿ ಡಾ| ಎನ್.ಸುಕುಮಾರ ಗೌಡರು ಮಾತನಾಡಿ ಬಾಹ್ಯ ರೂಪದಲ್ಲಿ ಉಪನ್ಯಾಸಕ ಹೇಗಿರಬೇಕೆಂದು ತೋರಿಸಿಕೊಟ್ಟವರು ಕೋಡಿ ಕುಶಾಲಪ್ಪ ಗೌಡರು. ಅವರ ವ್ಯಕ್ತಿತ್ವ  ನಾವು ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು. ಲೋಕನಾಥ ಅಮೆಚೂರು, ಸಂಜೀವ ಕುದ್ಪಾಜೆ, ಡಾ. ಹರಿಕೃಷ್ಣ  ಭರಣ್ಯ, ಭಾಷಾ ವಿಜ್ಞಾನಿ ಡಾ.ಚೆ. ರಾಮಸ್ವಾಮಿ, ಪ್ರೊ. ಕೋಡಿಯವರೊಂದಿಗಿನ ಒಡನಾಟದ ನೆನಪುಗಳನ್ನು ಹಂಚಿಕೊಂಡರು.  ಕೋಡಿ ಕುಶಾಲಪ್ಪ ಗೌಡರ ಪುತ್ರಿ ಶ್ರೀಮತಿ ಮಾಲಿನಿ ತಂದೆಯ ವ್ಯಕ್ತಿತ್ವ,  ಮೊಮ್ಮಗಳು ಡಾ| ಅರ್ಚನಾ ಎನ್.ಆರ್. ತಾತನ ಬಗೆಗೆಗಿನ ಆದರ್ಶಗಳನ್ನು ಸಭೆಯಲ್ಲಿ ವಿವರಿಸಿದರು.


ಕುಟುಂಬದ ಹಿರಿಯರಾದ ಚಿನ್ನಪ್ಪ ಗೌಡರು, ಮೊಮ್ಮಗಳು ರಚನಾ ಎನ್.ಆರ್., ಮೊಮ್ಮಗ ವಿಕ್ರಂಚಂದ್ರ ಎನ್.ಆರ್.  ವೇದಿಕೆಯಲ್ಲಿದ್ದರು. ಅಳಿಯ ಎನ್.ಜಿ. ರಾಮಚಂದ್ರ ವಂದಿಸಿದರು. ಸಾಹಿತಿ ಕೆ.ಆರ್. ವಿದ್ಯಾಧರ್ ಕಾರ್ಯಕ್ರಮ ನಿರೂಪಿಸಿದರು.