ಕೊರಗಜ್ಜನಿಗೆ ಪ್ರಾರ್ಥಿಸಿ ಇರಿಸಿದ್ದ ವೀಳ್ಯದೆಲೆಯಲ್ಲಿ ಬೇರು!

0

ಕೊರಗಜ್ಜನಿಗೆ ಪ್ರಾರ್ಥಿಸಿ ಇರಿಸಿದ್ದ ಎರಡು ವೀಳ್ಯದೆಲೆಗಳು ಎರಡು ತಿಂಗಳಾದರೂ ಬಾಡದೆ ಅವುಗಳಲ್ಲಿ ಬೇರು ಮೂಡಿದ ಘಟನೆಯೊಂದು ಗುತ್ತಿಗಾರು ಸಮೀಪದ ಮೊಗ್ರ ಮಾತ್ರಮಜಲು ಎಂಬಲ್ಲಿ ಸಂಭವಿಸಿದೆ.

ಮಾತ್ರಮಜಲಿನ ಶೀನಪ್ಪ ಎಂಬವರ ಮನೆ ಎದುರು ಸುಮಾರು ಮೂರು ದಶಕದಿಂದ ಕೊರಗಜ್ಜನ ಸಾನಿಧ್ಯವಿದೆ. ಇಲ್ಲಿ ಸಂಕ್ರಮಣ ಪೂಜೆ ಮತ್ತು ತಂಬಿಲ ಸೇವೆ ನಡೆಯುತ್ತಿದ್ದು, ಪರಿಸರದವರು ಆಗಮಿಸುತ್ತಾರೆ.

ಎರಡು ತಿಂಗಳ ಹಿಂದೆ ಇಲ್ಲಿಗೆ ಸಮೀಪದ ಮನೆಯೊಬ್ಬರ ಬೆಳ್ಳಾರೆಯಲ್ಲಿರುವ ಬಂಧುವೊಬ್ಬರಿಗೆ ಅಸೌಖ್ಯ ಉಂಟಾಗಿದ್ದು, ಆ ಸಂದರ್ಭ ಅಲ್ಲಿನವರು ಕೊರಗಜ್ಜನನ್ನು ಪ್ರಾರ್ಥಿಸಿ ವೀಳ್ಯದೆಲೆ ಇರಿಸಿದ್ದರು. ಬಳಿಕ ಹುಷಾರಾಗಿ ಮಾತ್ರಮಜಲಿಗೆ ಬಂದು ಪ್ರಾರ್ಥನೆಯನ್ನೂ ಸಲ್ಲಿಸಿದ್ದರು.


ಆದರೆ ಮನೆಯ ಮುಂದಿನ ತುಳಸಿಕಟ್ಟೆಯಲ್ಲಿ ಇರಿಸಿದ್ದ ವೀಳ್ಯದೆಲೆ ಬಾಡದೆ ಹಾಗೆಯೇ ಹಸಿರಾಗಿತ್ತು. ಮಾತ್ರವಲ್ಲದೆ ಇತ್ತೀಚೆಗೆ ಅದರಲ್ಲಿ ಬೇರುಗಳು ಮೂಡಿತ್ತು. ಇದನ್ನು ಕಂಡ ಮನೆಯವರು ಆಶ್ಚರ್ಯದಿಂದ ಜ್ಯೋತಿಷ್ಯರಲ್ಲಿ ಹೋದಾಗ ಈ ವೀಳ್ಯವನ್ನು ಮಾತ್ರಮಜಲಿನಲ್ಲೇ ನೆಡುವಂತೆ ಸಲಹೆ ನೀಡಿದರು. ಅದರಂತೆ ಮನೆಯವರು ಅದನ್ನು ಶೀನಪ್ಪರವರ ಮನೆಗೆ ತಂದಿರಿಸಿದರು. ಅವರು ಅದನ್ನು ಕೊರಗಜ್ಜನ ಸಾನಿಧ್ಯದ ಬಳಿಯಲ್ಲಿಯೇ ಸಣ್ಣ ಕುಂಡವೊಂದರಲ್ಲಿ ಮಣ್ಣು ತುಂಬಿಸಿ ಅದರಲ್ಲಿ ನೆಟ್ಟಿದ್ದಾರೆ. ಈ ದೃಶ್ಯ ಆಶ್ಚರ್ಯವನ್ನುಂಟುಮಾಡಿದ್ದು, ಕೊರಗಜ್ಜನ ಪವಾಡ ಎಂದೇ ನಂಬಲಾಗಿದೆ.

LEAVE A REPLY

Please enter your comment!
Please enter your name here