ಟಪ್ಪಾಲುಕಟ್ಟೆ – ದೇವರಕಾನ – ಗೋಳ್ತಿಲ ಸಂಚಾರಕ್ಕೆ ತೊಡಕಾಗಿರುವ ರಸ್ತೆಯ ದುರಸ್ಥಿ ಎಂದು ?

0

 

 

 

ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ – ರಸ್ತೆ ದುರಸ್ಥಿಗೆ ಆಗ್ರಹ

ಬಾಳಿಲ ಗ್ರಾಮದ ಟಪ್ಪಾಲುಕಟ್ಟೆ ಪೂದೆ ದೇವರಕಾನ ಮುರುಳ್ಯ ಗೋಳ್ತಿಲ ಸಂಪರ್ಕಿಸುವ ರಸ್ತೆ ತೀರಾ ಹದಗೆಟ್ಟಿದ್ದು ವಾಹನಸಂಚಾರಕ್ಜೆ ತೊಂದರೆಯಾಗಿದೆ ಇದನ್ನು ಕೂಡಲೇ ದುರಸ್ಥಿಪಡಿಸಬೇಕೆಂದು ಗ್ರಾಮಸ್ಥರು ಸೆ.25 ರಂದು ಪ್ರತಿಭಟನೆ ನಡೆಸಿದರು.

ದೇವರಕಾನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಡಾ.ರಾಮಚಂದ್ರ ಭಟ್ ಮಾತನಾಡಿ ಹಲವು ವರ್ಷಗಳ ಹಿಂದೆ ಡಾಮರೀಕರಣವಾದ ರಸ್ತೆಯಲ್ಲಿ ಜಲ್ಲಿ ಡಾಮರು ಎದ್ದು ಹೋಗಿ ಈಗ ವಾಹನ ಸಂಚಾರಕ್ಕೆ ತೊಂದರೆಯಾಗಿದೆ ನಡೆದಾಡಲು ಕೂಡ ಆಗುವುದಿಲ್ಲ.
ಕೆಲವು ವರ್ಷಗಳಿಂದ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಿಯಾಗಿದೆ.ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
ಈ ರಸ್ತೆ ಸುಮಾರು 5 ಕಿ
ಮೀ.ಇದ್ದು ಸಂಪೂರ್ಣ ಹಾಳಾಗಿದೆ ಎಂದು ಹೇಳಿದರು.

ಅವಳಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯ ಕಾಮಗಾರಿ ಕೂಡ ಭರದಿಂದ ಸಾಗುತ್ತಿದ್ದು ರಸ್ತೆ ಸರಿ ಇಲ್ಲದೆ ದೇವಸ್ಥಾನಕ್ಕೆ ಜಲ್ಲಿ ಹೊಯಿಗೆ ಇನ್ನಿತರ ಸಾಮಾಗ್ರಿಗಳನ್ನು ಸಾಗಿಸಲು ಕೂಡ ತೊಂದರೆಯಾಗುತ್ತಿದೆ ಎಂದು ಪೂದೆ ದೇವಸ್ಥಾನದ ಅಧ್ಯಕ್ಷ ಪದ್ಮನಾಭ ಪೂದೆ ಹೇಳಿದರು.
ಸ್ಥಳೀಯ ನಿವಾಸಿ ಗೋಪಾಲ ವಿಠಲಶಾಸ್ತ್ರಿ, ಪೂದೆ ವಸಂತ ಗೌಡ,ತೇಜಸ್ವಿನಿ ಪೂದೆ,ಕಾಲನಿ ನಿವಾಸಿ ಸೀತಮ್ಮ ರವರು ಮಾತನಾಡಿ ಈ ರಸ್ತೆ ಹೊಂಡ ಗುಂಡಿಗಳಿಂದ ಕೂಡಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಈ ರಸ್ತೆ ಬಾಳಿಲ ಮತ್ತು ಮುರುಳ್ಯ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿದ್ದು ಎರಡು ಪಂಚಾಯತ್ ನವರು ಸೇರಿ ನಮ್ಮ ರಸ್ತೆಯನ್ನು ಸರಿಪಡಿಸಬೇಕು.
ಶಾಲಾ ಮಕ್ಕಳಿಗೆ ನಡೆದುಕೊಂಡು ಹೋಗಲು ಕೂಡ ಆಗುವುದಿಲ್ಲ.
ಅಸೌಖ್ಯಕ್ಕೊಳಗಾದರೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ರಿಕ್ಷಾ ಹಾಗೂ ಇತರ ಯಾವುದೇ ವಾಹನದವರೂ ಕೂಡ ಬಾಡಿಗೆಗೆ ಬರುವುದಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ನೂರಾರು ಜನ ನಾಗರಿಕರು ಸೇರಿದ್ದು ಕೂಡಲೇ ರಸ್ತೆ ದುರಸ್ಥಿಪಡಿಸದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲಾಗುವುದು ಎಂದು ಹೇಳಿದರು.