ಪೆರುವಾಜೆ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ

0

ಧಾರ್ಮಿಕ ಕೇಂದ್ರಗಳಲ್ಲಿ ನಿರಂತರ ಕಾರ್ಯಕ್ರಮ ನಡೆಯಬೇಕು – ಸಚಿವ ಎಸ್.ಅಂಗಾರ

ಜನರಲ್ಲಿ ಧರ್ಮಪ್ರಜ್ಞೆ ಬೆಳಗಬೇಕು – ಅನಂತ ಪದ್ಮನಾಭ ಅಸ್ರಣ್ಣ

ಭಾರತವು ಧರ್ಮ, ಕರ್ಮ, ಪುಣ್ಯ ಭೂಮಿ. ಧರ್ಮ ಸಂಸ್ಕೃತಿಯಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು.
ಧಾರ್ಮಿಕ‌ ಕೇಂದ್ರಗಳಲ್ಲಿ ನಿರಂತರ ಧಾರ್ಮಿಕ‌ ಚಟುವಟಿಕೆಗಳು ನಡೆಯುತ್ತಿರಬೇಕು .

ಆಗ ಜನರು ಹೆಚ್ಚು ಕ್ರಿಯಾಶೀಲರಾಗುತ್ತಾರೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು.

ಅವರು ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ನವರಾತ್ರಿ ಉತ್ಸವದ ಪ್ರಯುಕ್ತ ಸೆ.25 ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಧರ್ಮದ ಹಾದಿಯಲ್ಲಿ ಸಾಗಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ಭಕ್ತಿ ಮಾರ್ಗ ಶ್ರೇಷ್ಟ ಮಾರ್ಗ ಎಂದ ಅವರು ಅಂತಹ ಮನಸ್ಥಿತಿಗೆ ಆಲಯಗಳು ಪ್ರೇರಕ ಶಕ್ತಿ ಎಂದು ಹೇಳಿದರು.

 

*ದೀಪ ಪ್ರಜ್ವಲನೆಗೈದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಅನುವಂಶಿಕ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಮಾತನಾಡಿ*, ಧರ್ಮವನ್ನು ರಕ್ಷಣೆ ಮಾಡಿದವರನ್ನು ಧರ್ಮ ರಕ್ಷಣೆ ಮಾಡುತ್ತದೆ. ಹಾಗಾಗಿ ಧರ್ಮ ಕಾರ್ಯ ನಿರಂತರವಾಗಿ ನಡೆದು ಧರ್ಮ ಮಾರ್ಗ ಜೀವನದ ಕೊಂಡಿಯಾಗಬೇಕು, ಉತ್ತಮ ಗುಣಗಳಿಂದ ಜನರಲ್ಲಿ‌ ಧರ್ಮಪ್ರಜ್ಞೆ ಬೆಳಗಬೇಕು.ಹೆಚ್ಚು ಹೆಚ್ಚು ಸಾಧನೆಗಳನ್ನು ಮಾಡಬೇಕು.ಸಾಧನಾಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಬಳಿಕ ಅವರು ಪೆರುವಾಜೆ ದೇವಸ್ಥಾನದ ಸ್ವಚ್ಚತೆಯ ಬಗ್ಗೆ ಶ್ಲಾಘಿಸಿದರು.

*ಸಭಾ ಅಧ್ಯಕ್ಷತೆ ವಹಿಸಿದ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ಮಾತನಾಡಿ,* ಪ್ರತಿ ಮನೆಯಲ್ಲಿಯು ಭಜನೆ ಮಾಡಬೇಕು. ತನ್ಮೂಲಕ ಸಂಘಟಿತ ಸಮಾಜದ ನಿರ್ಮಾಣ ಮನೆಯಿಂದ ಆರಂಭವಾಗಬೇಕು‌ ಎಂದ ಅವರು ಕ್ಷೇತ್ರದ ಸರ್ವತೋಮುಖ ಬೆಳವಣಿಗೆಗೆ ಭಕ್ತರ ಸಹಕಾರ ಅತೀ ಮುಖ್ಯವಾದುದು ಎಂದರು.

ವೇದಿಕೆಯಲ್ಲಿ ಪೆರುವಾಜೆ ಶ್ರೀ ಕ್ಷೇತ್ರದ ಪವಿತ್ರಪಾಣಿ ಸುಬ್ರಹ್ಮಣ್ಯ ನಿಡ್ವಣ್ಣಾಯ, ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೇಮಿರಾಜ್‌ ಪಾಂಬಾರ್, ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ, ಬೆಳ್ಳಾರೆ ಗೌರಿಪುರಂ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪೆರುವಾಜೆ ಕುಣಿತ ಭಜನ ತಂಡದ ತರಬೇತುದಾರ ಕಾಣಿಯೂರು ಸದಾನಂದ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.

ಅಂಕಿತಾ ಹಾಗೂ ಅಭಿಜ್ಞಾ ಪ್ರಾರ್ಥಿಸಿ, ವ್ಯವಸ್ಥಾಪನಾ ಸಮಿತಿ ಸದಸ್ಯ ನಾರಾಯಣ ಕೊಂಡೆಪ್ಪಾಡಿ ಸ್ವಾಗತಿಸಿದರು. ವ್ಯವಸ್ಥಾಪನಾ ಸಮಿತಿ‌ ಸದಸ್ಯ ಜಯಪ್ರಕಾಶ್ ರೈ ಪೆರುವಾಜೆ ವಂದಿಸಿದರು. ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು.

*ಮನರಂಜಿಸಿದ ಕುಣಿತ ಭಜನೆ,‌ಸಾಂಸ್ಕೃತಿಕ ಕಾರ್ಯಕ್ರಮಗಳು*
ಸಂಜೆ ಶ್ರೀ ಜಲದುರ್ಗಾದೇವಿ ಕುಣಿತ ಭಜನಾ ಮಂಡಳಿ ಪೆರುವಾಜೆ ವತಿಯಿಂದ ಕುಣಿತ ಭಜನೆ, ವೈಷ್ಣವೀ ನಾಟ್ಯಾಲಯ(ರಿ) ಪುತ್ತೂರು ಇದರ ಬೆಳ್ಳಾರೆ ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯಾರ್ಪಣಂ ಪ್ರದರ್ಶನಗೊಂಡಿತು.
ಸಾವಿರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಮನರಂಜಿಸಿತ್ತು.