ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ ಪ್ರದೇಶಕ್ಕೆ ಸಚಿವ ಎಸ್.ಅಂಗಾರ ಕೊಡುಗೆ ಏನು?

0

ಅಸೆಂಬ್ಲಿಯಲ್ಲಿ ಮಾತನಾಡಿದ್ದು ಯು.ಟಿ.ಖಾದರ್ – ಅಂಗಾರರು ಯಾಕೆ ಸುಮ್ಮನಿದ್ದರು

ಕೊಡಿಯಾಲಬೈಲು – ದುಗಲಡ್ಕ ರಸ್ತೆ ಗುದ್ದಲಿಪೂಜೆಗೆ ಸೀಮಿತವೇ?

ಶಾಸಕ ಅಂಗಾರ, ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಕೊಲ್ಲಮೊಗ್ರ, ಹರಿಹರ, ಕಲ್ಲುಗುಂಡಿ, ಸಂಪಾಜೆ ಭಾಗದಲ್ಲಿ ಪ್ರಾಕೃತಿಕ ವಿಕೋಪದಿಂದ ಆಗಿರುವ ಹಾನಿಗಳಿಗೆ ಮತ್ತು ಆ ಊರನ್ನು ಮತ್ತೆ ಕಟ್ಟಿಕೊಡುವುದಕ್ಕೆ ಇಲ್ಲಿಯ ಶಾಸಕರು, ಈಗ ಸಚಿವರಾಗಿರುವ ಅಂಗಾರರು ಏನು ಮಾಡಿದ್ದಾರೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಈ ಭಾಗದಲ್ಲಿ ಇಷ್ಟೊಂದು ಹಾನಿಗೊಂಡಿದ್ದರೂ ಇಲ್ಲಿಯ ಪರಿಸ್ಥಿತಿ ಮತ್ತು ಪರಿಹಾರ ದ ಪ್ಯಾಕೇಜ್‌ಗಾಗಿ ಅಂಗಾರರು ಅಸೆಂಬ್ಲಿಯಲ್ಲಿ ಒಂದು ಮಾತನ್ನೂ ಆಡಿಲ್ಲ – ಬದಲಾಗಿ ಇಲ್ಲಿಯ ಸಮಸ್ಯೆಯನ್ನು ಉಳ್ಳಾಲ ಶಾಸಕ ಯು.ಟಿ.ಖಾದರ್‌ರವರು ಪ್ರಸ್ತಾಪಿಸಿದ್ದಾರೆ. ಶಾಸಕರು ಸುಳ್ಯಕ್ಕೆ ಪರಿಹಾರ ತರುವಲ್ಲಿ ಕೆಲಸವೇ ಮಾಡುತ್ತಿಲ್ಲ ಎಂದು ಕೆ.ಪಿ.ಸಿ.ಸಿ. ವಕ್ತಾರ ಭರತ್ ಮುಂಡೋಡಿ ಹೇಳಿದ್ದಾರೆ.

ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಪ್ರಾಕೃತಿಕ ವಿಕೋಪದಿಂದ ಕೊಲ್ಲಮೊಗ್ರ, ಹರಿಹರ, ಕಲ್ಮಕಾರು, ಸಂಪಾಜೆ ಭಾಗದಲ್ಲಿ ಹಲವು ಹಾನಿಗಳು ಸಂಭವಿಸಿದೆ. ಕೊಲ್ಲಮೊಗ್ರದ ಕಡಂಬಳ ಎಂಬಲ್ಲಿ ಪ್ರಾಕೃತಿಕ ರಸ್ತೆ ಸಂಪರ್ಕವೇ ಕಡಿತವಾಗಿತ್ತು. ಗ್ರಾ.ಪಂ., ತಾ.ಪಂ. ಜಿ.ಪಂ., ಶಾಸಕರು ಸರಕಾರ ಯಾರೂ ಅಲ್ಲಿಗೆ ಭೇಟಿ ನೀಡಿ ಪರಿಹಾರ ಕಾರ್ಯ ಮಾಡಿಲ್ಲ. ಶಾಸಕರಾದಿಯಾಗಿ ಎಲ್ಲರಿಗೂ ಆ ಭಾಗದ ಜನರು ಮನವಿ ಮಾಡಿಕೊಂಡಿದ್ದರೂ ಸ್ಪಂದನೆ ದೊರೆತಿರಲಿಲ್ಲ. ಈ ಸಮಸ್ಯೆ ನಮ್ಮ ಕಾರ್ಯಕರ್ತರಿಂದ ತಿಳಿದು ನಾನು ಮತ್ತು ಕೆ.ಪಿ.ಸಿ.ಸಿ. ಸಂಯೋಜಕ ನಂದಕುಮಾರ್‌ರವರು ಹೋಗಿ ಜನರ ಸಮಸ್ಯೆ ಆಲಿಸಿ, ತಾತ್ಕಾಲಿಕ ಪರಿಹಾರ ಕಾರ್ಯಕ್ಕೆ ಮುಂದಾದೆವು. ಘಟನೆ ನಡೆದು ೫೭ ದಿನಗಳವರೆಗೆ ಸುಮ್ಮನಿದ್ದ ಸಚಿವ ಅಂಗಾರರು ನಾವು ಹೋದದ್ದು ಗೊತ್ತಾಗಿ ಮರು ದಿನ ಬೆಳಗ್ಗೆಯೇ ಅಲ್ಲಿಗೆ ಮೋರಿ ಕೊಂಡು ಹೋಗಿ ಹಾಕಿದ್ದಾರೆ. ಅಲ್ಲದೆ ಕಾಂಗ್ರೆಸ್ ನಾಟಕ ಆಡಿದೆ, ರಾಜಕೀಯ ಮಾಡುತ್ತಿದೆ ಎಂದು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ನಮಗೆ ನಿಜವಾಗಿಯೂ ದುಃಖ ಆಗ್ತಿದೆ. ಯಾಕೆಂದರೆ ಸುಳ್ಯ ಕ್ಷೇತ್ರದಲ್ಲಿ ಪಾಕೃತಿಕ ವಿಕೋಪದಿಂದ ಹಾನಿಗೊಂಡ ಪ್ರದೇಶದ ಪರಿಹಾರಕ್ಕಾಗಿ ಸಚಿವ ಅಂಗಾರರು ಮಾತನಾಡಿ ಕನಿಷ್ಠ ೧ ಸಾವಿರ ಕೋಟಿ ರೂಪಾಯಿಯನ್ನಾದರೂ ತಂದು ಸೇತುವೆ, ರಸ್ತೆ ಸೇರಿ ಊರು ಕಟ್ಟುವ ಕೆಲಸ ಮಾಡಬೇಕಿತ್ತು. ಆದರೆ ಅವರು ಸುಮ್ಮನೆ ಕುಳಿತಿದ್ದಾರೆ. ಬಿಜೆಪಿಗರು ಅಭಿವೃದ್ಧಿ ಕೆಲಸ ಮಾಡುವುದೂ ಇಲ್ಲ. ನಾವು ಮಾಡಲು ಹೋದರೆ ಇದು ನಾಟಕ ಎಂದು ಹೇಳುತ್ತಿದ್ದಾರೆ ಎಂದ ಭರತ್ ಮುಂಡೋಡಿಯವರು, ಅಲ್ಲಿ ನಡೆದ ಪ್ರಾಕೃತಿಕ ವಿಕೋಪಗಳ ಸಮಸ್ಯೆಯ ಕುರಿತು ಯು.ಟಿ.ಖಾದರ್ ಅಸೆಂಬ್ಲಿಯಲ್ಲಿ ಮಾತನಾಡಿದ್ದಾರೆ ಹೊರತು ಅಂಗಾರರು ಬಾಯಿ ಬಿಚ್ಚಿಲ್ಲ. ಅವರಿಗೆ ಜನಪರ ಚಿಂತನೆಯೇ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಹೇಳಿಕೆ ಬೇಡ – ಪರಿಹಾರ ಕೊಡಿ
ಬಿಜೆಪಿಗರು ಕೆಲಸ ಮಾಡುವುದಿಲ್ಲ. ಭಾವನಾತ್ಮಕ ಹೇಳಿಕೆಯನ್ನಷ್ಟೆ ಕೊಡುತ್ತಿದ್ದಾರೆ. ಅಂಗಾರರೇ ಪ್ರಾಕೃತಿಕ ವಿಕೋಪದಿಂದ ಮನೆ, ಅಂಗಡಿಗಳಿಗೆ ಹಾನಿಯಾಗಿವೆ. ಸರಕಾರದಿಂದ ಏನು ಪರಿಹಾರ ಕೊಟ್ಟಿರಿ? ನಿಮ್ಮ ಹೇಳಿಕೆ ನಮಗೆ ಬೇಡ. ಬದಲಾಗಿ ನೊಂದವರಿಗೆ ಪರಿಹಾರಕೊಡಿಸಿ. ಅಧಿಕಾರಿಯವರಲ್ಲಿ ಕೇಳಿದರೆ ಸರ್ವೆ ಆಗಿದೆ ಎಂದಷ್ಟೆ ಹೇಳುತ್ತಾರೆ. ಹಾಗಾದರೆ ಆ ಸರ್ವೆಯಲ್ಲಿ ಬಂದವರಿಗೆ ಪರಿಹಾರ ಇಲ್ಲವೇ? ಎಂದು ಅವರು ಪ್ರಶ್ನಿಸಿದರು.

ಯುಪಿಎ ಎದುರು ಪ್ರತಿಭಟಿಸಿದ ನೀವು ಈಗ ಏಕೆ ಮೌನ ?
ಹಲವು ವರ್ಷದಿಂದ ಹಿಂದೆ ಡೀ ನೋಟಿಫಿಕೇಶನ್ ಆಗಿ ಆ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬರುವ ರೈತರಿಗೆ ಈಗ ಅರಣ್ಯ ಇಲಾಖೆ ನೋಟೀಸು ಮಾಡುತ್ತಿದೆ. ಕಸ್ತೂರಿ ರಂಗನ್ ವಿಚಾರದಲ್ಲಿಯೂ ಇವರು ಏನೂ ಮಾಡಿಲ್ಲ. ಹಿಂದೆ ಯುಪಿಎ ಸರಕಾರ ಇದ್ದಾಗ ಬಿಜೆಪಿಗರು ಪ್ರತಿಭಟನೆ ಮಾಡಿದ್ದರು ಈಗ ಏಕೆ ಮೌನವಾಗಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಕೊಳೆ ರೋಗ , ಅಡಿಕೆ ಹಳದಿ
ತಾಲೂಕಿನಲ್ಲಿ ವಿಪರೀತವಾಗಿ ಅಡಿಕೆ ಹಳದಿ ರೋಗ ಇದೆ. ಈ ಬಾರಿ ಅದು ಸಾಕೆಂನ್ನದಂತೆ ಕೊಳೆ ರೋಗವೂ ವ್ಯಾಪಕವಿದೆ. ಕೃಷಿಕರಿಗೆ ಸರಕಾರದಿಂದ ಏನು ಪರಿಹಾರ ಕೊಡಿಸಿದಿರಿ? ಬಜೆಟ್‌ನಲ್ಲಿ ೨೫ ರೂ ಕೋಟಿ ಘೋಷಣೆ ಮಾಡಿದ್ದು ಎಲ್ಲಿಗೆ ಹೋಯಿತು? ಎಂದು ಪ್ರಶ್ನಿದರು.
ಡಿ.ವಿ.ಸದಾನಂದ ಗೌಡರು ಇತ್ತೀಚೆಗೆ ಸುಳ್ಯಕ್ಕೆ ಬಂದಿದ್ದಾಗ ಹಳದಿ ರೋಗ ಪರಿಹಾರ ಮಾಡದಿರುವ ತಮ್ಮ ವೈಫಲ್ಯವನ್ನು ಈಗಲಾದರೂ ಒಪ್ಪಿಕೊಂಡರಲ್ಲ ಅವರು ಸತ್ಯ ಒಪ್ಪಿಕೊಂಡಿರುವುದಕ್ಕೆ ಅವರನ್ನು ಅಭಿನಂದಿಸುತ್ತೇವೆ ಎಂದು ಭರತ್ ಮುಂಡೋಡಿ ಹೇಳಿದರು.

ಕೆಂಡಾಮಂಡಲ ಆಗುವುದು ಬಿಟ್ಟು ಕೆಲಸ ಮಾಡಿ
ಸುಳ್ಯ ನಗರ ಪಂಚಾಯತ್ ನಲ್ಲಿಯೂ ಯಾವುದೇ ಕೆಲಸಗಳು ಆಗುತ್ತಿಲ್ಲ. ನಗರದ ಕಸದ ಸಮಸ್ಯೆಯ ಕುರಿತು ಚಿತ್ರನಟ ಅನಿರುದ್ಧ್ ಜಾಗೃತಿಯ ಹೇಳಿಕೆ ನೀಡಿದರೆ ಇಲ್ಲಿಯ ಪಂಚಾಯತ್ ಅಧ್ಯಕ್ಷರು ಕೆಂಡಾ ಮಂಡಲ ಆಗುತ್ತಾರೆ. ರಸ್ತೆಯಲ್ಲಿ ಹೊಂಡ ಇದೆ. ಅಪಾಯ ಆಗುತ್ತಿದೆ ಮುಚ್ಚಿ ಎಂದು ತ್ರಿಶೂಲ್ ಎಂಬ ಯುವಕ ಸಲಹೆ ನೀಡಿದರೆ ಅವರಿಗೆ ಇಲ್ಲಿಯ ಅಧ್ಯಕ್ಷರು ಕಮೆಂಟ್ ಹಾಕುತ್ತಾರೆ. ಇದು ಆಡಳಿತವೇ? ಎಂದು ಹೇಳಿದ ಭರತ್ ಮುಂಡೋಡಿಯವರು, ಸುಳ್ಯದ ತಾಲೂಕು ಕ್ರೀಡಾಂಗಣದ ಅವ್ಯವಸ್ಥೆ ಯನ್ನು ಇನ್ನೂ ಇವರಿಂದ ಸರಿ ಮಾಡಲು ಆಗಿಲ್ಲ. ಅಲ್ಲಿಗೆ ತಡೆಗೋಡೆ ಆಗಬೇಕೆಂದು ಸ್ಥಳೀಯರು ಸೇರಿದಂತೆ ಎಲ್ಲರೂ ಹೇಳುತ್ತಾರೆ. ಆದರೆ ತಡೆಗೋಡೆ ಮಾಡುವುದಕ್ಕೆ ಶಾಸಕ ಅಂಗಾರರೇ ವಿರೋಧವೆಂದು ಅಧಿಕಾರಿಯೊಬ್ಬರು ಹೇಳುತ್ತಿದ್ದಾರೆ ಎಂದು ಅವರು ಹೇಳಿದರು.

ಕೊಡಿಯಾಲಬೈಲು – ದುಗಲಡ್ಕ ರಸ್ತೆ ಗುದ್ದಲಿಪೂಜೆಗೆ ಸೀಮಿತವೇ?
ಸುಳ್ಯದ ಪ್ರಮುಖರ ರಸ್ತೆಯಲ್ಲೊಂದಾದ ಜಟ್ಟಿಪಳ್ಳ – ಕೊಡಿಯಾಲಬೈಲು – ದುಗಲಡ್ಕ ರಸ್ತೆಗೆ ಗೆ ಅನುದಾನ ಇದೆ ಒಂದು ವಾರದಲ್ಲಿ ರಸ್ತೆ ಕೆಲಸ ಮಾಡುತ್ತೇವೆ ಎಂದು ಶಾಸಕರು, ಬಿಜೆಪಿಯವರು ಭರವಸೆ ನೀಡಿದ್ದರು. ಭರವಸೆ ನೀಡಿ ತಿಂಗಳಾಗುತ್ತಾ ಬಂದರೂ ಅಲ್ಲಿ ಕೆಲಸ ಆರಂಭಿಸಿಲ್ಲ. ಅವರು ಭರವಸೆ ಮಾತ್ರ ನೀಡುತ್ತಾರೆ. ಕೆಲಸ ಮಾಡಲು ಗೊತ್ತಿಲ್ಲ ಎಂದ ಭರತ್ ಮುಂಡೋಡಿ, ಶಾಸಕ ಅಂಗಾರರು ಸಚಿವರಾದ ಆರಂಭದ ದಿನದಲ್ಲಿ ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಭಾಗದ ರಸ್ತೆಯ ಅಭಿವೃದ್ಧಿಗೆಂದು ಗುದ್ದಲಿಪೂಜೆ ನೆರವೇರಿಸಿದರು. ಇದು ವರೆಗೆ ಆ ರಸ್ತೆ ಅಭಿವೃದ್ಧಿ ಕೆಲಸ ಆಗಲೇ ಇಲ್ಲ. ಇತ್ತೀಚೆಗೆ ಗ್ರಾಮ ಸಭೆಯಲ್ಲಿ ಈ ಕುರಿತು ನಾನು ಪ್ರಶ್ನಿಸಿದಾಗ ಸಭೆಗೆ ಬಂದಿದ್ದ ಇಂಜಿನಿಯರ್ ಆ ರಸ್ತೆಗೆ ಅನುದಾನವೇ ಇಲ್ಲ ಸರ್ ಎಂದು ನನಗೆ ಉತ್ತರ ನೀಡಿದ್ದರು. ಶಾಸಕ ಅಂಗಾರರು ಮತ್ತು ಬಿಜೆಪಿಗರು ಜನರನ್ನು ಮೋಸ ಮಾಡುತ್ತಾರೆಯೇ ಹೊರತು ಅಭಿವೃದ್ಧಿಯ ಚಿಂತನೆ ಇಲ್ಲ. ಇದೆಲ್ಲ ನಮ್ಮ ಎದುರಿರುವ ನಿದರ್ಶನಗಳು ಎಂದು ಭರತ್ ಮುಂಡೋಡಿ ಹೇಳಿದರಲ್ಲದೆ, ಇನ್ನೂ ಕೆಲವೇ ತಿಂಗಳುಗಳಲ್ಲಿ ಚುನಾವಣೆ ಬರುತ್ತಿದೆ. ಬಿಜೆಪಿಗರು ಮತ್ತೆ ಭಾವನಾತ್ಮಕ ವಿಷಯವನ್ನಿಟ್ಟು ಜನರ ಮುಂದೆ ಹೋಗುತ್ತಾರೆ. ಆದರೆ ಕಾಂಗ್ರೆಸ್ ಅಭಿವೃದ್ಧಿಯ ಚಿಂತನೆ ಯನ್ನು ಜನರ ಮುಂದಿಡಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠೀಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್, ಪ್ರಮುಖರಾದ ಪಿ.ಎಸ್.ಗಂಗಾಧರ್, ಮಹಮ್ಮದ್ ಕುಂಞಿ ಗೂನಡ್ಕ, ಸಚಿನ್ ಶೆಟ್ಟಿ ಪೆರುವಾಜೆ, ಸುರೇಶ್ ಎಂ.ಹೆಚ್., ಡೇವಿಡ್ ಧೀರಾ ಕ್ರಾಸ್ತ, ಸದಾನಂದ ಮಾವಜಿ, ಭವಾನಿಶಂಕರ ಕಲ್ಮಡ್ಕ, ಶಶಿಧರ್ ಎಂ.ಜೆ. ಇದ್ದರು.