ಅ. 2 ರಿಂದ 10 ಸುಳ್ಯ ಶಾರದಾಂಬಾ -ದಸರಾ ಉತ್ಸವ

0

ಉತ್ಸವದ ಯಶಸ್ಸಿಗೆ ಸಹಕರಿಸುವಂತೆ ಸಚಿವರ ವಿನಂತಿ

ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್ ಸುಳ್ಯ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ ಮತ್ತು ದಸರ ಉತ್ಸವ ಸಮಿತಿ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ 51 ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ – ಸುಳ್ಯ ದಸರಾ ಅ. 2ರಿಂದ ಅ. 1೦ರವರೆಗೆ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಶ್ರೀ ಶಾರದಾಂಬ ಕಲಾ ವೇದಿಕೆಯಲ್ಲಿ ವಿಜೃಂಭಣೆಯಿಂದ ನಡೆಯಲಿದ್ದು, ಕಾರ್ಯಕ್ರಮದ ಯಶಸ್ಸಿಗೆ ಎಲ್ಲಾ ನಾಗರಿಕರು ಸಹಕರಿಸಬೇಕೆಂದು ಎಂದು ದಸರಾ ಉತ್ಸವ ಸಮಿತಿ ಅಧ್ಯಕ್ಷ ಹಾಗೂ ಸಚಿವ ಎಸ್.ಅಂಗಾರ ಹೇಳಿದರು.

 

ಅವರು ಇಂದು ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರಣೆ ನೀಡಿದರು. ಕಳೆದ ಕೊರೋನಾ ಕಾಲದಲ್ಲಿ 2 ವರ್ಷಗಳಿಂದ ಶಾರದಾಂಬೋತ್ಸವವನ್ನು ವಿಜೃಂಭಣೆಯಿಂದ ನಡೆಸಲು ಸಾಧ್ಯವಾಗಲಿಲ್ಲ. ಈ ಬಾರಿ ಮತ್ತೆ ವಿಜೃಂಭಣೆಯ ಶಾರದಾಂಬೋತ್ಸವಕ್ಕೆ ನಾವೆಲ್ಲಾ ಸಿದ್ಧತೆಯನ್ನು ನಡೆಸಿಕೊಂಡಿದ್ದೇವೆ. ಕಾರ್ಯಕ್ರಮದಲ್ಲಿ ಪ್ರತಿದಿನ ವೈಧಿಕ, ಧಾರ್ಮಿಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 9 ದಿನಗಳ ಕಾಲ ನಡೆಯಲಿರುವ ಈ ಉತ್ಸವದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸುನಿಲ್‌ಕುಮಾರ್‌ರವರು ಭಾಗವಹಿಸಲಿದ್ದಾರೆ. ಉತ್ಸವದ ಅಂತಿಮ ದಿನ ವೈಭವದ ಶೋಭಾಯಾತ್ರೆ ನಡೆಯಲಿದ್ದು, ಹಲವು ಸಂಘ ಸಂಸ್ಥೆಗಳ ವತಿಯಿಂದ ಆಕರ್ಷಕವಾದ ಟ್ಯಾಬ್ಲೋ ಮತ್ತು ಹಲವು ಆಕರ್ಷಣೆಗಳು ನಡೆಯಲಿದೆ.
ರಾಜ್ಯದ ಇತರ ಕಡೆಗಳಲ್ಲಿ ನಡೆಯುವ ದಸರಾ ಉತ್ಸವಗಳಿಗೆ ಸರಕಾರದ ಅನುದಾನ ಕೊಡುವಂತೆ ಸುಳ್ಯದ ದಸರಾ ಉತ್ಸವಕ್ಕೂ ಸರಕಾರದಿಂದ ಸಹಾಯಧನ ಕೊಟ್ಟು, ಕಾರ್ಯಕ್ರಮವು ಇನ್ನಷ್ಟು ವಿಜೃಂಭಣೆಯಿಂದ ನಡೆಸುವಂತೆ ಸಹಕರಿಸಬೇಕೆಂದು ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.

ಶಾರದಾಂಬಾ ದಸರಾ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ನಾರಾಯಣ ಕೇಕಡ್ಕ ಮಾತನಾಡಿ, ೯ ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಎಲ್ಲಾ ನಾಗರಿಕರು, ಸಂಘಸಂಸ್ಥೆಗಳ ಯುವಕರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಶೋಭಾಯಾತ್ರೆಗೆ ಮೆರುಗು ನೀಡಲು ಈಗಾಗಲೇ ಸುಮಾರು 11 ಟ್ಯಾಬ್ಲೋಗಳು ಆಗಮಿಸುವ ನಿರೀಕ್ಷೆ ಇದ್ದು, ಕೊನೆಯ ಹಂತದಲ್ಲಿ ಹೆಚ್ಚಳವಾಗಬಹುದು. ವಿವಿಧ ಸಂಘ ಸಂಸ್ಥೆ ಮತ್ತು ಇಲಾಖೆಗಳ ವತಿಯಿಂದ ಟ್ಯಾಬ್ಲೋ ಮಾಡುವಂತೆ ಸಚಿವರು ಕೂಡಾ ವಿನಂತಿಸಿದ್ದಾರೆ ಎಂದು ಹೇಳಿದರು. ಶಾರದಾಂಬಾ ಸೇವಾ ಸಮಿತಿಯ ಗೌರವ ಸಲಹೆಗಾರರಾದ ಡಾ. ಲೀಲಾಧರ ಡಿ.ವಿ. ಮಾತನಾಡಿ, ಮಕ್ಕಳಲ್ಲಿರುವ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಕಡೆಗಣಿಸಿ ನಮ್ಮ ದೇಶದ ಸಂಸ್ಕೃತಿಯನ್ನು ಬೆಳೆಸಿಕೊಳ್ಳಲು ಇಂತಹ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ಅಗತ್ಯವಾಗಿದೆ ಎಂದರು. ಅಧ್ಯಕ್ಷ ಚಿದಾನಂದ ವಿದ್ಯಾನಗರ, ಗೌರವಾಧ್ಯಕ್ಷ ಗೋಕುಲ್‌ದಾಸ್ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ವಿನಂತಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ನ ಕಾರ್ಯದರ್ಶಿ ಎಂ.ಕೆ. ಸತೀಶ್, ಬೂಡು ರಾಧಾಕೃಷ್ಣ ರೈ, ಸೇವಾ ಸಮಿತಿಯ ಗೌರವ ಸಲಹೆಗಾರರಾದ ಹರೀಶ್ ರೈ ಉಬರಡ್ಕ, ಕಾರ್ಯದರ್ಶಿ ರವಿಚಂದ್ರ ಕೊಡಿಯಾಲಬೈಲು, ಉಪಾಧ್ಯಕ್ಷರಾದ ಕೃಷ್ಣ ಬೆಟ್ಟ, ಜನಾರ್ಧನ ದೋಳ, ಕೋಶಾಧಿಕಾರಿ ಪ್ರದೀಪ್ ಕೆ.ಎನ್. ನಿರ್ದೇಶಕರಾದ ಮಂಜುನಾಥ ಬಳ್ಳಾರಿ, ಟ್ರಸ್ಟ್‌ನ ನಿರ್ದೇಶಕರಾದ ತೀರ್ಥರಾಮ ಜಾಲ್ಸೂರು ಉಪಸ್ಥಿತರಿದ್ದರು.