ಬುದ್ಧಿವಂತ ಕಾಗೆಯಿಂದ ಕಬ್ಬಿಣದ ತಂತಿಯ ಗೂಡು ನಿರ್ಮಾಣ

0

ಆಧುನಿಕತೆಯ ಮೊರೆ ಹೋದ ಕಾಗೆ

ಬಾಯಾರಿದ ಬುದ್ಧಿವಂತ ಕಾಗೆ ಬಗ್ಗೆ ಒಂದೊಂದೇ ಕಲ್ಲನ್ನು ನೀರಿದ್ದ ಮಡಕೆಗೆ ಹಾಕಿ ನೀರು ಮೇಲೇರುವಂತೆ ಮಾಡಿ ನೀರು ಕುಡಿದು ಹಾರಿ ಹೋದ ಕಥೆಯನ್ನು ನಾವು ಬಾಲ್ಯದ ಪಠ್ಯ ಪುಸ್ತಕದಲ್ಲಿ ಕೇಳಿದ್ದೇವೆ. ಇಂತಹ ಕಾಗೆಗಳು ಪರಿಸರ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪಕ್ಷಿಯಾಗಿದೆ. ಸಾಮಾನ್ಯವಾಗಿ ಕಾಗೆಗಳು ಮರದ ಕಡ್ಡಿಗಳಿಂದ ತಮ್ಮ ಗೂಡುಗಳನ್ನು ಕಟ್ಟಿಕೊಳ್ಳುವುದು ನಾವು ನೋಡಿರುವ ಸಹಜವಾದ ಪ್ರಕ್ರಿಯೆ. ಆದರೆ, ಇಲ್ಲೊಂದು ಕಾಗೆ ವಿಶೇಷವಾಗಿ ಗೂಡು ನಿರ್ಮಿಸಿ ಗಮನ ಸೆಳೆದಿದೆ. ಈ ಕಾಗೆ ಸೆಂಟ್ರಿಂಗ್ ಕಾಮಗಾರಿಗೆ ಬಳಸುವ ಸಣ್ಣಸಣ್ಣ ಕಬ್ಬಿಣದ ತಂತಿಗಳಿಂದಲೇ ಸಂಪೂರ್ಣವಾಗಿ ತನ್ನ ಗೂಡನ್ನು ಕಟ್ಟಿರುವುದು ವಿಚಿತ್ರವಾದರೂ ಸತ್ಯ.

ಈ ದೃಶ್ಯ ಕಂಡು ಬಂದಿರುವುದು ಸುಳ್ಯದ ಚೊಕ್ಕಾಡಿಯ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರದ ಆವರಣದಲ್ಲಿ ಬೆಳೆಸಿದ ಒಂದು ಮರದಲ್ಲಿ. ಅಪಾಯಕಾರಿ ಸ್ಥಿತಿಯಲ್ಲಿದ್ದ ಮರದ ಗೆಲ್ಲನ್ನು ತೆರವುಗೊಳಿಸಲು ಮುಂದಾದಾಗ ಈ ಕೊಂಬೆಯಲ್ಲಿ ಕಾಗೆಯ ಎರಡು ಗೂಡುಗಳಿರುವುದು ಕಂಡುಬಂತು. 2 ಗೂಡುಗಳನ್ನೂ ಕಬ್ಬಿಣದ ತಂತಿಗಳಿಂದಲೇ ನಿರ್ಮಿಸಲಾಗಿದೆ. ಇದು ಪರಿಸ್ಥಿತಿಯನ್ನು ತನ್ನ ಅನುಕೂಲಕ್ಕೆ ಹೇಗೆ ಬಳಸಿಕೊಳ್ಳಬೇಕೆಂದು ಕಾಗೆಯೊಂದು ನಾಗರಿಕ ಸಮಾಜಕ್ಕೆ ಹೇಳಿ ಕೊಟ್ಟಂತಿದೆ.