ಉಬರಡ್ಕ ಗ್ರಾ.ಪಂ. ಕ್ರಿಯಾ ಯೋಜನೆ ಬದಲು : ಸಾಮಾಜಿಕ ಜಾಲತಾಣ ವೈರಲ್ ಹಿನ್ನಲೆ

0

 

ಗ್ರಾ.ಪಂ. ವಿಶೇಷ ಸಾಮಾನ್ಯ ಸಭೆ ಸಬೆಯಲ್ಲಿ ಪಂ.ಸದಸ್ಯ ಅನಿಲ್ ಬಳ್ಳಡ್ಕರಿಗೆ ತರಾಟೆ

ಅನಿಲ್ ತಪ್ಪೊಪ್ಪಿಕೊಳ್ಳದಿದ್ದರೆ ಪಂಚಾಯತ್ ಸಭೆಯಲ್ಲಿ ಭಾಗವಹಿಸದಿರಲು ಸದಸ್ಯರ ನಿರ್ಧಾರ
ಉಬರಡ್ಕ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಆದ ಕ್ರಿಯಾ ಯೋಜನೆಯನ್ನು ಬದಲಾಯಿಸಲಾಗಿದೆ. ತನ್ನ ವಾರ್ಡ್‌ನ ಅನುದಾನವನ್ನು ತನ್ನ ಅರಿವಿಗೆ ಬಾರದೇ ಕಡಿತಮಾಡಲಾಗಿದೆ. ಗ್ರಾ.ಪಂ. ನಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಗ್ರಾ.ಪಂ. ಸದಸ್ಯ ಅನಿಲ್ ಬಳ್ಳಡ್ಕರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವಿಚಾರಕ್ಕೆ ಸಂಬಂಧಿಸಿ ಪಂಚಾಯತ್ ಸದಸ್ಯರು ವಿಶೇಷ ಸಭೆ ನಡೆಸಿ ಸದಸ್ಯ ಅನಿಲ್ ಬಳ್ಳಡ್ಕರನ್ನು ತರಾಟೆಗೆತ್ತಿಕೊಂಡ ಘಟನೆ ವರದಿಯಾಗಿದೆ.
ಎರಡು ವಾರಗಳ ಹಿಂದೆ ಉಬರಡ್ಕ ಗ್ರಾ.ಪಂ. ನಲ್ಲಿ ಕ್ರಿಯಾ ಯೋಜನೆ ಬದಲು, ಹಾಗೂ ಅವ್ಯವಹಾರದ ಶಂಕೆ ವ್ಯಕ್ತ ಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಬರಹವೊಂದು ಹರಿದಾಡತೊಡಗಿತು. ಇದನ್ನು ಪಂಚಾಯತ್ ಸದಸ್ಯ ಅನಿಲ್ ಬಳ್ಳಡ್ಕರು ಕೆಲ ಗ್ರೂಪ್‌ಗಳಿಗೆ ಶೇರ್ ಮಾಡಿ ದ್ದರು. ಈ ವಿಚಾರ ಗ್ರಾಮದಲ್ಲಿ ಚರ್ಚೆಯ ವಿಷಯವಾಗಿತ್ತಲ್ಲದೆ ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿಗಳಿಗೆ ಮುಜು ಗರವುಮಟು ಮಾಡಿತ್ತು.
ಪಂಚಾಯತ್ ಅಧ್ಯಕ್ಷೆ ಚಿತ್ರಕುಮಾರಿ ಯವರು ಈ ವಿಚಾರ ಚರ್ಚಿಸಲೆಂದು ಸೆ.೨೦ರಂದು ವಿಶೇಷ ಸಾಮಾನ್ಯ ಸಭೆ ಕರೆದಿದ್ದರು. ಪಂಚಾಯತ್ ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲ, ಸದಸ್ಯರುಗಳಾದ ಹರೀಶ್ ಉಬರಡ್ಕ, ಪೂರ್ಣಿಮಾ ಸೂಂತೋಡು, ದೇವಕಿ ಕುದ್ಪಾಜೆ, ಸಂದೀಪ್ ಕುತ್ತಮೊಟ್ಟೆ, ವಸಂತಿ ಕಲ್ಚಾರು, ಭವಾನಿ ಮೂರ್ಜೆ ಹಾಗೂ ಅನಿಲ್ ಬಳ್ಳಡ್ಕ ಸಭೆಯಲ್ಲಿದ್ದರು.
ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲರು ಹಾಗೂ ಮಾಜಿ ಅಧ್ಯಕ್ಷ ಹರೀಶ್ ರೈಯವರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ವಿಚಾರದ ಕುರಿತು ಅನಿಲ್ ರನ್ನು ತೀವ್ರ ತರಾಟೆಗೆತ್ತಿಕೊಂಡರೆಂದೂ, ಅನಿಲ್ ರವರು ಕ್ರಿಯಾ ಯೋಜನೆ ಬದಲಾಗಿರುವುದನ್ನು ಪ್ರಶ್ನಿಸಿದರೆನ್ನಲಾಗಿದೆ. ಆಗ ಪಿಡಿಒ ರವರು ಕ್ರಿಯಾ ಯೋಜನೆ ತಯಾರಿಕೆ ಸಂದರ್ಭದಲ್ಲಿ ಮಾರ್ಗಸೂಚಿಯಂತೆ ನೈರ್ಮಲ್ಯಕ್ಕಾಗಿ ಕಾದಿರುವ ಅನುದಾನದ ಪೈಕಿ ರೂ. ೫೦ ಸಾವಿರ ಪಂಚಾಯತ್ ಸ್ವಚ್ಛತಾಗಾರ ವೇತನ ಪಾವತಿಗಾಗಿ ಅನುದಾನ ಹಂಚಿಕೆಯಲ್ಲಿ ಕಾದಿರಿಸಲು ಬಿಟ್ಟಿರುವ ವಿಚಾರವನ್ನು ಸಭೆಯ ಮುಂದಿಟ್ಟರು. ಈ ವಿಚಾರವನ್ನು ಪಂಚಾಯತ್‌ನಲ್ಲಿ ವಿಚಾರಿಸದೇ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟು ಜನರಿಗೆ ತಪ್ಪು ಸಂದೇಶ ರವಾನಿಸಿರುವ ಅನಿಲ್ ಬಳ್ಳಡ್ಕ ಕ್ರಮ ಸರಿಯಲ್ಲ ಎಂದು ಹರೀಶ್ ಉಬರಡ್ಕ ಹಾಗೂ ಪ್ರಶಾಂತರು ಹೇಳಿದರೆನ್ನಲಾಗಿದೆ. ಉಳಿದ ಸದಸ್ಯರು ಕೂಡಾ ಹರೀಶ್ ಮತ್ತು ಪ್ರಶಾಂತರಿಗೆ ಧ್ವನಿಗೂಡಿಸಿ ಮಾತನಾಡಿದರೆಂದು ತಿಳಿದು ಬಂದಿದೆ. ಬಳಿಕ ಅನಿಲ್ ಬಳ್ಳಡ್ಕ ತಮ್ಮ ತಪ್ಪನ್ನು ಒಪ್ಪಿಕೊಂಡು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮದಲ್ಲಿ ಲಿಖಿತ ಮೂಲಕ ಸ್ಪಷ್ಠೀಕರಣ ನೀಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ತಪ್ಪೊಪ್ಪಿಕೊಳ್ಳದ ಅನಿಲ್ : ಸಭೆಯಲ್ಲಿ ಭಾಗವಹಿಸದಿರಲು ಕುರಿತು ಸದಸ್ಯರ ತೀರ್ಮಾನ
ಪಂಚಾಯತ್ ಸಭೆ ನಡೆದು ೧೦ ದಿನಗಳು ಕಳೆದರೂ ಅನಿಲ್ ತಪ್ಪೊಪ್ಪಿಕೊಳ್ಳದೇ ಇರುವುದರಿಂದ ಅಸಮಾಧಾನಗೊಂಡಿರುವ ಪಂಚಾಯತ್ ಸದಸ್ಯರು ‘`ಅನಿಲ್ ಬಳ್ಳಡ್ಕರು ತಪ್ಪೊಪ್ಪಿ ಕೊಂಡು ಅವರ ಹೇಳಿಕೆಯನ್ನು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಿಗೆ ನೀಡಬೇಕು. ಇಲ್ಲವಾದಲ್ಲಿ ಪಂಚಾಯತ್‌ನ ಮುಂದಿನ ಯಾವುದೇ ಸಭೆಗಳಿಗೆ ಭಾಗವಹಿಸುವುದಿಲ್ಲವೆಂದು ಬಿಜೆಪಿ ಬೆಂಬಲಿತ ಸದಸ್ಯರುಗಳಾದ ಪಂಚಾಯತ್ ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲ, ಸದಸ್ಯರುಗಳಾದ ಹರೀಶ್ ಉಬರಡ್ಕ, ಪೂರ್ಣಿಮಾ ಸೂಂತೋಡು, ದೇವಕಿ ಕುದ್ಪಾಜೆ, ಸಂದೀಪ್ ಕುತ್ತಮೊಟ್ಟೆ, ವಸಂತಿ ಕಲ್ಚಾರು ಹಾಗು ಕಾಂಗ್ರೆಸ್ ಬೆಂಬಲಿತ ಸದಸ್ಯೆ ಭವಾನಿ ಮೂರ್ಜೆ ಸಹಿ ಹಾಕಿ ಸುದ್ದಿಗೆ ಹೇಳಿಕೆ ನೀಡಿದ್ದಾರೆ.